ADVERTISEMENT

ನೆಹರೂ ಮೈದಾನದಲ್ಲಿ ತರಕಾರಿ ವಹಿವಾಟು ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 12:21 IST
Last Updated 28 ಮಾರ್ಚ್ 2020, 12:21 IST
ಹಿರಿಯೂರಿನ ನೆಹರೂ ಮೈದಾನದಲ್ಲಿ ಶನಿವಾರ ನಗರಸಭೆ ಸಿಬ್ಬಂದಿ ಹಣ್ಣು–ತರಕಾರಿ–ಹೂವು ಮಾರಾಟ ಮಾಡಲು ವರ್ತಕರಿಗೆ ಬಾಕ್ಸ್ ಮಾರ್ಕಿಂಗ್ ಮಾಡುತ್ತಿರುವುದು
ಹಿರಿಯೂರಿನ ನೆಹರೂ ಮೈದಾನದಲ್ಲಿ ಶನಿವಾರ ನಗರಸಭೆ ಸಿಬ್ಬಂದಿ ಹಣ್ಣು–ತರಕಾರಿ–ಹೂವು ಮಾರಾಟ ಮಾಡಲು ವರ್ತಕರಿಗೆ ಬಾಕ್ಸ್ ಮಾರ್ಕಿಂಗ್ ಮಾಡುತ್ತಿರುವುದು   

ಹಿರಿಯೂರು: ಇಲ್ಲಿನ ನಗರಸಭೆ ಆಡಳಿತ ಕೊರೊನಾ ವೈರಸ್ ಹರಡದಂತೆ ತಡೆಯಲು ತರಕಾರಿ, ಹೂವು, ಹಣ್ಣು ಮಾರಾಟವನ್ನು ಮಾರ್ಚ್ 29ರಿಂದ ನೆಹರೂ ಮಾರುಕಟ್ಟೆ ಆವರಣದಿಂದ ನೆಹರೂ ಮೈದಾನಕ್ಕೆ ಸ್ಥಳಾಂತರಿಸಿದೆ.

ನೆಹರೂ ಮಾರುಕಟ್ಟೆ ಸಂಕೀರ್ಣಕ್ಕೆ ಹೊಂದಿಕೊಂಡಿರುವ ತರಕಾರಿ ಮಾರುಕಟ್ಟೆ ರಸ್ತೆ ಕಿರಿದಾಗಿರುವ ಕಾರಣ ಒಮ್ಮೆಲೆ ನೂರಿನ್ನೂರು ಗ್ರಾಹಕರು ಹಣ್ಣು, ತರಕಾರಿ ಕೊಳ್ಳಲು ಬಂದಲ್ಲಿ ಒಬ್ಬರಿಂದ ಒಬ್ಬರಿಗೆ ಕನಿಷ್ಟ ಅಂತರ ಕಾಪಾಡುವುದು ಕಷ್ಟ. ಕೊರೊನಾ ವೈರಸ್ ಹರಡಲು ಸದರಿ ಮಾರುಕಟ್ಟೆ ಆಸ್ಪದ ಮಾಡಿಕೊಡುವಂತಿದೆ ಎಂದು ಬಹಳಷ್ಟು ನಾಗರಿಕರು ಆರೋಪ ಮಾಡಿದ್ದರು.

‘ಶನಿವಾರ ಬೆಳಿಗ್ಗೆ ನಗರಸಭೆ ಪೌರಾಯುಕ್ತ ಶಿವಪ್ರಸಾದ್ ನೇತೃತ್ವದಲ್ಲಿ ನೈಹರೂ ಮೈದಾನದಲ್ಲಿ ಮಾರ್ಕಿಂಗ್ ಮಾಡಿದ್ದು, ಬೆಳಿಗ್ಗೆ 6 ರಿಂದ 9ರ ವರೆಗೆ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಒಬ್ಬ ವರ್ತಕರ ಬಳಿ ಇಬ್ಬರು, ಮೂವರಿಗಿಂತ ಹೆಚ್ಚು ಗ್ರಾಹಕರು ನಿಲ್ಲದಂತೆ ನೀಡಿಕೊಳ್ಳಬೇಕು. ಹಣ್ಣು, ತರಕಾರಿಯನ್ನು ಹೆಚ್ಚಿನ ಬೆಲೆಗೆ ಮಾರಕೂಡದು. ಅಂತಹ ಪ್ರಕರಣ ಕಂಡು ಬಂದರೆ ವಹಿವಾಟು ನಡೆಸಲು ಬಿಡುವುದಿಲ್ಲ’ ಎಂದು ಪೌರಾಯುಕ್ತರು ತಿಳಿಸಿದ್ದಾರೆ.

ADVERTISEMENT

ವಾಣಿವಿಲಾಸ ಜಲಾಶಯದ ನೀರು ಪೋಲು ಸಾಧ್ಯತೆ

‘ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಮಾರ್ಚ್ 6ರಿಂದ ನೀರು ಹರಿಸುತ್ತಿದ್ದು, ಬಹಳಷ್ಟು ರೈತರು ಹಿರಿಯೂರಿನಲ್ಲಿ ವಾಸವಾಗಿದ್ದಾರೆ. ಲಾಕ್ ಡೌನ್ ಕಾರಣಕ್ಕೆ ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ ಎಪ್ಪತ್ತು ಕಣ್ಣಿನ ಸೇತುವೆ ಬಳಿಯ ತೋಟದಲ್ಲಿ ನೀರು ಹಾಯಿಸುತ್ತಿದ್ದ ವ್ಯಕ್ತಿಗೆ ಊಟ ಒಯ್ಯುತ್ತಿದ್ದ ಯುವಕನೊಬ್ಬನಿಗೆ ಪೊಲೀಸರು ಥಳಿಸಿದ್ದು, ರೈತರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ 30 ದಿನಗಳಲ್ಲಿ ಎಲ್ಲ ರೈತರ ತೋಟಗಳಿಗೆ ನೀರು ಹೋಗುವುದು ಕಷ್ಟ’ ಎಂದು ರೈತಸಂಘದ ಕಾರ್ಯದರ್ಶಿ ಸಿ. ಸಿದ್ದರಾಮಣ್ಣ ಹೇಳಿದ್ದಾರೆ.

ಬೇಲಿ ತೆಗೆಸಿದ ಎಸ್ಐ: ನಗರದ ಕೆಎಂ ಕೊಟ್ಟಿಗೆ ಬಡಾವಣೆಯ ರಸ್ತೆಗಳಿಗೆ ಕೆಲವು ಯುವಕರು ಹಾಕಿದ್ದ ಮುಳ್ಳನ್ನು ನಗರಠಾಣೆ ಎಸ್ಐ ಅನುಸೂಯಮ್ಮ ಶನಿವಾರ ನಿವಾಸಿಗಳ ಮನವೊಲಿಸಿ ತೆಗೆಸಿ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.