ಹಿರಿಯೂರು: ‘ಕೆಲಸ ಮಾಡಲು ಆಗದವರು ಎಂಬ ಕಾರಣಕ್ಕೆ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಬೇಡಿ’ ಎಂದು ಪ್ರಾಧ್ಯಾಪಕ ಡಿ. ಧರಣೇಂದ್ರಯ್ಯ ಮನವಿ ಮಾಡಿದರು.
ನಗರದ ನಿವೃತ್ತ ನೌಕರರ ಭವನದಲ್ಲಿ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆ ತಾಲ್ಲೂಕು ಘಟಕ, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ತಾಲ್ಲೂಕು ಘಟಕ ಹಾಗೂ ಏಕನಾಥೇಶ್ವರಿ ಸಂಗೀತ ವಿದ್ಯಾಲಯದ ವತಿಯಿಂದ ಭಾನುವಾರ ಎಸ್ಎಸ್ಎಲ್‌ಸಿಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದಿನ ಮಕ್ಕಳಿಗೆ ಅಪಾರವಾದ ಅಕ್ಷರ ಜ್ಞಾನವಿದೆ. ಉತ್ತಮ ಅಂಕ ಪಡೆಯುವ ಪ್ರತಿಭೆ ಇದೆ. ಇದರ ಜೊತೆಗೆ ವಯಸ್ಕರಾದ ಮೇಲೆ ಹೆತ್ತವರನ್ನು ದೂರ ತಳ್ಳದೆ ಪ್ರೀತಿ, ಮಮತೆ, ವಾತ್ಸಲ್ಯದಿಂದ ನೋಡಿಕೊಳ್ಳುವ ಸಂಸ್ಕಾರವನ್ನು ಮಕ್ಕಳು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ಮಕ್ಕಳ ಸಾಂಸ್ಕೃತಿಕ ಬದುಕಿಗೆ ಚೇತನ ಶಕ್ತಿಯಾಗಿ ತಾಲ್ಲೂಕು ಮಕ್ಕಳ ಸಾಹಿತ್ಯ ವೇದಿಕೆ ನಿಂತಿದೆ. ವಚನ ಗಾಯನ, ರಂಗಗೀತೆ, ಜಾನಪದ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಕಂಠಪಾಠ ಸ್ಪರ್ಧೆ ಒಳಗೊಂಡಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರಯತ್ನವನ್ನು ವೇದಿಕೆ ನಡೆಸಿದೆ’ ಎಂದು ಮಕ್ಕಳ ಸಾಹಿತ್ಯ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ರಂಗಸ್ವಾಮಿ ಸಕ್ಕರ ಹೇಳಿದರು.
ವೇದಿಕೆಯ ಗೌರವಾಧ್ಯಕ್ಷ ಆಲೂರು ಹನುಮಂತರಾಯಪ್ಪ ಮಾತನಾಡಿದರು. ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಜೆ. ನಿಜಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಎಂ. ಬಿ. ಜಯದೇವಮೂರ್ತಿ, ಸಿ.ಆರ್. ಏಕಾಂತಪ್ಪ, ಆರ್. ತಿಪ್ಪೇಸ್ವಾಮಿ, ಎಂ. ರಮೇಶ್ ನಾಯ್ಕ, ಸಿ. ರಾಮಚಂದ್ರಪ್ಪ, ಹರ್ತಿಕೋಟೆ ಮಹಾಸ್ವಾಮಿ, ಕಾಮಣ್ಣ, ಬಿ.ಟಿ. ಶಂಕರ್ ಲಿಂಗಯ್ಯ, ಕೆ. ಗುರುಸಿದ್ದಪ್ಪ, ಬಿ.ಎಂ. ಜನಾರ್ದನ ಶೆಟ್ಟಿ, ಎಂ.ಎಸ್. ಚಂದ್ರವದನ, ಸುಲೋಚನ, ಎಂ.ಬಿ. ನಾಗರತ್ನಮ್ಮ, ಪಿ.ಎಮ್. ತಿಪ್ಪೇಸ್ವಾಮಿ, ಡಿ. ದೇವರಾಜಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.