
ಹಿರಿಯೂರು: ಬಯಲುಸೀಮೆಗೆ ನೀರಾವರಿ ಕಲ್ಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಕಾರಾತ್ಮಕ ಧೋರಣೆ ಖಂಡಿಸಿ ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಬುಧವಾರ ನಗರದ ಗಾಂಧಿ ವೃತ್ತದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದರು.
‘ಹತ್ತು ದಿನಗಳ ಹಿಂದೆಯೇ ಧರಣಿ ನಡೆಸುವುದಾಗಿ ಹೇಳಿಕೆ ನೀಡಿದ್ದೇವೆ. ಆದರೆ, ಯಾವುದೇ ಅಧಿಕಾರಿ ಅಥವಾ ಜನಪ್ರತಿನಿಧಿಗಳು ಸಂಘಟನೆಯ ಪ್ರಮುಖರನ್ನು ಕರೆದು ಮಾತನಾಡಿ, ನೀರಾವರಿ ವಿಚಾರದಲ್ಲಿ ಆಗಿರುವ ಪ್ರಗತಿಯ ಬಗ್ಗೆ ಮಾಹಿತಿ ನೀಡುವ ಸೌಜನ್ಯ ತೋರಿಸಿಲ್ಲ. ಕನಿಷ್ಟ ಧರಣಿ ಸ್ಥಳಕ್ಕೆ ಬಂದು ನಮ್ಮ ಅಹವಾಲು ಆಲಿಸಿಲ್ಲ. ಇದೇ ರೀತಿ ರೈತ ವಿರೋಧಿ ಧೋರಣೆ ಮುಂದುವರಿದಲ್ಲಿ ಫೆ. 10 ರಂದು ಹಿರಿಯೂರು ಬಂದ್, ಫೆ. 12 ರಂದು ಪಾದಯಾತ್ರೆ ಹೊರಟು 13 ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಅಲ್ಲಿಯೇ ಜಿಲ್ಲಾಮಟ್ಟದ ಬೃಹತ್ ಸಮಾವೇಶ ನಡೆಸುತ್ತೇವೆ’ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದರು.
ಪ್ರಮುಖ ಬೇಡಿಕೆಗಳು
ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿರುವ ₹ 5,300 ಕೋಟಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಕಲ್ಲುವಳ್ಳಿ ಭಾಗದ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಬೇಕು. ಐಮಂಗಲ,ಕಸಬಾ ಹೋಬಳಿಯ ಕೆರೆಗಳಿಗೆ ಹಾಗೂ ಧರ್ಮಪುರ ಹೋಬಳಿಯಲ್ಲಿ ಬಿಟ್ಟು ಹೋಗಿರುವ ಕೆರೆಗಳಿಗೂ ನೀರು ತುಂಬಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕು. ಇಲ್ಲದಿದ್ದರೆ ಬೇಡಿಕೆ ಈಡೇರುವವರೆಗೆ ಹಂತಹಂತವಾಗಿ ಹೋರಾಟವನ್ನು ಚುರುಕುಗೊಳಿಸುತ್ತೇವೆ ಎಂದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಳಗಟ್ಟ ವೆಂಕಟೇಶ್, ಆಲೂರು ಸಿದ್ದರಾಮಣ್ಣ, ಅರಳೀಕೆರೆ ರಂಗಸ್ವಾಮಿ, ತಿಪ್ಪೇಸ್ವಾಮಿ, ಸಣ್ಣ ತಿಮ್ಮಣ್ಣ, ಬಳಗಟ್ಟ ತಿಮ್ಮಯ್ಯ, ಮಂಜನಾಯ್ಕ್, ವೀರಣ್ಣಗೌಡ, ವಿರೂಪಾಕ್ಷ, ರಾಮಣ್ಣ, ಮೀಸೆ ಗೌಡಪ್ಪ, ಬಾಲಕೃಷ್ಣ , ಮಂಜುನಾಥ, ಶಿವಣ್ಣ, ಮೃತ್ಯುಂಜಯಪ್ಪ, ಜಯಣ್ಣ, ನಾರಾಯಣಪ್ಪ, ಎಂ.ಆರ್. ಈರಣ್ಣ, ಕೆ. ಟಿ. ರುದ್ರಮನಿ, ಕನ್ಯಪ್ಪ, ಸಣ್ಣೀರಪ್ಪ, ನಿಂಗಪ್ಪ, ರಾಮಕೃಷ್ಣ, ಅಶ್ವತಪ್ಪ, ನಾಗರಾಜಪ್ಪ, ಚಂದ್ರಪ್ಪ, ವೆಂಕಟೇಶ್ ಗುಡಿಹಳ್ಳಿ, ಟಿ. ತಿಮ್ಮಯ್ಯ, ಗೋವಿಂದಪ್ಪ, ಕರಿಯಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.