ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದಿಂದ ಜವನಗೊಂಡನಹಳ್ಳಿ ಭಾಗದ 16 ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಧರಣಿ ಮುಂದುವರಿದಿದ್ದು, ಭಾನುವಾರ ರೈತರು ಬೈಕ್ ರ‍್ಯಾಲಿ ನಡೆಸಿದರು.
ಧರಣಿಗೆ 232ನೇ ದಿನಗಳು ಸಂದಿದ್ದು, ಜವನಗೊಂಡನಹಳ್ಳಿಯಿಂದ ಹಿರಿಯೂರಿನ ಪ್ರವಾಸಿ ಮಂದಿರಕ್ಕೆ ಬೈಕ್ ರ‍್ಯಾಲಿ ನಡೆಸಿದ ರೈತರು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು.
‘ಈ ಭಾಗದಲ್ಲಿ 1000 ಅಡಿ ಕೊರೆಸಿದರೂ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಸಾವಿರಾರು ಎಕರೆ ಅಡಿಕೆ, ತೆಂಗು, ಬಾಳೆ, ದಾಳಿಂಬೆ ಬೆಳೆಗಳು ಒಣಗಿ ಹೋಗಿವೆ. ತುಂಗಭದ್ರಾ ನದಿಯಿಂದ ದಾವಣಗೆರೆ ಮತ್ತು ಚಿತ್ರದುರ್ಗ ತಾಲ್ಲೂಕುಗಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಸಿರಿಗೆರೆ ಶ್ರೀಗಳು ಸಾಕಾರಗೊಳಿಸಿದ್ದಾರೆ. ಅದೇ ರೀತಿ ವಾಣಿವಿಲಾಸ ಜಲಾಶಯದಿಂದ ಜವನಗೊಂಡನಹಳ್ಳಿ ಭಾಗದ ಕೆರೆಗಳನ್ನು ತುಂಬಿಸಿದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ’ ಎಂದು ಮುಖಂಡರು ಹೇಳಿದರು.
‘ವಾಣಿವಿಲಾಸ ಜಲಾಶಯದಿಂದ ಕೆರೆಗಳಿಗೆ ನೀರು ಹರಿಸುವ ಸಂಬಂಧ ಸಣ್ಣ ನೀರಾವರಿ ಸಚಿವ ಭೋಸರಾಜು ಹಾಗೂ ಅಧಿಕಾರಿಗಳೊಂದಿಗೆ ಐದಾರು ಬಾರಿ ಸಭೆ ನಡೆಸಿದ್ದೇವೆ. ಮುಂದಿನ ವಾರ ಮತ್ತೊಮ್ಮೆ ಸಭೆ ಸೇರಲಿದ್ದೇವೆ. ಧರ್ಮಪುರ ಭಾಗದ ಕೆರೆಗಳಿಗೆ ನೀರು ತುಂಬಿಸಲು 28 ಕೋಟಿ, ಜವನಗೊಂಡನಹಳ್ಳಿ ಭಾಗದ ಕೆರೆಗಳಿಗೆ ನೀರು ಹರಿಸಲು ₹ 225 ಕೋಟಿ ಅನುದಾನ ನೀಡಲು ಸಚಿವರು ಸಿದ್ಧರಿದ್ದು, ನೀರನ್ನು ಯಾವ ರೀತಿ ಮರು ಹಂಚಿಕೆ ಮಾಡಬಹುದು ಎಂಬ ಬಗ್ಗೆ ತಜ್ಞರ ಜೊತೆ ಚರ್ಚೆ ನಡೆಸಲಾಗುತ್ತಿದೆ’ ಎಂದು ಸಚಿವರು ತಿಳಿಸಿದರು.
‘ಕೃಷ್ಣ ಮೇಲ್ದಂಡೆ ಯೋಜನೆಯ ‘ಬಿ’ ಸ್ಕೀಂನಲ್ಲಿ ನಮ್ಮ ಭಾಗಕ್ಕೆ ಎಷ್ಟು ನೀರು ಸಿಗಬಹುದು ಎಂದು ಅಂದಾಜು ಮಾಡುತ್ತಿದ್ದೇವೆ. ಮುಂದಿನ ವಾರ ನೀರಿನ ಲಭ್ಯತೆ ಬಗ್ಗೆ ಮತ್ತೊಂದು ಸಭೆ ನಡೆಸುತ್ತೇವೆ. ನೀರು ತುಂಬಿಸುವ ವಿಚಾರದಲ್ಲಿ ತಕ್ಷಣದ ತೀರ್ಮಾನ ಹೊರಬರಲು ಸಾಧ್ಯವಿಲ್ಲ. ರೈತರು ಕಾಯಬೇಕು’ ಎಂದು ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ಅಮೃತೇಶ್ವರಸ್ವಾಮಿ, ರೈತ ಮುಖಂಡರಾದ ಹುಣಿಸೆಹಳ್ಳಿ ಶಶಿಕುಮಾರ್, ತಿಮ್ಮರಾಯಪ್ಪ, ಖಾಲಿದ್ ಹುಸೇನ್, ಮಾರಣ್ಣ, ವೀರೇಶ್, ಭಾಗ್ಯಮ್ಮ, ಸಿ. ನಾಗೇಂದ್ರಪ್ಪ, ಆನೆಸಿದ್ರಿ ಪಾತಲಿಂಗಪ್ಪ, ಓ. ರಾಮಯ್ಯ, ಎಚ್. ಕೇಶವಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.