ADVERTISEMENT

ಹಿರಿಯೂರು: ರಾಶಿರಾಶಿ ಪುಸ್ತಕ ಜೋಡಿಸಲು ಕಪಾಟುಗಳಿಲ್ಲ

ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದ ಗ್ರಂಥಾಲಯದ ಸ್ಥಿತಿ ಅದೋಗತಿಯಾಗಿದೆ.

ಸುವರ್ಣಾ ಬಸವರಾಜ್
Published 6 ಜುಲೈ 2025, 6:08 IST
Last Updated 6 ಜುಲೈ 2025, 6:08 IST
<div class="paragraphs"><p>ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿರುವ ಗ್ರಂಥಾಲಯ ಕೇಂದ್ರ ಕಟ್ಟಡ</p></div>

ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿರುವ ಗ್ರಂಥಾಲಯ ಕೇಂದ್ರ ಕಟ್ಟಡ

   

ಹಿರಿಯೂರು: ತಾಲ್ಲೂಕಿನ ಆದಿವಾಲ ಗ್ರಾಮ ಪಂಚಾಯಿತಿಯ ಗ್ರಂಥಾಲಯದ ಹೆಸರು ‘ಅರಿವು ಕೇಂದ್ರ’. ಆದರೆ, ಜನರಿಗೆ ಅಕ್ಷರದ ಅರಿವು ಮೂಡಿಸಬೇಕಾದ ಆ ಗ್ರಂಥಾಲಯವನ್ನು ಹೇಗೆ ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು ಎಂಬ ಅರಿವಿನ ಕೊರತೆಯು ಓದುಗರನ್ನು ಸಂಕಷ್ಟಕ್ಕೀಡಾಗಿಸಿದೆ.

8 ಅಡಿ ಅಗಲ 8 ಅಡಿ ಉದ್ದದ ಮಳಿಗೆಯೊಂದಕ್ಕೆ ಗ್ರಂಥಾಲಯದ ಫಲಕ ಹಾಕಲಾಗಿದೆ. ಆದರೆ, ಮಳೆ ಬಂದರೆ ಕಟ್ಟಡ ಸೋರುವ ಕಾರಣ ಅಲ್ಲಿನ ರಾಶಿರಾಶಿ ಪುಸ್ತಕಗಳಿಗೆ ರಕ್ಷಣೆಯೇ ಇಲ್ಲ. ಪುಸ್ತಕಗಳು ಹಾಗೂ ನಿಯತಕಾಲಿಕೆಗಳನ್ನು ಹಾಳಾಗದಂತೆ ಸಂರಕ್ಷಿಸಿ ಇಡಲು ಒಂದೇ ಒಂದು ಕಪಾಟು ಇಲ್ಲ.

ADVERTISEMENT

‘ಸಂಜೆಯಾದರೆ ಗ್ರಂಥಾಲಯದ ಒಳಗೆ ಕುಳಿತು ಓದಲು ಬೆಳಕಿನ ವ್ಯವಸ್ಥೆ ಇರುವುದಿಲ್ಲ. ವಿದ್ಯುತ್‌ ಸಂಪರ್ಕ ಇಲ್ಲದಿರುವುದು ಇದಕ್ಕೆ ಕಾರಣ. ಕುಡಿಯುವ ನೀರಿನ ವ್ಯವಸ್ಥೆಯೂ ಅಲ್ಲಿಲ್ಲ. ಆದರೆ, ಪಂಚಾಯಿತಿ ಕಡತದಲ್ಲಿ ಮಾತ್ರ ಗ್ರಂಥಾಲಯ ‘ಅರಿವು ಕೇಂದ್ರ’ ಡಿಜಿಟಲೀಕರಣಗೊಂಡಿದೆ, ಲ್ಯಾಪ್‌ಟಾಪ್ ಇದೆ ಎಂದು ನಮೂದಾಗಿದೆ’ ಎನ್ನುತ್ತಾರೆ ಗ್ರಾಮದ ಸಾಮಾಜಿಕ ಹೋರಾಟಗಾರ ಚಮನ್ ಷರೀಫ್.

ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಡಿಜಿಟಲೀಕರಣ ಮಾಡಲು ಲ್ಯಾಪ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗೆ ಬೇಕಾಗುವ ಪರಿಕರ ಖರೀದಿಗೆ 2023ರ ಜೂನ್‌ನಲ್ಲಿ ಎರಡು ಬಿಲ್‌ಗಳು ಹದಿನೈದನೇ ಹಣಕಾಸು ಯೋಜನೆಯಡಿ ಪಾವತಿಯಾಗಿದೆ.

‘ಗ್ರಂಥಾಲಯವನ್ನು ಅರಿವು ಕೇಂದ್ರ ಮತ್ತು ಮಾಹಿತಿ ಕೇಂದ್ರ
ಎಂದು ಸರ್ಕಾರ ಘೋಷಿಸಿದ್ದು, ಇದರ ಪೂರ್ಣ ಪ್ರಮಾಣದ ಸೌಕರ್ಯಗಳನ್ನು ನೀಡಲು ಗ್ರಾಮ ಪಂಚಾಯಿತಿಗೆ ಹೊಣೆಗಾರಿಕೆ ನೀಡಿದೆ. ಆದರೆ, ಆದಿವಾಲ ಗ್ರಾಮದಲ್ಲಿ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಒಳಗೊಂಡಂತೆ ಯಾವುದೇ ಸೌಲಭ್ಯಗಳಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

ಗ್ರಂಥಾಲಯಕ್ಕೆ ಬೇರೆ ವ್ಯವಸ್ಥೆಗೆ ಆಗ್ರಹ:

ಈಗಿರುವ ಗ್ರಂಥಾಲಯದಲ್ಲಿ ಇಬ್ಬರು ಅಥವಾ ಮೂವರು ಮಾತ್ರ ಕುಳಿತು ಓದಲು ಸಾಧ್ಯವಿದೆ. ಇಷ್ಟು ಚಿಕ್ಕ ಕಟ್ಟಡದಲ್ಲಿ ಗ್ರಂಥಾಲಯ ವ್ಯವಸ್ಥೆ ಮಾಡುವುದು ಕಾಟಾಚಾರಕ್ಕೆ ಎಂದೆನಿಸುತ್ತದೆ. ಕನಿಷ್ಠ 10ರಿಂದ 15 ಜನ ಕುರ್ಚಿಯಲ್ಲಿ ಕುಳಿತು ಓದುವಂತಹ ಕಟ್ಟಡಕ್ಕೆ ಗ್ರಂಥಾಲಯವನ್ನು ಸ್ಥಳಾಂತರ ಮಾಡಬೇಕು ಎಂದು ಗ್ರಾಮದ ಓದುಗರು ಕೋರಿದ್ದಾರೆ.

ದುರಸ್ತಿಗೆ ಕ್ರಿಯಾ ಯೋಜನೆ 

ಗ್ರಂಥಾಲಯ ಕಟ್ಟಡ ದುರಸ್ತಿಗೆ ಗ್ರಾಮ ಪಂಚಾಯಿತಿಯಿಂದ ₹ 1 ಲಕ್ಷಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು ಈ ಬಾರಿಯ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿ ನಡೆಸುತ್ತೇವೆ. ದುರಸ್ತಿ ನಂತರ ಪಂಚಾಯಿತಿ ಕಚೇರಿಯಲ್ಲಿರುವ ಲ್ಯಾಪ್‌ಟಾಪ್‌ಗಳನ್ನು ಗ್ರಂಥಾಲಯದಲ್ಲಿ ಇಡುತ್ತೇವೆ – ಜ್ಯೋತಿ ವೈಜನಾಥ್ ಪಿಡಿಒ ಆದಿವಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.