ADVERTISEMENT

ಹಿರಿಯೂರು ತಾಲ್ಲೂಕಿನಲ್ಲಿ ನಿತ್ಯ 65,000 ಲೀಟರ್ ಹಾಲು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 7:05 IST
Last Updated 6 ಜನವರಿ 2026, 7:05 IST
ಹಿರಿಯೂರಿನ ಅನ್ನಪೂರ್ಣೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ಶಿಮುಲ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಶಿಮುಲ್ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಉದ್ಘಾಟಿಸಿದರು.
ಹಿರಿಯೂರಿನ ಅನ್ನಪೂರ್ಣೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ಶಿಮುಲ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಶಿಮುಲ್ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಉದ್ಘಾಟಿಸಿದರು.   

ಹಿರಿಯೂರು: ತಾಲ್ಲೂಕಿನಲ್ಲಿ 66 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಹಾಲೋದ್ಯಮದಲ್ಲಿ ರೈತರ ಆಸಕ್ತಿ ಹೆಚ್ಚುತ್ತಿರುವ ಕಾರಣ ನಿತ್ಯ 65,000 ಲೀಟರ್ ಗುಣಮಟ್ಟದ ಹಾಲು ಸಂಗ್ರಹಣೆ ಆಗುತ್ತಿದೆ ಎಂದು ಶಿಮುಲ್ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಹೇಳಿದರು.

ನಗರದ ಅನ್ನಪೂರ್ಣೇಶ್ವರಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ಶಿಮುಲ್ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಾಗಿ ಕನಿಷ್ಟ 15 ವರ್ಷ ಸೇವೆ ಸಲ್ಲಿಸಿದವರಿಗೆ ಮಾತ್ರ ಪ್ರಸ್ತುತ ನಿವೃತ್ತಿ ವೇತನ ನೀಡಲಾಗುತ್ತಿದೆ. ಕಾರ್ಯದರ್ಶಿಗಳ ಬೇಡಿಕೆಯಂತೆ ವಯೋಮಿತಿಯನ್ನು 10ರಿಂದ 15 ವರ್ಷಕ್ಕೆ ಬದಲಾಯಿಸುವಂತೆ ಆಡಳಿತ ಮಂಡಳಿ ಸಭೆಯಲ್ಲಿ ವಿಷಯ ಮಂಡಿಸುತ್ತೇನೆ. ನಗರದ ಎಪಿಎಂಸಿ ಆವರಣದಲ್ಲಿರುವ ನಿವೇಶನದಲ್ಲಿ ಪ್ರಸಕ್ತ ಸಾಲಿನಲ್ಲಿಯೇ ನೂತನ ಕಚೇರಿ ನಿರ್ಮಿಸಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

‘ಹೈನುಗಾರಿಕೆ ಕೇವಲ ಉಪಕಸುಬಾಗಿ ಉಳಿದಿಲ್ಲ. ಅದೊಂದು ಪ್ರಮುಖ ಜೀವನಾಧಾರ. ಸಣ್ಣ ಮತ್ತು ಅತಿ ಸಣ್ಣ ರೈತರು ಹೈನುಗಾರಿಕೆಯಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಆದಾಯ ಪಡೆಯಲು ಸಹಕಾರ ಸಂಘಗಳು ವೇದಿಕೆಯಾಗಿವೆ. ತಾಲ್ಲೂಕಿನಲ್ಲಿ 66 ಹಾಲಿನ ಡೇರಿಗಳಿಂದ, ಗುಣಮಟ್ಟದ ಹಾಲು ಉತ್ಪಾದನೆಯಾಗುತ್ತಿದೆ. ಹಾಲು ಉತ್ಪಾದಕರಿಗೆ ಸಮಸ್ಯೆಗಳು ಕಂಡು ಬಂದಲ್ಲಿ ಅವುಗಳನ್ನು ತ್ವರಿತವಾಗಿ ಬಗೆಹರಿಸುತ್ತೇವೆ. ಗುಣಮಟ್ಟದ ಮ್ಯಾಟ್ ವಿತರಣೆಗೆ ಕ್ರಮ ವಹಿಸಲಾಗಿದೆ. ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಹೈನುಗಾರಿಕೆಯನ್ನು ಹೆಚ್ಚು ಲಾಭದಾಯಕ ಮಾಡಿಕೊಳ್ಳಬೇಕು’ ಎಂದು ಹೊಳಲ್ಕೆರೆ ವಿಭಾಗದ ಶಿಮುಲ್ ನಿರ್ದೇಶಕ ಜಿ.ಬಿ. ಶೇಖರಪ್ಪ ಮನವಿ ಮಾಡಿದರು.

ಶಿಮುಲ್ ಹಾಲಿ ನಿರ್ದೇಶಕ ಜಿ.ಪಿ. ರೇವಣಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.