ADVERTISEMENT

ತೇರುಮಲ್ಲೇಶ್ವರಬ್ರಹ್ಮರಥೋತ್ಸವ;ಮುಕ್ತಿಬಾವುಟ ಹರಾಜುಬಾಬ್ತು ಸಚಿವರಿಂದ ಬಾಕಿ ಆರೋಪ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:40 IST
Last Updated 29 ಜನವರಿ 2026, 6:40 IST
ಕೆ.ಅಭಿನಂದನ್.
ಕೆ.ಅಭಿನಂದನ್.   

ಹಿರಿಯೂರು: ‘ನಗರದ ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಜಾತ್ರೆ ಖರ್ಚಿಗೆಂದು ಮುಕ್ತಿಬಾವುಟ ಹರಾಜು ನಡೆಯುತ್ತದೆ. ಹಿಂದಿನ ಮೂರು ವರ್ಷಗಳ ಅಂದಾಜು ₹ 47 ಲಕ್ಷ ಮೊತ್ತವನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಾಕಿ ಉಳಿಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದವರಿಗೆ ದೇವರು– ಧರ್ಮದ ಬಗ್ಗೆ ಇರುವ ಆಸಕ್ತಿಯನ್ನು ತೋರಿಸುತ್ತದೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಅಭಿನಂದನ್ ಆರೋಪಿಸಿದ್ದಾರೆ.

‘ಮುಕ್ತಿ ಬಾವುಟದ ಹರಾಜು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ, ರಾಜಕೀಯ ಪ್ರದರ್ಶನದ ವೇದಿಕೆಯಾಗುತ್ತಿರುವುದು ನೋವಿನ ಸಂಗತಿ. ಕಳೆದ ಮೂರು ವರ್ಷಗಳಲ್ಲಿ ನಿರಂತರವಾಗಿ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಹೆಚ್ಚಿನ ಮೊತ್ತಕ್ಕೆ ಪಡೆದಿರುವುದು ಸಂತಸದ ಸಂಗತಿ ಎನಿಸಿದರೂ ಹರಾಜಿನ ಬಾಬ್ತು ಹಣವನ್ನು ಜಾತ್ರಾ ಸಮಿತಿ ಅಥವಾ ಮುಜರಾಯಿ ಇಲಾಖೆಗೆ ಪಾವತಿಸದೇ ಇರುವುದು ತೇರುಮಲ್ಲೇಶ್ವರಸ್ವಾಮಿಗೆ ಮಾಡಿರುವ ಅಪಚಾರ ಎನ್ನದೆ ಬೇರೆ ಮಾರ್ಗವಿಲ್ಲ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

‘ಈ ವರ್ಷ ಮುಕ್ತಿ ಬಾವುಟವನ್ನು ಕೈಯಲ್ಲಿ ಹಿಡಿಯುವ ನೈತಿಕತೆಯನ್ನು ಸಚಿವರು ಕಳೆದುಕೊಂಡಿದ್ದಾರೆ. ಬಾವುಟ ಹಿಡಿಯಬೇಕೆಂದಿದ್ದರೆ ಮೊದಲು ಹಿಂದಿನ ಬಾಕಿ ಚುಕ್ತಾ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಮುಕ್ತಿ ಬಾವುಟ ಹರಾಜು ಜಾರಿಗೆ ತಂದಿದ್ದೇ ನಾವು: ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಖರ್ಚಿಗೆ ಅವರಿವರನ್ನು ಕೇಳುವುದು ಬೇಡ ಎಂಬ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ನಾಯಕನಹಟ್ಟಿ ಜಾತ್ರೆಯಲ್ಲಿ ನಡೆಯುವ ರೀತಿ ಇಲ್ಲಿಯೂ ಮುಕ್ತಿಬಾವುಟ ಹರಾಜು ಮಾಡುವ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಒಂದೆರಡು ಬಾರಿ ಬಿಟ್ಟರೆ ಬಹುತೇಕ ಬಾರಿ ಅವರೇ ಬಾವುಟವನ್ನು ಹರಾಜಿನಲ್ಲಿ ಪಡೆದಿದ್ದಾರೆ’ ಎಂದು ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಖಾದಿ ರಮೇಶ್ ಪ್ರತಿಕ್ರಿಯಿಸಿದ್ದಾರೆ.

‘ಈ ಬಾರಿ ವಿಶೇಷ ಅಧಿವೇಶನ ಇರುವ ಕಾರಣ ಹಣ ಪಾವತಿ ತಡವಾಗಿದೆ. ಎರಡು ವರ್ಷಗಳ ಬಾಕಿ ಪಾವತಿಸಬೇಕಿದ್ದು, ಒಂದೆರಡು ದಿನದಲ್ಲಿ ಹಣ ಕೊಡುತ್ತೇವೆ. ಈ ವಿಚಾರದಲ್ಲಿ ಬಿಜೆಪಿಯವರಿಂದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.