ADVERTISEMENT

ಹೊಳಲ್ಕೆರೆ: ವಿಶಿಷ್ಟ ‘ಕಂಬಳಿ ಆನೆ’ ಮೆರವಣಿಗೆ!

ಚೀರನಹಳ್ಳಿಯಲ್ಲಿ ವಿಶೇಷ ಆಚರಣ; ಆನೆಯ ಪ್ರತಿರೂಪ ರಚನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 13:35 IST
Last Updated 5 ಡಿಸೆಂಬರ್ 2023, 13:35 IST
ಹೊಳಲ್ಕೆರೆ ತಾಲ್ಲೂಕಿನ ಚೀರನಹಳ್ಳಿಯಲ್ಲಿ ಮಂಗಳವಾರ ‘ಕಂಬಳಿ ಆನೆ’ ಮೆರವಣಿಗೆ ನಡೆಯಿತು
ಹೊಳಲ್ಕೆರೆ ತಾಲ್ಲೂಕಿನ ಚೀರನಹಳ್ಳಿಯಲ್ಲಿ ಮಂಗಳವಾರ ‘ಕಂಬಳಿ ಆನೆ’ ಮೆರವಣಿಗೆ ನಡೆಯಿತು   

ಹೊಳಲ್ಕೆರೆ: ತಾಲ್ಲೂಕಿನ ಚೀರನಹಳ್ಳಿಯಲ್ಲಿ ಮಂಗಳವಾರ ಕಿರು ದೀಪಾವಳಿ ಮತ್ತು ಕಾರ್ತೀಕೋತ್ಸವದ ಅಂಗವಾಗಿ ‘ಕಂಬಳಿ ಆನೆ’ ಮೆರವಣಿಗೆ ಎಂಬ ವಿಶಿಷ್ಟ ಆಚರಣೆ ನಡೆಯಿತು.

ಕಪ್ಪು ಕಂಬಳಿಯಿಂದ ಆನೆಯ ಬೃಹತ್ ಪ್ರತಿಕೃತಿ ರಚಿಸಿ ಅದರ ಮೇಲೆ ವೆಂಕಟೇಶ್ವರ ಸ್ವಾಮಿಯನ್ನು ಕೂರಿಸಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಸುಮಾರು 12 ಅಡಿ ಎತ್ತರದ ಆನೆಯಷ್ಟೇ ದೊಡ್ಡದಾದ ಪ್ರತಿಕೃತಿ ರಚಿಸಲಾಗುತ್ತದೆ. ಮೆರವಣಿಗೆಗೆಂದೇ ಮಾಡಿರುವ ಬಂಡಿಯ ಮೇಲೆ ಆನೆ ಪ್ರತಿಕೃತಿ ರಚಿಸಲಾಗುತ್ತದೆ. ಆನೆ ಮಾದರಿಯ ಹೊಟ್ಟೆಯೊಳಗೆ ಒಣಗಿದ ಬಾಳೆ ಸರಬು ತುಂಬಲಾಗುತ್ತದೆ. ನಂತರ ಕಪ್ಪು ಬಟ್ಟೆಯಿಂದ ಮುಚ್ಚಲಾಗುತ್ತದೆ. ಆನೆಗೆ ಕಣ್ಣುಗಳನ್ನು ಚಿತ್ರಿಸಿ  ಮೈಮೇಲೆ ವಿವಿಧ ಚಿತ್ರಗಳ ಅಲಂಕಾರ ಮಾಡಲಾಗುತ್ತದೆ. ಇದು ನೋಡಲು ಬೃಹತ್ ಆನೆಯಂತೆ ಕಾಣುತ್ತದೆ.

‘ಆನೆ ಪ್ರತಿಕೃತಿಗೆ ಬೃಹತ್ ಹೂವಿನ ಹಾರಗಳನ್ನು ಹಾಕಲಾಗುತ್ತದೆ. ನಂತರ ಆನೆಯ ಮೇಲೆ ದೇವರ ಮೂರ್ತಿ ಕೂರಿಸಿ, ಅದನ್ನು ರಥದ ರೀತಿಯ ಬಂಡಿಯನ್ನು ಗ್ರಾಮದ ತುಂಬ ಭಕ್ತರು ಎಳೆಯುತ್ತಾರೆ’ ಎನ್ನುತ್ತಾರೆ ಆನೆಯನ್ನು ಅಲಂಕರಿಸುವ ರಾಮಚಂದ್ರಪ್ಪ, ವೆಂಕಟೇಶ್ ಹಾಗೂ ಅರ್ಚಕ ರಾಜಪ್ಪ

ADVERTISEMENT

‘ನಮ್ಮೂರಿನಲ್ಲಿ ‘ಕಂಬಳಿ ಆನೆ’ ಮೆರವಣಿಗೆ ಅನಾದಿ ಕಾಲದಿಂದಲೂ ನಡೆಯುತ್ತಿದೆ. ಹಿಂದೆ ಜೀವಂತ ಆನೆಯ ಮೇಲೆ ವೆಂಕಟೇಶ್ವರ ಸ್ವಾಮಿಯ ಮೂರ್ತಿ ಕೂರಿಸಿ ಮೆರವಣಿಗೆ ಮಾಡುತ್ತಿದ್ದರಂತೆ. ಆದರೆ ಬರಬರುತ್ತ ಆನೆಯನ್ನು ಕರೆಸುವುದು ಕಷ್ಟವಾಯಿತಂತೆ. ಆಗ ಸಂಪ್ರದಾಯ ಬಿಡಬಾರದು ಎಂದು ಆನೆಯ ಪ್ರತಿಕೃತಿಯನ್ನು ರಚಿಸಿ ಅದರ ಮೇಲೆ ದೇವರನ್ನು ಕೂರಿಸಿ ಮೆರವಣಿಗೆ ಮಾಡುವುದು ರೂಢಿಯಾಯಿತು’ ಎನ್ನುತ್ತಾರೆ ಗ್ರಾಮದ ರಂಗಯ್ಯ, ಸಿ.ಆರ್.ಗೋವಿಂದಪ್ಪ, ದಯಾನಂದ್.

‘ಹಿಂದೆ ಕಪ್ಪು ಕಂಬಳಿ ಹೆಚ್ಚು ಸಿಗುತ್ತಿದ್ದರಿಂದ ಆನೆಯ ಮಾದರಿ ರಚಿಸಲು ಕಂಬಳಿಯನ್ನು ಬಳಸುತ್ತಿದ್ದರು. ಆದರೆ ಈಗ ಕಂಬಳಿ ಬಳಕೆ ಕಡಿಮೆಯಾಗಿರುವುದರಿಂದ ಕಂಬಳಿ ಜತೆಗೆ ಕಪ್ಪು ಬಟ್ಟೆ ಬಳಸಿ ಆನೆಯ ಮಾದರಿ ರಚಿಸುತ್ತಾರೆ. ಮೊದಲು ಪ್ರತೀ ವರ್ಷ ತೇಗದ ಮರ, ಬಿದಿರಿನ ದೆಬ್ಬೆಗಳಿಂದ ಆನೆಯ ಸೊಂಡಿಲು, ಕಿವಿ, ಕಾಲು, ಬಾಲ ರಚಿಸುತ್ತಿದ್ದರು. ಈಗ ಕಬ್ಬಿಣದ ಸರಳುಗಳಿಂದ ಆನೆಯ ಪ್ರತಿಕೃತಿ ರಚಿಸಿದ್ದು, ಕಪ್ಪು ಬಟ್ಟೆಯಿಂದ ಮುಚ್ಚಿ ಆನೆಯ ರೂಪ ಕೊಡಲಾಗುತ್ತಿದೆ’ ಎನ್ನುತ್ತಾರೆ ಗುಡೇಗೌಡರ ತಿಮ್ಮಪ್ಪ ಹಾಗೂ ತಿಪ್ಪೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.