ಹೊಳಲ್ಕೆರೆ: ಮಲ್ಲಾಡಿಹಳ್ಳಿಯಲ್ಲಿ ಅನಾಥ ಸೇವಾಶ್ರಮ ಸ್ಥಾಪಿಸಿದ ರಾಘವೇಂದ್ರ ಸ್ವಾಮೀಜಿ ಬದುಕಿದ್ದಾಗ ಸ್ವತಃ ತಾವೇ ಗ್ರಾಮದ ಬೀದಿಗಳನ್ನು ಗುಡಿಸಿ ಸ್ವಚ್ಛಗೊಳಿಸಿ ರಂಗೋಲಿ ಹಾಕುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲೇ ಗ್ರಾಮದ ಜನರಿಗೆ ಸ್ವಚ್ಛತೆಯ ಪಾಠ ಹೇಳಿಕೊಟ್ಟ ಇಂತಹ ಪುಣ್ಯಭೂಮಿ ಈಗ ಕಸದ ಗೂಡಾಗಿ ಪರಿಣಮಿಸಿದೆ. ಗ್ರಾಮದ ತುಂಬೆಲ್ಲ ಕಸ ತುಂಬಿ ತುಳುಕುತ್ತಿದೆ.
4,000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಮಲ್ಲಾಡಿಹಳ್ಳಿ ಪಟ್ಟಣವಾಗಿ ಬೆಳೆಯುತ್ತಿದೆ. ಗ್ರಾಮದಲ್ಲಿ ವಾಣಿಜ್ಯ ಚಟುವಟಿಕೆಗಳೂ ಬಿರುಸಿನಿಂದ ನಡೆಯುತ್ತಿವೆ. ಇಲ್ಲಿ ಅನಾಥ ಸೇವಾಶ್ರಮ ಇದ್ದು, ಹಲವು ಶಾಲಾ ಕಾಲೇಜುಗಳು, ಆಯುರ್ವೇದ ಕಾಲೇಜು, ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿವೆ. ಮಲ್ಲಾಡಿಹಳ್ಳಿ ಆಶ್ರಮ ಶಿಸ್ತು, ಸ್ವಚ್ಛತೆಗೆ ಹೆಸರಾಗಿದೆ. ಆದರೆ ತ್ಯಾಜ್ಯ ನಿರ್ವಹಣೆ ಸಮಸ್ಯೆಯಿಂದಾಗಿ ಗ್ರಾಮ ಮಲಿನಗೊಂಡಿದೆ. ಕಸದ ವಿಚಾರವಾಗಿ ಗ್ರಾಮದಲ್ಲಿ ನಿತ್ಯ ಗಲಾಟೆಗಳಾಗುತ್ತಿವೆ.
ಇಲ್ಲಿನ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಇಡೀ ಗ್ರಾಮದ ತುಂಬಾ ಕಸ ತುಂಬಿದೆ. ಖಾಲಿ ನಿವೇಶನಗಳು ಹಾಗೂ ರಸ್ತೆ ಪಕ್ಕದಲ್ಲಿ ಕಸದ ರಾಶಿಯೇ ಬಿದ್ದಿದೆ. ವ್ಯಾಪಾರಿಗಳು, ಗ್ರಾಮಸ್ಥರು ಕಸವನ್ನು ತಂದು ಬೀದಿಗೆ ಹಾಕುವುದರಿಂದ ಎಲ್ಲೆಂದರಲ್ಲಿ ತ್ಯಾಜ್ಯವೇ ತುಂಬಿದೆ. ಪ್ಲಾಸ್ಟಿಕ್ ವಸ್ತುಗಳು, ಕವರ್‌ಗಳು, ಖಾಲಿ ಚೀಲಗಳು, ಹಳೆಯ ಬಟ್ಟೆಗಳು, ಹಳೆಯ ಚಪ್ಪಲಿ, ಬೂಟುಗಳು ಎಲ್ಲೆಂದರಲ್ಲಿ ಬಿದ್ದಿವೆ. ಗ್ರಾಮದಿಂದ ಶಿವಪುರ, ಕೆಂಗುಂಟೆ ಕಡೆಗೆ ಹೋಗುವ ರಸ್ತೆಗಳು, ಶಿವಮೊಗ್ಗ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳ ಬದಿಯಲ್ಲಿ ಕಸ ತುಂಬಿದೆ.
ಗ್ರಾಮದಲ್ಲಿ ಕಸ ತುಂಬಿರುವುದರಿಂದ ಸಾರ್ವಜನಿಕರು ರೋಗ ರುಜಿನಗಳಿಗೆ ಒಳಗಾಗುತ್ತಿದ್ದಾರೆ. ಗ್ರಾಮದ ಅಂದವೂ ಕೆಡುತ್ತಿದೆ. ಗ್ರಾಮ ಪಂಚಾಯಿತಿಯವರು ಸ್ವಚ್ಛತೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
‘ಗ್ರಾಮದ ಹೊರವಲಯದಲ್ಲಿ ಕಸ ಸಂಗ್ರಹಣೆಗಾಗಿ ಭೂಮಿ ನೀಡಲಾಗಿದೆ. ಆದರೆ ಮಳೆಗಾಲದಲ್ಲಿ ಅಲ್ಲಿಗೆ ವಾಹನ ಹೋಗುವುದಿಲ್ಲ. ಅಲ್ಲಿಗೆ ರಸ್ತೆ ಮಾಡಿಸಬೇಕು. ಕಸದ ವಾಹನ ದುರಸ್ತಿ ಮಾಡಿಸಲಾಗಿದೆ. ಮಹಿಳಾ ಚಾಲಕಿಯನ್ನೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬ ನಿಯಮ ಇದೆ. ಇದರಿಂದ ಕಸದ ನಿರ್ವಹಣೆಯಲ್ಲಿ ತೊಡಗಾಗಿದೆ’ ಎಂದು ಪಿಡಿಒ ಚೂಡಾಮಣಿ ಹೇಳಿದರು.
ಮೂಲೆಗೆ ನಿಂತ ಕಸದ ವಾಹನ
‘ಗ್ರಾಮದ ಕಸ ಸಾಗಿಸಲು ಗ್ರಾಮ ಪಂಚಾಯಿತಿಗೆ ನೀಡಿರುವ ವಾಹನ ನಾಲ್ಕು ವರ್ಷಗಳಿಂದ ನಿಂತಲ್ಲೇ ನಿಂತಿದೆ. ಈ ವಾಹನದಲ್ಲಿ ಒಂದು ದಿನವೂ ಕಸ ಸಾಗಿಸಿಲ್ಲ. ಗ್ರಾಮದ ಸ್ವಚ್ಛತೆಯ ದೃಷ್ಟಿಯಿಂದ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಖರೀದಿಸಿದ ವಾಹನ ನಿಂತಲ್ಲೇ ತುಕ್ಕು ಹಿಡಿದಿದೆ. ವರ್ಷಗಟ್ಟಲೆ ವಾಹನ ನಿಲ್ಲಿಸಿರುವುದರಿಂದ ವಾಹನ ಕೆಟ್ಟು ಹೋಗಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚು ನಷ್ಟವಾಗಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.