
ಹೊಳಲ್ಕೆರೆ: ‘ಕರ್ನಾಟಕ ಫ್ಯಾಮಿಲಿ ಅಸೋಸಿಯೇಷನ್ ಸಂಸ್ಥೆಯ ಮೇಲೆ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿದ್ದು, ಇದರಿಂದ ನಾನು ತೀವ್ರವಾಗಿ ಮನನೊಂದಿದ್ದೇನೆ. ಕೇಂದ್ರ, ರಾಜ್ಯ ಸರ್ಕಾರಗಳಿಗೆ ತೆರಿಗೆ ಕಟ್ಟಿ ಸಂಸ್ಥೆ ನಡೆಸುತ್ತಿದ್ದರೂ ಪೊಲೀಸರು ತೊಂದರೆ ನೀಡುತ್ತಿದ್ದಾರೆ. ಹೀಗಾಗಿ ನಾನು ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇನೆ’ ಎಂದು ಸಂಂಸ್ಥೆಯ ಅಧ್ಯಕ್ಷ ಎಸ್.ನಾಗರಾಜು ತಿಳಿಸಿದರು.
‘ಪಟ್ಟಣದಲ್ಲಿ ನಾನು ನಾಲ್ಕೂವರೆ ವರ್ಷದಿಂದ ಫ್ಯಾಮಿಲಿ ಅಸೋಸಿಯೇಷನ್ ಕ್ಲಬ್ ನಡೆಸುತ್ತಿದ್ದೇನೆ. ಸರ್ಕಾರದ ಅನುಮತಿ ಪಡೆದು ನಿಯಮಾವಳಿ ಪ್ರಕಾರವೇ ಕ್ಲಬ್ ನಡೆಯುತ್ತಿದೆ. ಆದರೆ, ಪೊಲೀಸರು ಕ್ಲಬ್ ಮೇಲೆ ಆಗಾಗ ದಾಳಿ ನಡೆಸುತ್ತಿದ್ದು, ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನಮ್ಮ ಕ್ಲಬ್ ಸದಸ್ಯರು ಭಯಗೊಂಡಿದ್ದಾರೆ. 40 ನೌಕರರು ಕೆಲಸ ಮಾಡುತ್ತಿದ್ದು, ಅವರಿಗೆ 6 ತಿಂಗಳಿಂದ ಸಂಬಳ ಕೊಡಲು ಆಗುತ್ತಿಲ್ಲ. ಪೊಲೀಸರ ಕಿರುಕುಳದಿಂದ ಅವರ ಜೀವನಕ್ಕೂ ತೊಂದರೆ ಆಗಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ನಮ್ಮ ಸಂಸ್ಥೆ ಆವರಣದಲ್ಲಿ ಅಡಿಕೆ ಸುಲಿಯುವ ಯಂತ್ರವಿದ್ದು ರೈತರು ಟ್ರ್ಯಾಕ್ಟರ್‌ಗಳಲ್ಲಿ ಅಡಿಕೆ ತರವುದುಕ್ಕೂ ಹೆದರುತ್ತಾರೆ. ಪೊಲೀಸರು ವಾಹನ ಜಪ್ತಿ ಮಾಡುವ ಭಯದಲ್ಲಿ ನಮ್ಮ ಸ್ನೇಹಿತರು, ಬಂಧುಗಳು ಕೂಡ ಬರಲು ಭಯ ಪಡುತ್ತಾರೆ. ರಾಜ್ಯದ ಎಲ್ಲ ಕಡೆ ಕ್ಲಬ್‌ಗಳು ನಡೆಯುತ್ತಿವೆ. ಚಿತ್ರದುರ್ಗದಲ್ಲಿ ಎಸ್‌ಪಿ ನಿವಾಸದ ಕೂಗಳತೆ ದೂರದಲ್ಲೇ ಸಿಟಿ ಕ್ಲಬ್ ಸೇರಿ ಹಲವು ಕ್ಲಬ್ ನಡೆಯುತ್ತಿವೆ. ಆದರೆ ನಮ್ಮ ಕ್ಲಬ್ ವಿರುದ್ಧ ಮಾತ್ರ ಕಿರುಕುಳ ನಡೆಯುತ್ತಿದೆ. ಕ್ಲಬ್‌ಗಳು ಕಾನೂನು ಬಾಹಿರವಾಗಿದ್ದರೆ ಎಲ್ಲಾ ಕ್ಲಬ್‌ಗಳನ್ನು ನಿಲ್ಲಿಸಲಿ’ ಎಂದು ತಿಳಿಸಿದರು.
‘ಪೊಲೀಸರು ಹೈಕೋರ್ಟ್ ಆದೇಶವನ್ನು ಪಾಲಿಸುತ್ತಿಲ್ಲ. ಕ್ಲಬ್ ಮಾಲೀಕರು, ಸದಸ್ಯರಿಗೆ ಕಿರುಕುಳ ನೀಡಬಾರದು ಎಂದು ಪೊಲೀಸರಿಗೆ ಎಸ್ಪಿ ಕಚೇರಿಯಿಂದ ಪತ್ರ ಬಂದಿದ್ದರೂ, ಮತ್ತೆ ಮತ್ತೆ ಅವರು ದಾಳಿ ನಡೆಸುತ್ತಿದ್ದಾರೆ. ನಮ್ಮ ಕ್ಲಬ್ ಮೇಲೆ ದಾಳಿ ಮಾಡಿದ್ದ ಇನ್‌ಸ್ಪೆಕ್ಟರ್ ವೆಂಕಟೇಶ್ ಅವರ ಸ್ಟೇಷನ್ ಡೈರಿ ಕೊಡುವಂತೆ ಮಾಹಿತಿ ಹಕ್ಕು ನಿಯಮದಲ್ಲಿ ಕೇಳಿದ್ದೆ. ಅದಕ್ಕೆ ಅವರು ಸುಳ್ಳು ಮಾಹಿತಿ ನೀಡಿದ್ದಾರೆ. ಪೊಲೀಸರು ಅಕ್ರಮ ಜೂಜಾಟ ತಡೆಯುವುದನ್ನು ಬಿಟ್ಟು ಪರವಾನಗಿ ಪಡೆದು ನಡೆಸುತ್ತಿರುವ ನಮ್ಮ ಕ್ಲಬ್‌ಗೆ ಕಿರುಕುಳ ನೀಡುತ್ತಿದ್ದಾರೆ’ ಎಂದರು.
‘ಪೊಲೀಸರು ತಮಗೆ ಬೇಕಾದವರಿಗೆ ಮಾತ್ರ ಕ್ಲಬ್ ನಡೆಸಲು ಅವಕಾಶ ನೀಡುತ್ತಿದ್ದಾರೆ. ನ್ಯಾಯಯುತವಾಗಿ ನಡೆಯುತ್ತಿರುವ ಕ್ಲಬ್‌ಗಳಿಗೆ ತೊಂದರೆ ನೀಡುತ್ತಿದ್ದಾರೆ. ಕಿರುಕುಳ ಕುರಿತು ಮಾನವ ಹಕ್ಕುಗಳ ಆಯೋಗ ಕೂಡ ವಿಚಾರಣೆ ನಡೆಸಿದೆ. ಪೊಲೀಸರು ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ’ ಎಂದು ಆರೋಫಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.