ಹೊಳಲ್ಕೆರೆ: ಹೆಸರೇ ಹೇಳುವಂತೆ ಹೊಳಲ್ಕೆರೆ ಪಟ್ಟಣ ಮೂರು ಕೆರೆಗಳಿಂದ ಆವೃತವಾಗಿದೆ. ಹೊಸದುರ್ಗ ರಸ್ತೆಯಲ್ಲಿ ಶಿವನ ಕೆರೆ, ದಾವಣಗೆರೆ ರಸ್ತೆಯಲ್ಲಿ ಹಿರೇಕೆರೆ ಹಾಗೂ ಪಟ್ಟಣದ ಪೂರ್ವಕ್ಕೆ ಕೊತ್ತಲ ಆಂಜನೇಯ ದೇವಸ್ಥಾನದ ಸಮೀಪ ಹೊನ್ನೇಕೆರೆ ಇದೆ. ಆದರೆ ಈ ಮೂರೂ ಕೆರೆಗಳಿಗೆ ಪಟ್ಟಣದ ತ್ಯಾಜ್ಯ ಸೇರುತ್ತಿದ್ದು, ಇವುಗಳ ಒಡಲು ಮಲಿನಗೊಂಡಿದೆ.
ಶಿವನ ಕೆರೆಗೆ ಹಿಂದೆ ‘ಕೆಸರುಗಟ್ಟೆ ಕೆರೆ’ ಎಂದು ಕರೆಯುತ್ತಿದ್ದರು. ಪಟ್ಟಣದ ಕಲ್ಮಶವೆಲ್ಲ ಕೆರೆಯನ್ನು ಸೇರಿದ್ದರಿಂದ ಅದು ಹಂದಿಗಳ ಆವಾಸ ಸ್ಥಾನವಾಗಿತ್ತು. ಶಾಸಕ ಎಂ.ಚಂದ್ರಪ್ಪ ₹5 ಕೋಟಿ ವೆಚ್ಚದಲ್ಲಿ ಶಿವನ ವಿಗ್ರಹ ಪ್ರತಿಷ್ಠಾಪಿಸುವ ಮೂಲಕ ಕೆರೆಗೆ ಕಾಯಕಲ್ಪ ನೀಡಿದರು. ನಂತರ ಇದನ್ನು ಶಿವನಕೆರೆ ಎಂಬ ಹೆಸರಿನಿಂದ ಕರೆಯಲಾಯಿತು. ಆರಂಭದಲ್ಲಿ ಸ್ವಚ್ಛವಾಗಿಯೇ ಇದ್ದ ಕೆರೆ, ದಿನಕಳೆದಂತೆ ಕಲುಷಿತಗೊಳ್ಳುತ್ತಾ ಬಂದಿತು. ಪಟ್ಟಣದ ತ್ಯಾಜ್ಯವೆಲ್ಲ ಕೆರೆಗೆ ಹರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ.
ಕಬ್ಬಿನ ಸಿಪ್ಪೆ, ಹಳೆಯ ಬಟ್ಟೆ, ಹರಿದ ಚಪ್ಪಲಿ, ಮದ್ಯದ ಟೆಟ್ರಾ ಪ್ಯಾಕ್ ಮೊದಲಾದವುಗಳನ್ನು ಕೆರೆಗೆ ಹಾಕಲಾಗುತ್ತಿದೆ. ಮುಖ್ಯರಸ್ತೆಯ ಪಕ್ಕದಲ್ಲೇ ಕೆರೆ ಇರುವುದರಿಂದ ಬೈಕ್‌ಗಳಲ್ಲಿ ಕಸದ ಚೀಲಗಳನ್ನು ತಂದೆ ಎಸೆದು ಹೋಗುತ್ತಾರೆ. ವಾಯು ವಿಹಾರಕ್ಕೆ ಬರುವವರಿಗೆ ದುರ್ವಾಸನೆ ಬೀರುತ್ತಿದೆ. ಕೆರೆಯ ಆರಂಭ ಭಾಗ ಹಾಗೂ ಅಂತ್ಯದಲ್ಲಿ ಕೊಳಚೆ ತುಂಬಿದ್ದು, ಅಸಹ್ಯ ಹುಟ್ಟಿಸುತ್ತದೆ. ಭಾನುವಾರದ ವಾರದ ಸಂತೆಯೂ ದಡದಲ್ಲಿ ನಡೆಯುವುದರಿಂದ ವ್ಯಾಪಾರಿಗಳು ಕೊಳೆತ ಸೊಪ್ಪು, ತರಕಾರಿ, ಈರುಳ್ಳಿ ಸಿಪ್ಪೆಯನ್ನು ಇಲ್ಲಿ ಎಸೆಯುತ್ತಾರೆ.
ಹಿರೇಕೆರೆ ದೊಡ್ಡ ಕೆರೆಯಾಗಿದ್ದು, ಅಂದಾಜು 2 ಕಿಲೋ ಮೀಟರ್ ಏರಿ ಹೊಂದಿದೆ. ಇಲ್ಲಿಯೂ ತ್ಯಾಜ್ಯ ಸುರಿಯಲಾಗುತ್ತಿದೆ. ಇಲ್ಲಿ ಹೆಚ್ಚು ನೀರು ಸಂಗ್ರಹವಾಗಿದ್ದು, ಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಚರಂಡಿ ನೀರು ಕೆರೆಯ ಒಡಲು ಸೇರುತ್ತಿದೆ. ಕೋಡಿ ಸಮೀಪ ತಿಪ್ಪೆಗಳನ್ನು ಹಾಕಿದ್ದು, ಇಡೀ ಪ್ರದೇಶ ಕಲುಷಿತಗೊಂಡಿದೆ.
ಹೊನ್ನೆಕೆರೆಯೂ ಸೌಂದರ್ಯಕ್ಕೆ ಹೆಸರಾಗಿದ್ದು, ಪಕ್ಷಿಗಳ ವಾಸಸ್ಥಾನವಾಗಿತ್ತು. ಇದಕ್ಕೂ ಪಟ್ಟಣದ ತ್ಯಾಜ್ಯ ಸೇರುತ್ತಿದ್ದು, ಮಲಿನವಾಗುತ್ತಿದೆ. ಇದರ ಏರಿಗೆ ಹೊಂದಿಕೊಂಡಂತೆ ತಿಪ್ಪೆಗಳಿದ್ದು, ಇಲ್ಲಿನ ಕಸ ನೀರಿಗೆ ಸೇರುತ್ತಿದೆ.
ಪಟ್ಟಣಕ್ಕೆ ಹೊಂದಿಕೊಂಡಿರುವ ಮೂರೂ ಕೆರೆಗಳನ್ನು ಸಂರಕ್ಷಿಸಬೇಕು. ನೀರು ಮಲಿನವಾಗದಂತೆ ನೋಡಿಕೊಳ್ಳಬೇಕು. ಕೆರೆಯ ಏರಿ ಮೇಲೆ ಸಿ.ಸಿ.ಟಿವಿ ಕ್ಯಾಮರಾ ಅಳವಡಿಸಿ ಕಸ ಹಾಕದಂತೆ ತಡೆಯಬೇಕು. ತಪ್ಪಿತಸ್ಥರಿಗೆ ದಂಡ ವಿಧಿಸಬೇಕು. ಕೆರೆಗಳನ್ನು ಉಳಿಸುವ ಮೂಲಕ ಪಟ್ಟಣದ ಸೌಂದರ್ಯ ಕಾಪಾಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಪೌರಕಾರ್ಮಿಕರ ಕೊರತೆಯಿದ್ದು ಸ್ವಚ್ಛತೆ ವಿಳಂಬವಾಗಿದೆ. ಕೆರೆಗಳ ಒತ್ತುವರಿ ನಡೆದಿದ್ದು ಹದ್ದುಬಸ್ತು ಮಾಡಿಲ್ಲ. ಇನ್ನುಮುಂದೆ ಕೆರೆಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದುರೇಣುಕಾ ದೇಸಾಯಿ ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.