ADVERTISEMENT

ಹೊಸದುರ್ಗ: ಮಾರುಕಟ್ಟೆಯಲ್ಲಿ ‘ಇಲ್ಲ’ಗಳದ್ದೇ ದರ್ಬಾರ್‌!

ಹೊಸದುರ್ಗ ಎಪಿಎಂಸಿಯಲ್ಲಿ ಇದ್ದರೂ ಇಲ್ಲದಂತಿರುವ ರೈತ ಭವನ, ಶ್ರಮಿಕರ ಭವನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 6:17 IST
Last Updated 2 ಜುಲೈ 2025, 6:17 IST
ಹೊಸದುರ್ಗದ ಎಪಿಎಂಸಿ ಮಾರುಕಟ್ಟೆ 
ಹೊಸದುರ್ಗದ ಎಪಿಎಂಸಿ ಮಾರುಕಟ್ಟೆ    

ಹೊಸದುರ್ಗ: ಪಟ್ಟಣದ ಹೊರವಲಯದ ಕಲ್ಲೇಶ್ವರ ಬಡಾವಣೆಯಲ್ಲಿರುವ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ)ಯ ಮಾರುಕಟ್ಟೆಯಲ್ಲಿ ಏನು ಕೇಳಿದರೂ ಇಲ್ಲ.. ಇಲ್ಲ... ಎಂಬ ಉತ್ತರ ದೊರೆಯುತ್ತದೆ.

ಇಲ್ಲಿ ರೈತರು ಹಾಗೂ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳಿಲ್ಲ. ಸಾರ್ವಜನಿಕ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಕಾರ್ಮಿಕ ಭವನ, ರೈತ ಭವನ ಸುಸಜ್ಜಿತವಾಗಿಲ್ಲ. ಇನ್ನೂ ಏನು ಕೇಳಿದರೂ ಇಲ್ಲ.. ಇಲ್ಲ... ಇಲ್ಲ...!

1971ರಲ್ಲೇ ಒಟ್ಟು 23.35 ಎಕರೆಯಲ್ಲಿ ಈ ಮಾರುಕಟ್ಟೆ ನಿರ್ಮಾಣವಾಗಿದ್ದು, ಸಿ.ಸಿ. ರಸ್ತೆ ಮತ್ತು ಸುಸಜ್ಜಿತ ಚರಂಡಿ ಇದೆ. ಆದರೆ, 2010ರಲ್ಲಿ ನಿರ್ಮಾಣ ಆಗಿರುವ ಶ್ರಮಿಕರ ಭವನ ಸುಣ್ಣಬಣ್ಣ ಕಾಣದೇ ದುರಸ್ತಿಯೂ ಆಗದೇ ಸ್ವಚ್ಛತೆಯಿಲ್ಲದೇ ಪಾಳು ಬಿದ್ದಿದೆ.

ADVERTISEMENT

‘ಇಲ್ಲಿ ಹೊಸ ಶೌಚಾಲಯ ಕಟ್ಟಿಸಿ ಮೂರು ತಿಂಗಳಾದರೂ ಉದ್ಘಾಟನೆ ಅಗಿಲ್ಲ. ಇದರಿಂದಾಗಿ ಜನರು ಪರದಾಡುವಂತಾಗಿದೆ. ಬಹುಶಃ ಆ ಶೌಚಾಲಯ ಕಟ್ಟಡ ಹಳೆಯದಾಗಿ ಬೀಳುವ ಸ್ಥಿತಿ ತಲುಪಿದ ನಂತರ ಬಳಕೆಗೆ ಕೊಡಬಹುದೇನೋ?’ ಎಂದು ಅದರೆದುರು ಹಾದು ಹೋಗುವ ಜನರು ವ್ಯಂಗ್ಯವಾಗಿ ಹೇಳುತ್ತಾರೆ.

ಶೌಚಾಲಯದ ಕೊರತೆಯಿಂದ ಜನರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ ನೈರ್ಮಲ್ಯಕ್ಕೆ ಕುತ್ತು ಬಂದಿದೆ. ಮಹಿಳಾ ಕಾರ್ಮಿಕರು ಮತ್ತು ರೈತ ಮಹಿಳೆಯರ ಸಂಕಷ್ಟವಂತೂ ಹೇಳತೀರದಾಗಿದೆ.  

‘ಮಾರುಕಟ್ಟೆಯು ಹಲವು ವರ್ಷಗಳಿಂದ ಸೌಕರ್ಯದ ಕೊರತೆ ಎದುರಿಸುತ್ತಿದೆ. ಮಾರುಕಟ್ಟೆ ಪ್ರಾಂಗಣದಿಂದ ಕಸ ವಿಲೇವಾರಿ ಆಗುತ್ತಿಲ್ಲ. ರಾತ್ರಿ ವಿದ್ಯುತ್‌ ದೀಪದ ವ್ಯವಸ್ಥೆಯಿಲ್ಲ. ರೈತರಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯವಿಲ್ಲ. ಕೃಷಿ ಉತ್ಪನ್ನ ಮಾರಾಟ ಮಾಡಲು ಬರುವ ರೈತರು 3ರಿಂದ 4 ದಿನ ಇಲ್ಲಿಯೇ ತಂಗಬೇಕಾಗುತ್ತದೆ. ಟ್ರ್ಯಾಕ್ಟರ್ ಅಥವಾ ಲಾರಿ ನಿಲ್ಲುವ ಜಾಗದಲ್ಲಿಯೇ ಮಲಗುವುದು ಅನಿವಾರ್ಯವಾಗಿದೆ. ಸೊಳ್ಳೆಗಳ ಕಾಟ ವಿಪರೀತ. ಬೀದಿ ನಾಯಿಗಳೊಂದಿಗೆ ಬಿಡಾಡಿ ದನಗಳ ಹಾವಳಿಯೂ ಇದೆ’ ಎಂದು ಗುಡ್ಡದನೇರಲಕೆರೆ ಗ್ರಾಮದ ರೈತ ನವೀನ್ ‘ಪ್ರಜಾವಾಣಿ’ ಎದುರು ಬೇಸರ ವ್ಯಕ್ತಪಡಿಸಿದರು.

‘ಈ ಮಾರುಕಟ್ಟೆ ಪ್ರಾಂಗಣದಲ್ಲಿ ಯಾವುದು ಇರಬೇಕೋ ಅದು ಇಲ್ಲ, ಯಾವುದು ಇರಬಾರದೋ ಅದು ಇದೆ. ಇದರ ನಿರ್ವಹಣೆಗೆ ಯಾರಾದರೂ ದಿಕ್ಕು–ದೆಸೆ ಇದ್ದಾರೋ ಇಲ್ಲವೋ ಎಂಬುದು ನಮಗೆ ತಿಳಿಯಬೇಕಿದೆ’ ಎಂದೂ ಕೆಲವು ರೈತರು ಹೇಳಿದರು.

‘ಎಪಿಎಂಸಿಯಲ್ಲಿ ರಾಗಿ, ಶೇಂಗಾ, ತೆಂಗಿನ ಕಾಯಿ, ಹೆಸರು, ಕಡಲೆಕಾಳು, ಸಾವೆ, ಮೆಕ್ಕೆಜೋಳದ ವಹಿವಾಟು ನಡೆಯುತ್ತದೆ. ವಾಣಿಜ್ಯ ಮಳಿಗೆ, ಗೋದಾಮು ಬಾಡಿಗೆ ಸೇರಿದಂತೆ ಹಲವು ಮೂಲಗಳಿಂದ 2024-25ರಲ್ಲಿ ₹ 50 ಲಕ್ಷ ಆದಾಯ ಬಂದಿದೆ. 2025-26ರಲ್ಲಿ ಅಂದಾಜು ₹ 1.5 ಕೋಟಿ ಆದಾಯದ ನಿರೀಕ್ಷೆಯಿದೆ. ಇದುವರೆಗೂ ₹ 17 ಲಕ್ಷ ಆದಾಯ ಬಂದಾಗಿದೆ. ಮಾರುಕಟ್ಟೆಯಲ್ಲಿ ಒಂದು ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಇಲ್ಲ. ಇದ್ದಿದ್ದರೆ ವರ್ತಕರು, ರೈತರು ಹಾಗೂ ದಲ್ಲಾಳಿಗಳಿಗೆ ವ್ಯವಹರಿಸಲು ಅನುಕೂಲವಾಗುತ್ತದೆ. ಆವರಣದಲ್ಲಿ ಮತ್ತೊಂದು ಶೌಚಾಲಯ ಹಾಗೂ ಕುಡಿಯುವ ನೀರಿನ ಘಟಕದ ಅವಶ್ಯಕತೆ ಇದೆ’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಗೌತಮ್.

ಹೊಸದುರ್ಗದ ಎಪಿಎಂಸಿ ಆವರಣದಲ್ಲಿನ ಶ್ರಮಿಕ ಭವನವು ಸ್ವಚ್ಛತೆಯಿಲ್ಲದೆ ನಲುಗುತ್ತಿದೆ
ಹೊಸದುರ್ಗ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶೌಚಾಲಯವು ಉದ್ಘಾಟನೆಯಾಗದಿರುವ ಕಾರಣಕ್ಕೆ ಬಳಕೆಯಾಗುತ್ತಿಲ್ಲ 
ಹೊಸದುರ್ಗದ ಎಪಿಎಂಸಿ ಆವರಣದಲ್ಲಿನ ಮಳಿಗೆ ಎದುರಿಗೆ ರೈತರೊಬ್ಬರು ಮಲಗಿರುವುದು

ಶೀತಲೀಕರಣ ಘಟಕಕ್ಕೆ ಮನವಿ

ಪಟ್ಟಣದಲ್ಲಿ ₹ 10 ಕೋಟಿ ವೆಚ್ಚದಲ್ಲಿ 2000 ಟನ್ ಧಾನ್ಯ ಸಂಗ್ರಹ ಸಾಮರ್ಥ್ಯದ ಶೀತಲೀಕರಣ ಘಟಕ ನಿರ್ಮಿಸಲು ಶಾಸಕರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ. ಹೊಸದುರ್ಗದಲ್ಲಿ ಎಲ್ಲಾ ಬೆಳೆಗಳನ್ನು ಬೆಳೆಯಲು ಯೋಗ್ಯ ಭೂಮಿಯಿದೆ. ಕೃಷಿ ಉತ್ಪನ್ನ ಶೇಖರಿಸಿಡಲು ಇಲ್ಲಿನ ರೈತರು ಚಳ್ಳಕೆರೆ ಹಾಗೂ ಮೈಸೂರಿಗೆ ತೆರಳುತ್ತಿದ್ದಾರೆ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಗೌತಮ್.

ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಿ ರೈತ ಭವನ ನಿರ್ಮಿಸಲಾಗಿದೆ. ನಿರ್ವಹಣೆ ಕೊರತೆಯಿಂದ ನಿರ್ಮಾಣದ ಉದ್ದೇಶ ಈಡೇರಿಲ್ಲ
-ಕೆ.ಸಿ ಮಹೇಶ್ವರಪ್ಪ ಕೊರಟಿಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.