
ಹೊಸದುರ್ಗ: ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ, ಜಿಲ್ಲೆಯ ಎಲ್ಲಾ ರೈತರ ಜಮೀನುಗಳಿಗೆ ನೀರು ಹರಿಸುವ ಕಾರ್ಯವಾಗಬೇಕು. ತಾಲ್ಲೂಕಿನ ಸಮಗ್ರ ನೀರಾವರಿಗಾಗಿ ಫೆ. 10 ರಂದು ಹೊಸದುರ್ಗ ಬಂದ್ ಮಾಡಲಾಗುವುದು. ಫೆ. 13 ರಂದು ಜಿಲ್ಲಾಧಿಕಾರಿ ಕಚೇರಿಗೆ ಹಾಗೂ ಭದ್ರಾ ಮೇಲ್ದಂಡೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಕರಿಸಿದ್ದಯ್ಯ ಹೇಳಿದರು.
ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ಗಾಂಧಿ ವೃತ್ತದಲ್ಲಿ ಬುಧವಾರ ನಡೆದ ರೈತರ ಅನಿರ್ಧಿಷ್ಠಾವದಿ ಹೋರಾಟದ ನೇತೃತ್ವ ವಹಿಸಿ ಮಾತನಾಡಿದರು.
ರೈತರ ಜಮೀನುಗಳಿಗೆ ಜುಲೈ ತಿಂಗಳೊಳಗೆ ನೀರು ಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ಜಿಲ್ಲೆಯ ಶಾಸಕರು ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಿ ಹೆಚ್ಚು ಅನುದಾನ ತಂದು ಕೆಲಸಕ್ಕೆ ವೇಗ ಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಗೆ ಭದ್ರಾ ಮೇಲ್ದಂಡೆ ನೀರು ಹರಿಸುವ ವಿಚಾರವನ್ನೇ ಕೆಲ ರಾಜಕಾರಣಿಗಳು ಅತಿಯಾಗಿ ಬಿಂಬಿಸಿ ರೈತರನ್ನು ವಂಚಿಸಲು ಮುಂದಾಗಿದ್ದಾರೆ. ಯೋಜನೆ ಪ್ರಾರಂಭವಾಗಿ ದಶಕಗಳು ಕಳೆದರೂ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕೆರೆಗಳಿಗೆ ನೀರು ಕೊಡುವುದಾಗಿ ಆರಂಭಿಸಿದ ಪೈಪ್ ಲೈನ್ ಕಾಮಗಾರಿ ಅಪೂರ್ಣವಾಗಿದೆ. ಇಸ್ರೇಲ್ ಮಾದರಿ ಹನಿ ನೀರಾವರಿ ಕೆಲಸ ಕುಂಠಿತಗೊಂಡಿದೆ. ಗುತ್ತಿಗೆದಾರರು ಅರೆಬರೆ ಕೆಲಸ ಮಾಡಿದ್ದಾರೆ. ಯಾವುದೇ ಭಾಗದಲ್ಲಿಯೂ ಕಾಮಗಾರಿ ಪೂರ್ಣಗೊಳಿಸಿಲ್ಲ. ರಾಜಕಾರಣಿಗಳು ಬರೀ ಸುಳ್ಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ಸೋಮೇನಹಳ್ಳಿ ಸ್ವಾಮೀ ದೂರಿದರು.
ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಕಾಮಗಾರಿಗಾಗಿ ಬಜೆಟ್‍ನಲ್ಲಿ ಘೋಷಿಸಿರುವ ₹ 5,300 ಕೋಟಿ ಹಣ ತುರ್ತಾಗಿ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ಮುಂಬರುವ ಬಜೆಟ್ ಅಧಿವೇಶನದಲ್ಲಿ ₹ 5,000 ಕೋಟಿ ಹಣ ಮೀಸಲಿಡಬೇಕು. ಜಿಲ್ಲೆಯ ಪ್ರತಿಯೊಂದು ಕೆರೆಗಳ ಹೂಳು ತೆಗೆದು ಸ್ವಚ್ಛಗೊಳಿಸಿ, ನಂತರ ನೀರು ಹರಿಸುವ ಕಾರ್ಯವಾಗಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಸಿ.ಮಹೇಶ್ವರಪ್ಪ ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಮುರುಗೇಂದ್ರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಚಿತ್ತಪ್ಪ, ಕಾರ್ಯದರ್ಶಿ ನಿರಂಜನಮೂರ್ತಿ, ಗೌರವಾಧ್ಯಕ್ಷ ಬೋರೇಶ್, ಮುಖಂಡರಾದ ಮತ್ತೋಡು ಶಿವಣ್ಣ, ನೀರಗುಂದ ರಘು, ಶಶಿಧರ್, ಕಮ್ಯೂನಿಸ್ಟ್ ಪಕ್ಷದ ರಮೇಶ್ ಸೇರಿದಂತೆ ನೂರಾರು ರೈತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.