
ಹೊಸದುರ್ಗ: ವಿ.ವಿ. ಸಾಗರ ಜಲಾಶಯ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿಯುತ್ತಿದೆ. ಹಿರಿಯೂರು ರೈತರಲ್ಲಿ ಸಂತಸ, ಸಂಭ್ರಮ ಮೂಡಿದೆ. ಆದರೆ, ಜಲಾಶಯದ ಹಿನ್ನೀರು ಪ್ರದೇಶವಿರುವ ಹೊಸದುರ್ಗ ತಾಲ್ಲೂಕಿನ ಜಮೀನು ಹಾಗೂ ಗ್ರಾಮಗಳಲ್ಲಿನ ಮನೆಗಳಿಗೆ ನೀರು ನುಗ್ಗುತ್ತಿದ್ದು ಜನರು ಲ್ಲಿನ ನಿವಾಸಿಗಳು ಕಣ್ಣೀರು ಸುರಿಸುವಂತಾಗಿದೆ.
10 ದಿನಗಳಿಂದಲೂ ನಿರಂತರವಾಗಿ ಸುರಿದ ಮಳೆಯಿಂದಾಗಿ ಅಜ್ಜಂಪುರ, ಹೊಸದುರ್ಗ, ಹೊಳಲ್ಕೆರೆ, ಅರಸೀಕೆರೆ, ಚಿಕ್ಕನಾಯಕನಹಳ್ಳಿಯ ಕೆರೆಗಳು ಭರ್ತಿಯಾಗಿ, ಆ ನೀರು ವಿ.ವಿ. ಸಾಗರ ತಲುಪುತ್ತಿದೆ. ಒಳ ಹರಿವು ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಂಕಟ ಅನುಭವಿಸುತ್ತಿದ್ದ ಹಿನ್ನೀರಿನ ಜನತೆ, ಈಚೆಗೆ ಜಮೀನುಗಳತ್ತ ಮುಖ ಮಾಡಿದ್ದರು. ಆದರೆ ಮತ್ತೆ ಹಿನ್ನೀರು ಜಮೀನುಗಳತ್ತ ಬಂದಿರುವುದು ಅಲ್ಪ ಪ್ರಮಾಣದ ಜಮೀನು ಹೊಂದಿರುವ ರೈತರು ಕಂಗಾಲಾಗಿದ್ದಾರೆ.
ತಾಲ್ಲೂಕಿನ ಎಂ.ಮಲ್ಲಾಪುರ, ನಾಗತಿಹಳ್ಳಿ, ಇಂಡೇದೇವರಹಟ್ಟಿ, ಅರೇಹಳ್ಳಿ, ಇಟ್ಟಿಗೆಹಳ್ಳಿ, ಲಿಂಗದಹಳ್ಳಿ, ಕೊಪ್ಪಗೆರೆ, ಅಂಚಿಬಾರಿಹಟ್ಟಿ, ಲಕ್ಕಿಹಳ್ಳಿ, ಹುಣಸೇಕಟ್ಟೆ ಸೇರಿದಂತೆ ಲಕ್ಕಿಹಳ್ಳಿ, ಗುಡ್ಡದ ನೇರಲಕೆರೆ, ಕಾರೇಹಳ್ಳಿ, ಮಾಡದಕೆರೆ, ಹುಣವಿನಡು, ಅತ್ತಿಮಗ್ಗೆ, ಮತ್ತೋಡು ಪಂಚಾಯಿತಿ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಖಾತೆ ಜಮೀನುಗಳು, ರಸ್ತೆ ಮಾರ್ಗಗಳು ಮುಳುಗಿವೆ. ಸಂಪರ್ಕ ಸೇತುವೆಗಳ ಬಳಿ ನೀರು ಆವರಿಸಿದ್ದು, ಇನ್ನೇನು ಮುಳುಗುವ ಹಂತದಲ್ಲಿವೆ. ಗ್ರಾಮಗಳ ಸಮೀಪ ನೀರು ಬರುತ್ತಿದ್ದು, ತೇವಾಂಶ ಅಧಿಕವಾಗಿದೆ. ಈ ಭಾಗದ ಜನರು ಆತಂಕದಲ್ಲಿ ದಿನದೂಡುತ್ತಿದ್ದಾರೆ.
ಲಿಂಗದಹಳ್ಳಿ ಗ್ರಾಮದ ರೈತರೊಬ್ಬರು ದಾಳಿಂಬೆ ಬೆಳೆದಿದ್ದರು, ಈ ದಾಳಿಂಬೆಗೂ ನೀರು ನುಗ್ಗಿದೆ. ಫಸಲಿಗೆ ಬಂದಿದ್ದ ಬೆಳೆಯ ನಷ್ಟ ನೋಡುವಂತಾಗಿದೆ. ಅಡಿಕೆ ಹಾಗೂ ತೆಂಗಿನ ತೋಟಗಳಲ್ಲಿ ನೀರು ನಿಂತಿದ್ದು, ಇದು 15 ದಿನಗಳಾದರೂ ಕಡಿಮೆಯಾಗುವುದಿಲ್ಲ. ತೇವಾಂಶ ಅಧಿಕವಾಗಿ ಈ ಬಾರಿಯೂ ಬೆಳೆ ಕೈ ಸೇರದಂತಾಗುತ್ತದೆ. ಖಾತೆ ಜಮೀನುಗಳಿಗೂ ನೀರು ಆವರಿಸಿದೆ. ನಮ್ಮ ಆರ್ಥಿಕ ಸ್ಥಿತಿ ಸುಧಾರಿಸುವುದು ಹೇಗೆ ಎಂಬಂತಾಗಿದೆ ಎಂಬುದು ಇಲ್ಲಿನ ರೈತರ ಅಳಲು.
ಬೇವಿನಹಳ್ಳಿಯ ಬೇವಿನಾಳಮ್ಮ ದೇವಾಲಯಕ್ಕೆ ತೆರಳಲು ಪೂಜಾರಿಹಟ್ಟಿ ಮಾರ್ಗವಾಗಿ ಹೋಗಬೇಕು. ಮಲ್ಲಾಪುರ ಹಾಗೂ ಪೂಜಾರಹಟ್ಟಿ ಸಂಪರ್ಕ ಕಡಿತಗೊಂಡಿದೆ. ಶಾಲೆ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತದೆ. ಪೂಜಾರಹಟ್ಟಿಯ 9 ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಜನರಿಗೆ ಜಾಗ ನೀಡಿ, ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
‘ಈಗಾಗಲೇ 6 ಮನೆಯವರು ನಿರ್ಮಾಣಕ್ಕೆ ತಳಪಾಯ ಹಾಕಿದ್ದಾರೆ. 3 ಮನೆಯವರು ಆರ್ಥಿಕ ಸಮಸ್ಯೆಯಿಂದ ತಳಪಾಯ ನಿರ್ಮಿಸಿಲ್ಲ. ಹಾಗಾಗಿ ಉಳಿದ 6 ಮನೆಯವರೀಗೂ ಬಿಲ್ ಆಗಿಲ್ಲ. ಅಧಿಕಾರಿಗಳು ಸಮಸ್ಯೆ ಆದಾಗ ಮಾತ್ರ ಬಂದು ಭೇಟಿ ನೀಡುತ್ತಾರೆ. ಸಮಸ್ಯೆಗೂ ಮುನ್ನವೇ ಪರಿಹಾರ ಹುಡುಕಿಕೊಡಲ್ಲ. ರಾಗಿ, ಸುಗಂಧರಾಜ ಗಿಡ, ತೆಂಗು, ಅಡಿಕೆ, ಕೊಳವೆಬಾವಿಗಳು ಜಲಾವೃತಗೊಂಡಿವೆ’ ಎಂದು ಪೂಜಾರಹಟ್ಟಿ ಗ್ರಾಮಸ್ಥ ಕೆ. ದಾಸಪ್ಪ ಹೇಳಿದರು.
ವಿಷಜಂತುಗಳ ಕಾಟ:
ಹಿನ್ನೀರಿನ ಭಾಗದಲ್ಲಿ ನೀರು ಹೆಚ್ಚಿರುವ ಪರಿಣಾಮ ವಿಷಜಂತುಗಳ ಕಾಟವೂ ಅಧಿಕವಾಗಬಹುದು. ಈ ಹಿಂದೆ ವಿಷ ಜಂತುಗಳು ಮನೆಗೆ ನುಗ್ಗಿರುವ ನಿದರ್ಶನಗಳೂ ಇವೆ. ನಿತ್ಯ ನೀರು ನಿಂತು ಸೊಳ್ಳೆಗಳ ಕಾಟವೂ ಅಧಿಕವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಇಲ್ಲಿನವರಲ್ಲಿದೆ.
‘ವಿ.ವಿ. ಸಾಗರ ಕೋಡಿ ಪ್ರಮಾಣವನ್ನು ಕಡಿಮೆ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. 2022ರಿಂದಲೂ ನಮ್ಮ ಗೋಳು ತಪ್ಪಿಲ್ಲ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು. ಈ ಭಾಗದ ಜನ ನೆಮ್ಮದಿಯಿಂದ ಬದುಕಲು ಸರ್ಕಾರ ಅವಕಾಶ ಮಾಡಿಕೊಡಬೇಕು’ ಎಂದು ಅಂಚಿಬಾರಿಹಟ್ಟಿಯ ಯಶ್ವಂತ್ ಮನವಿ ಮಾಡಿದರು.
ಜಲಾಶಯದಲ್ಲಿ ಭೋರ್ಗರೆದು ಹರಿಯುತ್ತಿರುವ ನೀರು ನೋಡಲು, ಅದರೊಂದಿಗೆ ಸ್ವಲ್ಪ ಸಮಯ ಕಾಲ ಕಳೆಯಲು ಕೋಡಿಯ ಬಳಿ ಸಾವಿರಾರು ಜನರು ನಿತ್ಯ ಬರುತ್ತಿದ್ದಾರೆ. ದೀಪಾವಳಿಗೆ ರಜೆಯಿದ್ದ ಪರಿಣಾಮ ಬುಧವಾರ ಪ್ರವಾಸಿಗರ ಸಂಖ್ಯೆ ತುಸು ಜೋರಾಗಿಯೇ ಇತ್ತು.
ಮೂರು ವರ್ಷಗಳಿಂದ ಮನೆ ಮುಂದೆ ನೀರು ನಿಲ್ಲುತ್ತಿದೆ. 2022ರಲ್ಲಿ ನೀರು ನುಗ್ಗಿದ್ದು ಮನೆಯಲ್ಲಿನ ವಸ್ತುಗಳೆಲ್ಲಾ ಹಾಳಾಗಿದ್ದವು. ಪ್ರಾಣ ಉಳಿದರೆ ಸಾಕು ಎಂಬಂತಾಗಿತ್ತು. ಸರ್ಕಾರ ಜಾಗ ನೀಡಿದೆ. ಆದರೆ ಬಿಲ್ ಆಗಿಲ್ಲ. ಇಲ್ಲಿಯೇ ಇರುವಂತಾಗಿದೆ. ಪಾತ್ರೆ ಅಡುಗೆ ಸಾಮಾನುಗಳನ್ನೆಲ್ಲಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವಂತಾಗಿದೆ. ನಮ್ಮ ಗೋಳು ತಪ್ಪಿದರೆ ಸಾಕು –ಸುಜಾತಾ ಪೂಜಾರಹಟ್ಟಿ *** ಹಿನ್ನೀರು ಪ್ರದೇಶದ ವ್ಯಾಪ್ತಿಯ ಪೂಜಾರಹಟ್ಟಿ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸಂತ್ರಸ್ತರನ್ನು ಸ್ಥಳಾಂತರಿಸಲಾಗಿದೆ. ಅವರಿಗೆ ಮನೆ ನೀಡಿದ್ದು ಕೆಲ ಅಡಚಣೆಯಿಂದ ಹಸ್ತಾಂತರ ಆಗಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. ಶೀರನಕಟ್ಟೆ ಗ್ರಾಮದ ಸಮೀಪ ಸುಮಾರು 50ರಿಂದ 60 ಎಕರೆ ಖಾತೆ ಜಮೀನುಗಳು ಜಲಾವೃತಗೊಂಡಿವೆ –ತಿರುಪತಿ ಪಾಟೀಲ್ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.