ಹೊಸದುರ್ಗ: ಪಟ್ಟಣದ ಖಾಸಗಿ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು, ಪ್ರಯಾಣಿಕರ ಯಾತನೆ ಹೇಳತೀರದಾಗಿದೆ.
ಅಡ್ಡಾದಿಡ್ಡಿಯಾಗಿ ಬೈಕ್‌ಗಳನ್ನು ನಿಲ್ಲಿಸುವುದು, ಆಗಾಗ ಬಿಡಾಡಿ ದನಗಳು ನುಗ್ಗುವುದು, ಬೀದಿ ನಾಯಿಗಳ ಓಡಾಟ ಹಾಗೂ ಬಸ್‌ಗಳ ಪಕ್ಕದಲ್ಲಿಯೇ ಖಾಸಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.
‘ಈ ನಿಲ್ದಾಣ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿವೆ. ಆದರೂ ಕುಡಿಯುವ ನೀರು ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ. ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಒದಗಿಸುವುದನ್ನೇ ಮರೆತಿರುವ ಪುರಸಭೆ, ತಾನು ಬಾಡಿಗೆ ನೀಡಿರುವ ಮಳಿಗೆಗಳಲ್ಲೇ ಜನ ಹಣ ನೀಡಿ ಕುಡಿಯುವ ನೀರಿನ ಬಾಟಲಿ ಖರೀದಿಸಬೇಕು ಎಂಬ ಧೋರಣೆ ಅನುಸರಿಸಿದಂತಿದೆ’ ಎಂದು ಪ್ರಯಾಣಿಕರೊಬ್ಬರು ಆರೋಪಿಸಿದರು.
ಬಸ್ ನಿಲ್ದಾಣದ ಒಳ ಆವರಣದಲ್ಲೇ ವ್ಯಾಪಾರಿಗಳು ಕುಳಿತಿರುತ್ತಾರೆ. ಹೀಗಾಗಿ ಪ್ರಯಾಣಿಕರು ಓಡಾಡುವುದಕ್ಕೂ ಕಷ್ಟಪಡಬೇಕು. ರಾತ್ರಿ ಸಮಯದಲ್ಲಿ ಭದ್ರತಾ ಸಿಬ್ಬಂದಿ ಇರುವುದಿಲ್ಲ. ಕೆಲವೊಮ್ಮೆ ಪುಂಡರು ಮದ್ಯ ಸೇವಿಸಿ ಬಾಟಲಿಗಳನ್ನು ಅಲ್ಲಿಯೇ ಎಸೆದು ಹೋಗುತ್ತಾರೆ. ತೆರೆದ ಚರಂಡಿ ವ್ಯವಸ್ಥೆ ಇದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಹ ದುಸ್ಥಿತಿ ಇದೆ.
ಬೇರೆ ಬೇರೆ ಭಾಗಗಳಿಂದ ನಿತ್ಯ ನೂರಾರು ಪ್ರಯಾಣಿಕರು ಇಲ್ಲಿಗೆ ಬರುತ್ತಾರೆ. ಇರುವ ಒಂದೇ ಶೌಚಾಲಯ ಅವ್ಯವಸ್ಥೆಯ ಆಗರವಾಗಿದೆ. ಕೊಠಡಿಗಳಿಗೆ ಬಾಗಿಲುಗಳೇ ಇಲ್ಲ. ಮಳೆ ಬಂದರೆ ಬಸ್ ನಿಲ್ದಾಣವೆಲ್ಲಾ ಸೋರುತ್ತದೆ. ಕೂರಲು ಸೂಕ್ತ ಸ್ಥಳವಿಲ್ಲ. ಹೈಮಾಸ್ಟ್ ವಿದ್ಯುತ್ ದೀಪ ದುರಸ್ತಿಗೆ ಬಂದು ತಿಂಗಳುಗಳೇ ಕಳೆದಿದೆ. ಆದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ವ್ಯಾಪಾರಿಗಳಿಂದ ಸಂಚಾರ ದಟ್ಟಣೆ
ಖಾಸಗಿ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಬೀದಿ ಬದಿ ವ್ಯಾಪಾರ ನಡೆಯುತ್ತಿದೆ. ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಾಲಯದಿಂದ ಖಾಸಗಿ ಬಸ್ ನಿಲ್ದಾಣದ ಮುಖ್ಯ ದ್ವಾರದವರೆಗೂ ಬೀದಿ ಬದಿ ವ್ಯಾಪಾರಿಗಳಿರುತ್ತಾರೆ. ಇದರಿಂದ ನಿತ್ಯ ಸಂಚಾರ ದಟ್ಟಣೆ ಏರ್ಪಡುತ್ತಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಶೀಘ್ರವೇ ಸಮಸ್ಯೆ ಪರಿಹರಿಸಬೇಕು ಎಂದು ನಾಗರಿಕರು ಒತ್ತಾಯಿಸುತ್ತಾರೆ.
ಮಾರ್ಗ ಫಲಕಗಳಿಲ್ಲ
ಖಾಸಗಿ ಬಸ್ ನಿಲ್ದಾಣದಲ್ಲಿ ಮಾರ್ಗ ಸೂಚಿಸುವ ಫಲಕಗಳೇ ಇಲ್ಲ. ಇದಕ್ಕಾಗಿ ಪ್ರಯಾಣಿಕರು, ಬಸ್ ಚಾಲಕ ಅಥವಾ ನಿರ್ವಾಹಕರನ್ನು ಕೇಳಬೇಕು. ಆಗ ಅವರು ಆ ಕಡೆ, ಈ ಕಡೆ ಹೋಗಿ ಎನ್ನುತ್ತಾರೆ. ಯಾವ ಕಡೆ ನಿಂತರೆ ತಾವು ಹೋಗಬೇಕಿರುವ ಸ್ಥಳದ ಬಸ್ ಬರಬಹುದು ಎಂಬುದೇ ಪ್ರಯಾಣಿಕರಿಗೆ ತಿಳಿಯದಾಗಿದೆ.
‘ಖಾಸಗಿ ಬಸ್ ನಿಲ್ದಾಣದ ನಾಮಫಲಕ ಕಿತ್ತು ವರ್ಷಗಳೇ ಕಳೆದರೂ ಯಾರೊಬ್ಬರೂ ಈ ಬಗ್ಗೆ ಗಮನಹರಿಸಿಲ್ಲ. ಇದರಿಂದ ಹಳ್ಳಿಗಳಿಂದ ಬರುವ ಪ್ರಯಾಣಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಬಸ್ ತಪ್ಪಿ ಒಮ್ಮೊಮ್ಮೆ ದಿನವಿಡೀ ನಿಲ್ದಾಣದಲ್ಲೇ ಕಾಯುವಂತಹ ಪರಿಸ್ಥಿತಿ ಎದುರಾಗುತ್ತದೆ’ ಎಂಬುದು ಪ್ರಯಾಣಿಕರೊಬ್ಬರ ಅಭಿಪ್ರಾಯ.
ಬಸ್ ನಿಲ್ದಾಣವನ್ನು ಕಾರ್ಮಿಕರು ನಿತ್ಯ ಸ್ವಚ್ಛಗೊಳಿಸುತ್ತಿದ್ದಾರೆ. ವಾಹನಗಳ ನಿಲುಗಡೆಗೆ ಕಡಿವಾಣ ಹಾಕುತ್ತೇವೆ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಇನ್ನಷ್ಟು ಮೂಲ ಸೌಕರ್ಯ ಒದಗಿಸಲಾಗುವುದುಎನ್. ನಾಗಭೂಷಣ್, ಪುರಸಭೆ ಮುಖ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.