ADVERTISEMENT

ಚಿಕ್ಕೋಬನಳ್ಳಿ: ಆಸ್ಪತ್ರೆಗೆ ಸಿಬ್ಬಂದಿ ಕೊರತೆ

ಗಡಿಭಾಗದ ಸರ್ಕಾರಿ ಆರೋಗ್ಯ ಕೇಂದ್ರದ ದುಃಸ್ಥಿತಿ

ಕೊಂಡ್ಲಹಳ್ಳಿ ಜಯಪ್ರಕಾಶ
Published 20 ಏಪ್ರಿಲ್ 2022, 6:38 IST
Last Updated 20 ಏಪ್ರಿಲ್ 2022, 6:38 IST
ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕೋಬನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರ.
ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕೋಬನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರ.   

ಮೊಳಕಾಲ್ಮುರು: ತಾಲ್ಲೂಕಿನ ಬಳ್ಳಾರಿ ಜಿಲ್ಲೆ ಗಡಿಭಾಗದ ಗ್ರಾಮವಾದ ಚಿಕ್ಕೋಬನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದ್ದು, ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

ತುಮಕೂರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕೋಬನಹಳ್ಳಿಯಲ್ಲಿ ಸತತ ಹೋರಾಟದ ಪ್ರಯತ್ನವಾಗಿ 4 ವರ್ಷಗಳ ಹಿಂದೆ ಸರ್ಕಾರಿ ಆರೋಗ್ಯಕೇಂದ್ರವನ್ನು ಸ್ಥಾಪಿಸಲಾಯಿತು. ತಾಲ್ಲೂಕಿನ ಕಡೆಯ ಗ್ರಾಮವಾದ ಚಿಕ್ಕೋಬನಹಳ್ಳಿ ಆಸ್ಪತ್ರೆಯು ಮೊಳಕಾಲ್ಮುರು ಮತ್ತು ಪಕ್ಕದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಹಲವು ಗ್ರಾಮಗಳ ಜನರಿಗೆ ಕೇಂದ್ರಬಿಂದುವಾಗಿದೆ. ನಿತ್ಯ 60-70ಕ್ಕೂ ಹೆಚ್ಚು ರೋಗಿಗಳು ಈ ಆಸ್ಪತ್ರೆಗೆ ಹೊರರೋಗಿ ಘಟಕದಲ್ಲಿ ಬಂದು ಹೋಗುತ್ತಾರೆ.

ಆಡಳಿತ ವೈದ್ಯಾಧಿಕಾರಿ ಹುದ್ದೆ ಖಾಲಿ ಇದ್ದು, ಒಬ್ಬ ಆಯುಷ್ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈಚೆಗೆ ಈ ವೈದ್ಯರ ಸೇವೆಯನ್ನು ಸರ್ಕಾರ ಕಾಯಂಗೊಳಿಸಿರುವ ಪರಿಣಾಮ ಶೀಘ್ರದಲ್ಲಿ ಬೇರೆ ಆಸ್ಪತ್ರೆಗೆ ವರ್ಗಾವಣೆ ಆಗಲಿದ್ದಾರೆ. ನಂತರ ಹೊಸದಾಗಿ ವೈದ್ಯರು ಇಲ್ಲಿಗೆ ಬರಬೇಕಿದೆ. ಉಳಿದಂತೆ ಫಾರ್ಮಸಿಸ್ಟ್, ಕಚೇರಿ ಸಿಬ್ಬಂದಿ, ಶ್ರುಶೂಷಕಿಯರ ಹುದ್ದೆಗಳು ಖಾಲಿ ಇದೆ. ಶ್ರುಶ್ರೂಷಕಿಯರ ಹುದ್ದೆ ಖಾಲಿ ಇರುವ ಕಾರಣ ಮಹಿಳಾ ರೋಗಿಗಳಿಗೆ, ಗರ್ಭಿಣಿಯರಿಗೆ ಹೆಚ್ಚು ತೊಂದರೆಯಾಗಿದೆ.

ADVERTISEMENT

ಸಿಬ್ಬಂದಿ ಕೊರತೆ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ನೇಮಕ ಮಾಡುವುದಾಗಿ ಭರವಸೆ ನೀಡಿದ್ದು, ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಪರಿಶಿಷ್ಟ ಜಾತಿ, ಪಂಗಡದ ಕೂಲಿ ಕಾರ್ಮಿಕರು ಹೆಚ್ಚಿರುವ ಇಲ್ಲಿ ಸಾರಿಗೆ ಸಮಸ್ಯೆಯೂ ಅಧಿಕವಾಗಿ. ಇದರಿಂದಾಗಿ ಈ ಆಸ್ಪತ್ರೆಯನ್ನು ಹೆಚ್ಚಿನ ಜನರು ನಂಬಿಕೊಂಡಿದ್ದಾರೆ. ಕೂಡಲೇ ಎಂಬಿಬಿಎಸ್ ವೈದ್ಯರ ನೇಮಕ ಸೇರಿದಂತೆ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಒ. ಕರಿಬಸಪ್ಪ ಮನವಿ ಮಾಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಧುಕುಮಾರ್ 'ಪ್ರಜಾವಾಣಿ' ಜತೆ ಮಾತನಾಡಿ, ಖಾಲಿ ಹುದ್ದೆಗಳನ್ನು ತುಂಬುವಂತೆ ಕೋರಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ತಾತ್ಕಾಲಿಕವಾಗಿ ಶ್ರುಶೂಷಕಿರಯನ್ನು ನಿಯೋಜನೆ ಮಾಡಿದ್ದು, ರಾಜಕೀಯ ಒತ್ತಡ ತಂದು ನಿಯೋಜನೆ ಸಿಬ್ಬಂದಿ ಸೇವೆಗೆ ಬರುತ್ತಿಲ್ಲ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಆಗುತ್ತಿರುವ ತೊಂದರೆ ಗಮನಕ್ಕೆ ಬಂದಿದೆ ಎಂದರು.

ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

* ಸಾರ್ವಜನಿಕರು ವಂತಿಕೆ ನೀಡಿ, ಸ್ಥಳ ಕೊಟ್ಟು ಆಸ್ಪತ್ರೆ ನಿರ್ಮಿಸಲು ಸಹಕರಿಸಿದ್ದಾರೆ. ಸಿಬ್ಬಂದಿ ನೇಮಕ ಮಾಡಿ ಸೇವೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ.

-ಒ. ಕರಿಬಸಪ್ಪ, ಗ್ರಾಮ ಪಂಚಾಯಿತಿ ಸದಸ್ಯ

* ಚಿಕ್ಕೋಬನಹಳ್ಳಿ ಆಸ್ಪತ್ರೆಯನ್ನು 24X7 ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮಂಜೂರಾತಿ ಸಿಕ್ಕಲ್ಲಿ ಹೆಚ್ಚಿನ ಅನುಕೂಲವಾಗಲಿದೆ.

-ಡಾ. ಮಧುಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.