ADVERTISEMENT

ಚಿತ್ರದುರ್ಗ | ಬಿಸಿಲ ಬೇಗೆ: ತಾಳೆ ಹಣ್ಣಿಗೆ ಹೆಚ್ಚಿದ ಬೇಡಿಕೆ

ಆರೋಗ್ಯಕ್ಕೆ ಒಳ್ಳೆಯ ಹಣ್ಣು; ಆಯಾಸ ಕಡಿಮೆ ಮಾಡುವ ದಿವ್ಯೌಷಧ

ಶಿವಗಂಗಾ ಚಿತ್ತಯ್ಯ
Published 14 ಮೇ 2025, 5:54 IST
Last Updated 14 ಮೇ 2025, 5:54 IST
ಚಳ್ಳಕೆರೆ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ತಾಳೆದ ಹಣ್ಣು ಮಾರಾಟ ಜೋರಾಗಿದೆ
ಚಳ್ಳಕೆರೆ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ತಾಳೆದ ಹಣ್ಣು ಮಾರಾಟ ಜೋರಾಗಿದೆ   

ಚಳ್ಳಕೆರೆ: ಹೆಚ್ಚುತ್ತಿರುವ ಬಿಸಿಲಿನ ಬೇಗೆಯಿಂದ ಬಳಲಿದವರು ಬಾಯಾರಿಕೆ ತಣಿಸಿಕೊಳ್ಳಲು ಹೆಚ್ಚು ಪೋಷಕಾಂಶ ಮತ್ತು ರೋಗ ನಿರೋಧಕ ಗುಣವುಳ್ಳ ತಾಳೆಯ ಎಳನೀರಿಗೆ (ಗಂಜಿ) ನಗರದ ಜನರು ಮೊರೆ ಹೋಗಿದ್ದಾರೆ.

ತೀವ್ರ ಬೇಡಿಕೆ ಇರುವ ಕಾರಣ ತಮಿಳುನಾಡು ಮತ್ತು ಕಲ್ಯಾಣದುರ್ಗದಿಂದ ವಾರಕ್ಕೊಮ್ಮೆ ತಾಳೆ ಎಳಗಂಜಿಯನ್ನು ಲಾರಿ ಮೂಲಕ ತಂದು ನಗರದ ಮುಖ್ಯರಸ್ತೆ ಬದಿಯಲ್ಲಿ ರಾಶಿ ರಾಶಿ ಹಾಕಲಾಗುತ್ತಿದೆ.

ಬೇಸಿಗೆ ದಿನಗಳಲ್ಲಿ ತಿನ್ನಲೇಬೇಕಾದ ಹಣ್ಣುಗಳಲ್ಲಿ ತಾಳೆ ಹಣ್ಣು ಒಂದಾಗಿದ್ದು, ಎಳೆಕಾಯಿ ಒಳಭಾಗದಲ್ಲಿ ತಿಳಿ ಬಿಳಿ ಬಣ್ಣದ  ಗಂಜಿ ಕೈಯಲ್ಲಿ ಜಾರುತ್ತದೆ. ಬಾಯಲ್ಲಿಟ್ಟರೆ ಕರಗುತ್ತದೆ. ರುಚಿಕರವಾಗಿರುತ್ತದೆ. ನೋಡಲು ಜಲ್ಲಿನಂತೆ ಇರುವ ಇದನ್ನು ತಿಂದಾಗ ದೇಹಕ್ಕೆ ಅತ್ಯಂತ ತಂಪಿನ ಅನುಭವವಾಗುತ್ತದೆ. ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ, ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡಿ ಯಕೃತ್‍ ಅನ್ನು ಆರೋಗ್ಯವಾಗಿರಿಸಲು ಸಹಕಾರಿ ಎನ್ನಲಾಗಿದೆ. ಇದರ ಮಹತ್ವ ತಿಳಿದವರು ತಾಳೆದ ಎಳಗಂಜಿಯತ್ತ ಅಕರ್ಷಿತರಾಗಿದ್ದಾರೆ.

ADVERTISEMENT

ಸ್ಥಳೀಯ ವ್ಯಾಪಾರಿಗಳು ಮಾಲೀಕರಿಂದ ಖರೀದಿಸಿದ ತಾಳೆಯ ಹಣ್ಣನ್ನು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಜನವಸತಿ ಪ್ರದೇಶಗಳಿಗೆ ಹೋಗಿ ಪ್ರತಿಯೊಂದಕ್ಕೆ ₹ 50ರಿಂದ ₹ 60ಕ್ಕೆ ಮಾರಾಟ ಮಾಡುವ ಮೂಲಕ ಉತ್ತಮ ಆದಾಯ ಪಡೆಯುತ್ತಿದ್ದಾರೆ.

ತಾಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಪೊಟ್ಯಾಶಿಯಂ, ಪ್ರೊಟೀನ್, ಸತು, ರಂಜಕ, ಕ್ಯಾಲ್ಸಿಯಂ, ವಿಟಮಿನ್ ‘ಬಿ’, ಕಬ್ಬಿಣಾಂಶ ಹೆಚ್ಚು ಇದೆ. ಇದನ್ನು ತಿನ್ನುವುದರಿಂದ ದೇಹದ ಆಯಾಸ ದೂರವಾಗುತ್ತದೆ. ವಾಕರಿಕೆ ಮತ್ತು ಬೆಳಗಿನ ಬೇನೆ ಕಡಿಮೆ ಮಾಡುತ್ತದೆ. ತಲೆ ಸುತ್ತು, ವಾಂತಿ ಬೇಧಿ ಶಮನಗೊಳಿಸುವ ಗುಣ ಹೊಂದಿದೆ. ಅಪರೂಪಕ್ಕೆ ಮಾರುಕಟ್ಟೆಗೆ ಬರುವ ಈ ತಾಳೆ ಎಳನೀರನ್ನು ಜನರು ಹೆಚ್ಚು ಬಳಕೆ ಮಾಡುತ್ತಾರೆ ಎಂದು ವಿವರಿಸುತ್ತಾರೆ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ.

ಕೃಷಿ ಭೂಮಿ ಮಾತ್ರವಲ್ಲದೆ, ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲೂ, ಹಳ್ಳದ ಸಾಲು ಮತ್ತು ತಗ್ಗು ಪ್ರದೇಶದಲ್ಲೂ ತಾಳೆ ಬೆಳೆಯಬಹುದು. ಸರ್ಕಾರದ ಸಹಾಯಧನ ಬಳಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ತಾಳೆ ಬೆಳೆಯುವ ಮೂಲಕ ಅಧಿಕ ಆದಾಯ ಪಡೆಯಬಹುದು ಎಂದು ಅವರು ಸಲಹೆ ನೀಡುತ್ತಾರೆ.

ಚಳ್ಳಕೆರೆ–ಚಿತ್ರದುರ್ಗ ರಸ್ತೆಯಲ್ಲಿ ತಾಳೆದ ಹಣ್ಣು ಖರೀದಿಸುತ್ತಿರುವ ಜನ
4 ಟನ್ ತಾಳೆ ಕಾಯಿ ತರುತ್ತೇನೆ. ವಾರದಲ್ಲಿ ಎಲ್ಲವೂ ಖಾಲಿಯಾಗುತ್ತದೆ. ದಿನಕ್ಕೆ ₹ 3000ದಿಂದ ₹ 4000 ವ್ಯಾಪಾರವಾಗುತ್ತದೆ
ಯೋಗೇಶ್ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.