ADVERTISEMENT

ಸ್ವಾತಂತ್ರ್ಯದ ತಂಗಾಳಿ ಬೀಸಿದ ‘ಹೃದಯದ ತೀರ್ಪು’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:16 IST
Last Updated 9 ನವೆಂಬರ್ 2025, 6:16 IST
‘ಹೃದಯದ ತೀರ್ಪು’ ನಾಟಕದ ದೃಶ್ಯ
‘ಹೃದಯದ ತೀರ್ಪು’ ನಾಟಕದ ದೃಶ್ಯ   

ಚಿತ್ರದುರ್ಗ: ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಅವರ ಕಥೆಯನ್ನಾಧರಿಸಿದ ‘ಹೃದಯದ ತೀರ್ಪು’ ರಂಗಪ್ರಯೋಗ ಮುಸ್ಲಿಂ ಕುಟುಂಬವೊಂದರಲ್ಲಿ ನಡೆಯುವ ವೃತ್ತಂತದ ಮೇಲೆ ಬೆಳಕು ಚೆಲ್ಲುತ್ತದೆ. ಆ ಮೂಲಕ ಇಡೀ ಸಮಾಜಕ್ಕೆ ಬೆಳಕಾಗುವ ಮಾರ್ಗದ ಹುಡುಕಾಟ ನಡೆಸುತ್ತದೆ.

ನಗರದ ಮುರುಘಾಮಠದ ಬಸವೇಶ್ವರ ಸಭಾಂಗಣದಲ್ಲಿ ರಂಗಸೌರಭ ಕಲಾ ಸಂಘ, ದೀವಿಗೆ ಎಜುಕೇಷನ್ ಟ್ರಸ್ಟ್, ಎಸ್.ಜೆ.ಎಂ. ವಿದ್ಯಾಪೀಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ  ನೀನಾಸಂ ತಿರುಗಾಟದ ಈ ನಾಟಕ ನೋಡುಗರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಅತ್ತೆ– ಸೊಸೆಯ ನಡುವಿನ ಮತ್ಸರ ಕೇವಲ ಕುಟುಂಬಕ್ಕಷ್ಟೇ ಸೀಮಿತವಾಗಿಲ್ಲ. ಅದು ವ್ಯಕ್ತಿ, ಜಾತಿ, ಧರ್ಮವನ್ನೂ ಮೀರಿದ್ದು. ಪತ್ನಿ ಪ್ರೀತಿ ಹಾಗೂ ತಾಯಿಯ ಮಮತೆಯನ್ನು ಹೊಂದಾಣಿಕೆ ಅಸ್ತ್ರದ ಮೂಲಕವೇ ಗೆಲ್ಲಬೇಕು. ಅಂತಹ ಒಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ ಮುಸ್ಲಿಂ ವ್ಯಕ್ತಿಯೊಬ್ಬ ಕೋಪದಲ್ಲಿ ಕೈಗೊಳ್ಳುವ ನಿರ್ಧಾರವೊಂದು ಸಮಾಜದ ಕಣ್ಣು ತೆರೆಸುವಂತಿದ್ದರೆ ಹೇಗೆ? 

ADVERTISEMENT

ತಾಯಿ ಮೆಹಬೂಬಿ ಮತ್ತು ಹೆಂಡತಿ ಅಖಿಲಾ ನಡುವಿನ ಗೊಂದಲದಿಂದ ಹಣ್ಣಿನ ವ್ಯಾಪಾರಿ ಯೂಸುಫ್‌ ಹೈರಾಣಾಗುತ್ತಾರೆ. ತಾಯಿಯ ಕಾಳಜಿ ಮಾಡಿದರೆ ಪತ್ನಿಯ ಕೋಪ ನೆತ್ತಿಗೇರುತ್ತದೆ. ತಾಯಿಯ ಮೇಲಿನ ಪ್ರೀತಿಯೇ ಅವಳಿಗೆ ಪತಿಯನ್ನು ಶತ್ರುವಿನ ಸ್ಥಾನದಲ್ಲಿ ನಿಲ್ಲಿಸುತ್ತದೆ. ಪತ್ನಿಯ ಕಾಟ ತಡೆಯಲಾಗದೇ ಯೂಸುಫ್‌ ಮನೆಯನ್ನು ಇಬ್ಬಾಗ ಮಾಡಿ ಪತ್ನಿ, ತಾಯಿಯನ್ನು ಬೇರೆ ಬೇರೆಯಲ್ಲೇ ಇರಿಸುತ್ತಾರೆ. ಆದರೂ ಸಮಸ್ಯೆ ಮುಗಿಯುವುದಿಲ್ಲ.

ತಾಯಿಗೆ ತರುವ ವಸ್ತುಗಳನ್ನೆಲ್ಲ ಹೆಂಡತಿಗೂ ತರುತ್ತಾನೆ. ತಾಯಿ ಕಡೆ ನೋಟ ಬೀರಿದರೂ, ಪತಿ ತನ್ನತ್ತ ಪ್ರೀತಿ ತೋರಿಸುತ್ತಿಲ್ಲ ಎಂದು ಕಂಗಾಲಾಗುತ್ತಾಳೆ. ಅಂತಹ ಸ್ಥಿತಿಯಲ್ಲಿ ಪತಿ–ಪತ್ನಿ ಜಗಳ ಉತ್ತುಂಗಕ್ಕೇರುತ್ತದೆ. ‘ನಿನ್ನಂಥ ನೂರು ಹೆಂಡತಿಯರನ್ನು ತರಬಲ್ಲೆ, ಇನ್ನೊಬ್ಬ ತಾಯಿಯನ್ನು ತರಬಹುದೇ?‘ ಎಂಬ ಮಾತು ಪ್ರೇಕ್ಷಕರ ಕಣ್ಣರಳಿಸುತ್ತದೆ.

ಆಗ ಯೂಸುಫ್‌ ಕೈಗೊಳ್ಳುವ ನಿರ್ಧಾರ ಹೊಸ ಚಿಂತನೆಗಳ ಬೀಜ ಬಿತ್ತುತ್ತದೆ. ಮುಪ್ಪಿನ ಸ್ಥಿತಿಯಲ್ಲಿರುವ ತಾಯಿಗೆ ಮದುವೆ ಮಾಡುವ ಘೋಷಣೆ ಮಾಡುತ್ತಾರೆ. ತಾಯಿಗೆ ಗಂಡು ಹುಡುಕಿ ಮದುವೆ ಮಾಡಿಯೇ ತೀರುತ್ತೇನೆಂದು ಪತ್ನಿ ಎದುರು ಸವಾಲು ಹಾಕುತ್ತಾರೆ.

ಜಗಳದ ನಡುವೆ ತೂರಿಬಂದ ಮಾತಿಗೆ ಕಟ್ಟು ಬಿದ್ದ ಯೂಸುಫ್‌ ತಾಯಿಗೆ ಗಂಡು ಹುಡುಕುವ ಕೆಲಸ ಮಾಡುತ್ತಾನೆ. ಈ ವಿಚಾರವನ್ನು ತಾಯಿಗೆ ತಿಳಿಸದೆಯೇ ಮದುವೆ ತಯಾರಿ ನಡೆಸುತ್ತಾನೆ. ಇತ್ತ ಪತ್ನಿ ಅವಮಾನದಲ್ಲಿ ಕಂಪಿಸುತ್ತಾಳೆ. ತನ್ನ ತಪ್ಪಿನಿಂದ ಪತಿ ಈ ನಿರ್ಧಾರ ಕೈಗೊಂಡಿದ್ದಾರೆ. ಹೇಗಾದರೂ ಮಾಡಿ ಮದುವೆ ತಪ್ಪಿಸಬೇಕು, ಕುಟುಂಬದ ಮರ್ಯಾದೆ ಕಾಪಾಡಬೇಕು ಎನ್ನುವ ತೀರ್ಮಾನಕ್ಕೆ ಬರುತ್ತಾಳೆ. ಪಂಚಾಯಿತಿ ಸೇರಿಸುತ್ತಾಳೆ.

ಪಂಚಾಯಿತಿ ವೇಳೆ ಮೆಹಬೂಬಿಗೆ ತನ್ನ ಮಗ ಮಾಡುತ್ತಿರುವ ಮದುವೆ ಸಿದ್ಧತೆಯ ವಿಷಯ ತಿಳಿಯುತ್ತದೆ. ತಾಯಿ ಮದುವೆ ತಿರಸ್ಕಾರ ಮಾಡುತ್ತಾಳೆ ಅಲ್ಲವೇ? ಮಗನ ನಿರ್ಧಾರಕ್ಕೆ ಕುಗ್ಗಿ ಹೋಗುತ್ತಾಳಲ್ಲವೇ? ಮಗನ ವಿರುದ್ಧ ಕೆಂಡವಾಗುತ್ತಾಳೆ ತಾನೆ? ಮಗ ಕೂಡ ಇದೇ ಚಿಂತನೆಯಲ್ಲಿರುತ್ತಾನೆ. ಕೋಪದಲ್ಲಿ ಮಾಡಿದ ನಿರ್ಧಾರದಿಂದ ತಾಯಿಗೆ ನೋವಾಯಿತಾ ಎಂದು ಮರುಗುತ್ತಾನೆ.

ಇಂತಹ ಕುತೂಹಲಕರ ಸನ್ನಿವೇಶದಲ್ಲಿ ಮಗನ ನಿರ್ಧಾರವನ್ನು ಕೇಳಿದೊಡನೆ ತಾಯಿ ಮತ್ತಷ್ಟು ಚೈತನ್ಯ ಪಡೆದುಕೊಳ್ಳುತ್ತಾಳೆ. ಮೆಹಬೂಬಿಯ ಮೊಗ ಅರಳಿ ಶಕ್ತಿಯ ಗೆರೆ ಮೂಡಿಸುತ್ತದೆ. ‘ಮಗ ನಿರ್ಧಾರ ಮಾಡಿದಂತೆ ತಾನು ಮದುವೆಯಾಗಲು ಸಿದ್ಧ’ ಎಂಬ ನಿರ್ಧಾರ ಪ್ರಕಟಿಸುತ್ತಾಳೆ. ಎಲ್ಲಾ ಸಮಸ್ಯೆಗಳಿಗೂ ಮದುವೆ ಒಂದು ಪರಿಹಾರವಾಗಿ ಕಾಣುತ್ತದೆ. ಮಗ– ಸೊಸೆಯ ಬದುಕಿನಿಂದ ಹೊರ ಬಂದು ಸ್ವಾತಂತ್ರ್ಯದ ಆರ್ದ್ರ ಕ್ಷಣದೊಂದಿಗೆ ಕತೆ ಮುಗಿಯುತ್ತದೆ.

ಮುಸ್ಲಿಂ ಸಮುದಾಯದ ಪರಿಸರದಲ್ಲಿ ಎಲ್ಲೆಗಳನ್ನು ಮೀರಿ ಹೆಣ್ಣಿನ ನೋಟದ ಅನನ್ಯತೆಯನ್ನು ಈ ರಂಗ ಪ್ರಯೋಗ ಕಟ್ಟಿಕೊಡುತ್ತದೆ. ನಾಟಕದ ವಸ್ತು ಹಳೆಯದಾದರೂ ನೋಟದಲ್ಲಿ ಹೊಸತಾದ ಚಿಂತನೆಯನ್ನು ಹುಟ್ಟು ಹಾಕುತ್ತದೆ. ನೀನಾಸಂ ಕಲಾವಿದರ ಅನನ್ಯ ಅಭಿನಯ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತದೆ. ಎಂ.ಗಣೇಶ್‌ ಅವರ ಸಮರ್ಥ ನಿರ್ದೇಶನ ಗಮನ ಸೆಳೆಯುತ್ತದೆ.

ಮನುಷ್ಯ ಜೀವನ ಕೈಗನ್ನಡಿ

ನಾಟಕೋತ್ಸವಕ್ಕೆ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಚಾಲನೆ ನೀಡಿದರು. ‘ಸಮಾಜಮುಖಿಯಾಗಿ ಪ್ರದರ್ಶನಗೊಳ್ಳುವ ನೀನಾಸಂ ನಾಟಕಗಳು ಮನುಷ್ಯ ಜೀವನದ ಕೈಗನ್ನಡಿಯಾಗಿವೆ. ಯುವಕರು ರಂಗಭೂಮಿಯ ಆಯಾಮಗಳನ್ನು ಅಳವಡಿಸಿಕೊಂಡರೆ ಉತ್ತಮ ಬದುಕು ಕಂಡುಕೊಳ್ಳಬಹುದು’ ಎಂದರು. ಹಿರಿಯ ಪತ್ರಕರ್ತ ಉಜ್ಜೀನಪ್ಪ ‘ಸಂಗ್ಯಾ–ಬಾಳ್ಯ’ ನಾಟಕದ ರಂಗಗೀತೆಯನ್ನು ಹಾಡಿ ಗಮನ ಸೆಳೆದರು. ಎಸ್.ಜೆ.ಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್ ಬಸವಕುಮಾರ ಸ್ವಾಮೀಜಿ ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಎಂವಿ.ನಟರಾಜ್ ಶ್ಯಾಮಲ ನಾಗರಾಜ್ ಎಂ.ವಿ ಫಣಿರಾಜ ಗಣೇಶ್ ಭೀಮನಕೋಣೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.