
ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಸೂಜಿಕಲ್ ಗ್ರಾಮದಲ್ಲಿ ನೆಲೆಸಿರುವ ಶಕ್ತಿದೇವತೆ ಕೆಂಚಾಂಬಿಕಾ ದೇವಿಯ ರಥೋತ್ಸವ ಜ. 30ರಂದು ಮಧ್ಯಾಹ್ನ ನಡೆಯಲಿದೆ.
ರಥೋತ್ಸವದ ಅಂಗವಾಗಿ ಜ. 26ರಿಂದಲೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 26ರಂದು ಗಂಗಾಪೂಜೆ, ಕುಂಕುಮಾರ್ಚನೆ, ಮಹಾಮಂಗಳಾರತಿ ನೇರವೇರಿಸುವ ಮೂಲಕ ರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
27 ಹಾಗೂ 28ರಂದು ದೇವಿಗೆ ಅರ್ಚನೆ, ಪೂಜೆ ಸೇರಿ ಹಲವು ಕಾರ್ಯಗಳನ್ನು ಧಾರ್ಮಿಕ ವಿಧಿಗಳನ್ವಯ ನೇರವೇರಿಸಲಾಯಿತು. 29 ರಂದು ರಾತ್ರಿ ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಜ. 29 ರ ರಾತ್ರಿ ನೂರಾರು ಭಕ್ತರ ಸಮ್ಮುಖದಲ್ಲಿ ಬೇವಿನ ಉಡುಗೆ, ಬಾನದ ಸೇವೆ, ಪಾನಕದ ಸೇವೆ, ಚೋಮನ ಕುಣಿತದೊಂದಿಗೆ ಸೂಜಿಕಲ್, ಗರಗ ಹಾಗೂ ತಂಡಗ ಗ್ರಾಮದ ಘಟೆಸೇವೆ ನಡೆಯಿತು.
ಜ. 30ರಂದು ಮಧ್ಯಾಹ್ನ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ರಥೋತ್ಸವದ ನಂತರ ಚಂದ್ರಮಂಡಲೋತ್ಸವ ನಡೆಯಲಿದೆ. ರಥೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆಯಿರಿ ಎಂದು ಆಡಳಿತ ಸಮಿತಿ ಸದಸ್ಯರು ಹಾಗೂ ಧರ್ಮದರ್ಶಿಗಳು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.