ADVERTISEMENT

ಬಿಜೆಪಿಗೆ ಧೈರ್ಯ ಇದ್ದರೆ ಲೇಪಾಕ್ಷಿ ಉಚ್ಚಾಟಿಸಲಿ

ಹರಿಹರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸವಾಲು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2020, 7:51 IST
Last Updated 25 ಅಕ್ಟೋಬರ್ 2020, 7:51 IST
ಹೊಳಲ್ಕೆರೆಯಲ್ಲಿ ಶನಿವಾರ ನಡೆದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯನ್ನು ಹರಿಹರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಉದ್ಘಾಟಿಸಿದರು
ಹೊಳಲ್ಕೆರೆಯಲ್ಲಿ ಶನಿವಾರ ನಡೆದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯನ್ನು ಹರಿಹರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಉದ್ಘಾಟಿಸಿದರು   

ಹೊಳಲ್ಕೆರೆ: ಬಿಜೆಪಿಯವರಿಗೆ ಧೈರ್ಯ ಇದ್ದರೆ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಲೇಪಾಕ್ಷಿ ಅವರನ್ನು ಉಚ್ಚಾಟಿಸಲಿ ಎಂದು ಹರಿಹರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸವಾಲು ಹಾಕಿದರು.

ಪಟ್ಟಣದಲ್ಲಿ ಶನಿವಾರ ನಡೆದ ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ ಪರ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು
ಮಾತನಾಡಿದರು.

ಬಿಜೆಪಿಯವರು ಹಿಂದುಳಿದ ವರ್ಗಕ್ಕೆ ಸೇರಿದ ಪಕ್ಷೇತರ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. ವೀರಶೈವ ಮತದಾರರು ಪಕ್ಷದ ವಿರುದ್ಧ ಸಿಡಿದೇಳುತ್ತಾರೆ ಎಂದು ಹೆದರಿ ಲೇಪಾಕ್ಷಿ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಅವರ ಜಾತಿ ರಾಜಕಾರಣವನ್ನು ಎತ್ತಿ ತೋರಿಸುತ್ತಿದೆ. ತಾಕತ್ತಿದ್ದರೆ ಲೇಪಾಕ್ಷಿ ಅವರನ್ನೂ ಪಕ್ಷದಿಂದ ಉಚ್ಚಾಟಿಸಲಿ ಎಂದರು.

ADVERTISEMENT

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ್, ‘ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಅಭ್ಯರ್ಥಿಗಳು ಸಿಗದೆ ಬೇರೆ ಪಕ್ಷದವರನ್ನು ಕರೆದು ಟಿಕೆಟ್ ನೀಡಿದ್ದಾರೆ. ನಮ್ಮ ಅಭ್ಯರ್ಥಿ ಚೌಡರೆಡ್ಡಿ ಅವರು ಹೆಚ್ಚು ಮತಗಳಿಂದ ಗೆಲುವು ಸಾಧಿಸುತ್ತಾರೆ. ಬಿಜೆಪಿ ನಾಲ್ಕನೇ ಸ್ಥಾನಕ್ಕೆ ಕುಸಿಯುತ್ತದೆ’ ಎಂದರು.

ಜೆಡಿಎಸ್ ಮುಖಂಡ ಶ್ರೀನಿವಾಸ ಗದ್ದಿಗೆ, ‘ಶಿಕ್ಷಣ ಕ್ಷೇತ್ರಕ್ಕೆ ಜೆಡಿಎಸ್ ಕೊಡುಗೆ ಅಪಾರ. ಗೋವಿಂದೇಗೌಡ ಶಿಕ್ಷಣ ಸಚಿವರಾಗಿದ್ದಾಗ ಲಕ್ಷಾಂತರ ಶಿಕ್ಷಕರ ನೇಮಕ ಮಾಡಿದ್ದರು. ಬಸವರಾಜ ಹೊರಟ್ಟಿ ಕೂಡ ಶಿಕ್ಷಕರ ಪರವಾಗಿ ಹೋರಾಟ ಮಾಡಿದ್ದರು’ ಎಂದು ಹೇಳಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಬಿ. ಶೇಖರ್, ಪಕ್ಷದ ಮುಖಂಡ ಶ್ರೀನಿವಾಸ ಗದ್ದಿಗೆ, ಪ್ರಧಾನ ಕಾರ್ಯದರ್ಶಿ ಪರಮೇಶ್ವರ್ ಮೂಲೆಮನೆ ಈಚಘಟ್ಟ, ನಾಗಲಿಂಗಪ್ಪ, ನಟರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.