ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯ ಪ್ರವಾಸಿ ಮಂದಿರದ ಬಳಿ ಇರುವ ಶಿಥಿಲಗೊಂಡ ನಗರಸಭೆ ಸಿಬ್ಬಂದಿ ವಸತಿಗೃಹ
ಚಳ್ಳಕೆರೆ: ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿರ್ವಹಣೆಯ ಕೊರತೆಯಿಂದ ಇಲ್ಲಿನ ಪಾವಗಡ ರಸ್ತೆಯ ಸಂತೆ ಮೈದಾನದ ಬಳಿ ಇರುವ ಪುರಸಭೆ
ಹಳೇ ಕಟ್ಟಡ ಮತ್ತು ಸೋಮಗುದ್ದು ರಸ್ತೆಯ ಪ್ರವಾಸಿ ಮಂದಿರದ
ಬಳಿಯ ನಗರಸಭೆ ಸಿಬ್ಬಂದಿಯ ವಸತಿ ಗೃಹಗಳು ಅಕ್ರಮ ಚಟುವಟಿಕೆಗಳ ತಾಣವಾಗಿವೆ.
ವಿವಿಧ ಮೂಲಗಳಿಂದ ನಗರಸಭೆಗೆ ಸಾಕಷ್ಟು ಆದಾಯ ಬರುತ್ತಿದ್ದರೂ ಶಿಥಿಲಗೊಂಡ ವಸತಿಗೃಹಗಳ ದುರಸ್ತಿ ಮತ್ತು ಹಳೇ ಕಟ್ಟಡ ನೆಲಸಮ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ವಸತಿಗೃಹದ 6 ಕೊಠಡಿಗಳ ಚಾವಣಿಗೆ ಹಾಕಿದ್ದ ಕಬ್ಬಿಣದ ಸರಳುಗಳು ತುಕ್ಕು ಹಿಡಿದು ಚೂರು ಚೂರಾಗಿ ಬೀಳುತ್ತಿವೆ. ಸಿಮೆಂಟ್ ಕಾಂಕ್ರೀಟ್ ಸತ್ವ ಕಳೆದುಕೊಂಡು ಪುಡಿ ಪುಡಿಯಾಗಿ ನೆಲಕ್ಕೆ ಉದುರುತ್ತಿದೆ.
ಮಳೆನೀರಿಗೆ ನೆನೆದ ಕೊಠಡಿಯ ಗೋಡೆಗಳು ಬಿರುಕು ಬಿಟ್ಟಿದ್ದು, ಕಾಂಪೌಂಡ್ ಕುಸಿದು ಬಿದ್ದಿದೆ. ವಿದ್ಯುತ್ ತಂತಿಗಳು ಮತ್ತು ನೀರು ಸರಬರಾಜು ಪೈಪ್ ಕಿತ್ತು ಹೋಗಿವೆ. ಕೊಠಡಿಗೆ ಅಳವಡಿಸಿದ್ದ ಕಿಟಕಿ-ಬಾಗಿಲುಗಳು ಮುರಿದು ಬಿದ್ದಿವೆ. ಶೌಚಾಲಯ ಮತ್ತು ನೀರಿನ ತೊಟ್ಟಿ ಪಾಳುಬಿದ್ದಿವೆ.
ಹಗಲು-ರಾತ್ರಿಯೆನ್ನದೇ ವಸತಿಗೃಹವು ನಿತ್ಯವೂ ಬೀಡಿ, ಸಿಗರೇಟ್, ಗುಟ್ಕಾ ಮತ್ತು ಮದ್ಯಸೇವನೆಯ ತಾಣವಾಗಿದ್ದು ಎಲ್ಲೆಲ್ಲೂ ಮದ್ಯದ ಬಾಟಲಿ, ಬೀಡಿ, ಸಿಗರೇಟ್ ತುಂಡುಗಳು ಚೆಲ್ಲಾಡಿವೆ. ಸುತ್ತ ಬೆಳೆದ ಮುಳ್ಳಿನ ಗಿಡ, ಮರ, ಪೊದೆಯಿಂದಾಗಿ ವಿಷ ಜಂತುಗಳ ಕಾಟ ಹೆಚ್ಚಿದ್ದು, ಇದರಿಂದ ಸುತ್ತ ಮುತ್ತಲಿನ ನಿವಾಸಿಗಳು ತೀವ್ರ ಆತಂಕಗೊಂಡಿದ್ದಾರೆ.
‘ಪಾಳು ಬಿದ್ದಿರುವ ನಗರಸಭೆ ಕೊಠಡಿಯಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ, ಪ್ರತಿದಿನ ವಿದ್ಯಾರ್ಥಿಗಳು ಪಾಠ- ಪ್ರವಚನಕ್ಕೆ ತೆರಳದೆ ಪಾಳು ಬಿದ್ದ ಕೊಠಡಿಯಲ್ಲಿ ಗುಂಪುಗುಂಪಾಗಿ ಸೇರುತ್ತಾರೆ. ಶಿಥಿಲ ಕೊಠಡಿಗಳನ್ನು ದುರಸ್ತಿ ಮಾಡಿಸಿ ಇಲ್ಲವೆ ನೆಲಸಮಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಇಲ್ಲಿನ ನಿವಾಸಿ ಇಂದ್ರೇಶ್ ಒತ್ತಾಯಿಸಿದರು.
ಚಳ್ಳಕೆರೆಯ ಸೋಮಗುದ್ದು ರಸ್ತೆಯ ಪ್ರವಾಸಿ ಮಂದಿರದ ಬಳಿ ಇರುವ ನಗರಸಭೆಯ ಸಿಬ್ಬಂದಿಯ ವಸತಿಗೃಹ
ಕುಸಿದು ಬೀಳುವ ಸ್ಥಿತಿಯಲ್ಲಿ ಹಳೇ ಕಟ್ಟಡ
ತಿರುಗಿ ನೋಡದ ನಗರಸಭೆ ಅಧಿಕಾರಿಗಳು
ವಿಷಜಂತುಗಳ ಕಾಟ; ನಿವಾಸಿಗಳಿಗೆ ಭಯ
ಹಳೆಯ ಕೊಠಡಿಗಳನ್ನು ಏಕಾಏಕಿ ಕೆಡವಲು ಬರುವುದಿಲ್ಲ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಪರಿಶೀಲಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗುವುದು ಪರಿಶೀಲನಾ ವರದಿ ಬಂದ ನಂತರ ಕೊಠಡಿ ದುರಸ್ತಿ ಮಾಡಿಸಲಾಗುವುದುವಿನಯ್, ನಗರಸಭೆ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.