ADVERTISEMENT

ಚಿತ್ರದುರ್ಗ: 48 ಕಿ.ಮೀ ರೈಲು ಮಾರ್ಗ ವಿದ್ಯುದೀಕರಣ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 16:30 IST
Last Updated 1 ಜುಲೈ 2020, 16:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಆಂಧ್ರಪ್ರದೇಶದ ರಾಯದುರ್ಗದಿಂದ ಚಿತ್ರದುರ್ಗ ಜಿಲ್ಲೆಯ ತಳಕುವರೆಗಿನ 48 ಕಿ.ಮೀ. ರೈಲು ಮಾರ್ಗ ವಿದ್ಯುದೀಕರಣಗೊಂಡಿದೆ. ಈ ಮಾರ್ಗದಲ್ಲಿ ಪ್ರಾಯೋಗಿಕವಾಗಿ ರೈಲು ಸಂಚರಿಸಿದ್ದು, ವೇಗ ಹಾಗೂ ಸುರಕ್ಷತೆಯನ್ನು ಪರಿಶೀಲಿಸಲಾಗಿದೆ.

ಬಳ್ಳಾರಿ-ಚಿಕ್ಕಜಾಜೂರು 184 ಕಿ.ಮೀ. ರೈಲು ಮಾರ್ಗವನ್ನು ವಿದ್ಯುದೀಕರಣಗೊಳಿಸುವ ಕಾರ್ಯದಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ತಳಕು– ಬೊಮ್ಮಗುಂಡನಕೆರೆ – ಮೊಳಕಾಲ್ಮೂರು ವಿಭಾಗದಲ್ಲಿ 3 ವಿದ್ಯುತ್‍ ಲೈನ್ ಕ್ರಾಸಿಂಗ್‍ ಹಾಗೂ 4 ಎಲ್‍ಸಿ ಗೇಟ್‍ಗಳಿವೆ. ತಳಕು, ಬೊಮ್ಮಗುಂಡನಕೆರೆ, ಮೊಳಕಾಲ್ಮೂರು ಮತ್ತು ರಾಯದುರ್ಗ ಸೇರಿ 4 ನಿಲ್ದಾಣಗಳಿವೆ ಎಂದು ಪ್ರಕಟಣೆ ತಿಳಿಸಿದೆ.

ರೈಲು ಮಾರ್ಗ ವಿದ್ಯುದೀಕರಣ ಕಾಮಗಾರಿಯನ್ನು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ನಿರ್ವಹಿಸುತ್ತಿದೆ. ಬಳ್ಳಾರಿಯಿಂದ ರಾಯದುರ್ಗ ವರೆಗಿನ 53 ಕಿ.ಮೀ. ಮಾರ್ಗದ ವಿದ್ಯುದೀಕರಣ ಕಾರ್ಯ 2019 ರ ಡಿಸೆಂಬರ್‌ನಲ್ಲಿ ಪೂರ್ಣಗೊಂಡಿದೆ.

ADVERTISEMENT

ರೈಲು ಮಾರ್ಗಗಳ ವಿದ್ಯುದೀಕರಣವು ನೈರುತ್ಯ ರೈಲ್ವೆ ವಿಭಾಗದ ರೈಲುಗಳ ಚಲನಶೀಲತೆಯನ್ನು ಸುಧಾರಿಸಲಿದೆ. ರಾಜ್ಯ ರೈಲ್ವೆ ಜಾಲವನ್ನು ಬಲಪಡಿಸುತ್ತದೆ. ಸಾಂಪ್ರದಾಯಿಕ ಇಂಧನದಿಂದ ವಿದ್ಯುತ್‍ಗೆ ಸ್ಥಳಾಂತರಗೊಳ್ಳುವುದರಿಂದ ಮಾಲಿನ್ಯ ಕಡಿಮೆಯಾಗುತ್ತದೆ. ಗಣನೀಯ ಪ್ರಮಾಣದ ವಿದೇಶಿ ವಿನಿಮಯ ಉಳಿಯುತ್ತದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.