ADVERTISEMENT

ನನೆಗುದಿಗೆ ಬಿದ್ದ ದೇವಾಲಯದ ದಾಸೋಹ ಮಂದಿರ: ಅತಿಥಿಗೃಹಕ್ಕೆ ಬೇಕಿದೆ ಮೂಲಸೌಲಭ್ಯ

ವಿ.ಧನಂಜಯ
Published 11 ಸೆಪ್ಟೆಂಬರ್ 2023, 7:28 IST
Last Updated 11 ಸೆಪ್ಟೆಂಬರ್ 2023, 7:28 IST
ಹಿರಿಯೂರು ತಾಲ್ಲೂಕಿನ ವದ್ದೀಕೆರೆಯ ಸಿದ್ದೇಶ್ವರಸ್ವಾಮಿ ದೇಗುಲದ ಹೊರನೋಟ
ಹಿರಿಯೂರು ತಾಲ್ಲೂಕಿನ ವದ್ದೀಕೆರೆಯ ಸಿದ್ದೇಶ್ವರಸ್ವಾಮಿ ದೇಗುಲದ ಹೊರನೋಟ   

ನಾಯಕನಹಟ್ಟಿ: ಪ್ಲಾಸ್ಟಿಕ್ ಕುರ್ಚಿಗಳು, ಮಂಚವನ್ನು ಹೋಲುವ ಕಡಪ ಕಲ್ಲಿನ ಕಟ್ಟೆಗಳು, ಮಂದವಾದ ಗಾಳಿ ಮತ್ತು ಬೆಳಕಿನ ವ್ಯವಸ್ಥೆ, ಶೌಚಾಲಯಗಳ ದುರ್ವಾಸನೆ, ಕೊಠಡಿಗಳ ಕಮಟು ವಾಸನೆ... ಇಷ್ಟೆಲ್ಲ ಕೊರತೆ ಎದುರಿಸುತ್ತಿರುವುದು ಇಲ್ಲಿನ ಗುರುತಿಪ್ಪೇರುದ್ರಸ್ವಾಮಿ ದೇವಾಲಯದ ಅತಿಥಿಗೃಹ.

ಗುರು ತಿಪ್ಪೇರುದ್ರಸ್ವಾಮಿ ದೇವಾಲಯವು ಮಧ್ಯ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿದ್ದು, ರಾಜ್ಯದಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿದೆ. ವಾರ್ಷಿಕವಾಗಿ 12ರಿಂದ 15ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವರ್ಷದ ಎಲ್ಲ ದಿನಮಾನಗಳಲ್ಲೂ ಪೂಜೆ, ಉತ್ಸವ, ರಥೋತ್ಸವ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಗಳು ಜರುಗುತ್ತವೆ. ಆ ಮೂಲಕ ವಾರ್ಷಿಕ ₹ 3ರಿಂದ ₹ 4 ಕೋಟಿಯಷ್ಟು ಆದಾಯವನ್ನು ಗಳಿಸುತ್ತಿದೆ. ಹಾಗಾಗಿ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯು ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ಒಳಮಠ ಮತ್ತು ಹೊರಮಠ ದೇವಾಲಯಗಳಿಗೆ ‘ಎ’ ಗ್ರೇಡ್ ಮಾನ್ಯತೆ ನೀಡಿದೆ.

ದೇವಾಲಯದ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳಲು ಸರ್ಕಾರವು ತಹಶೀಲ್ದಾರ್ ಗ್ರೇಡ್ ಅಧಿಕಾರಿಯನ್ನು ಕಾರ್ಯನಿರ್ವಹಣಗೆ ನೇಮಿಸಿದೆ. ಜತೆಗೆ ದೇವಾಲಯದ ಮೇಲುಸ್ತುವಾರಿಗೆ ದೈವಸ್ಥರು, ಬಾಬುದಾರರು, ಗ್ರಾಮಸ್ಥರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿ ಇದ್ದು, ಸರ್ಕಾರ ನಾಮನಿರ್ದೇಶನ ಮಾಡುವ ಪದ್ಧತಿ ರೂಢಿಯಲ್ಲಿದೆ. 45ಕ್ಕೂ ಹೆಚ್ಚು ಸಿಬ್ಬಂದಿ ವಿವಿಧ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಆಡಳಿತಾತ್ಮಕ ವ್ಯವಸ್ಥೆಯಿದೆ. ದೇವಾಲಯದಲ್ಲಿ ಅರ್ಚನೆ, ಪೂಜೆ, ಉತ್ಸವಗಳು ಸಂಪ್ರದಾಯದಂತೆ ಜರುಗುತ್ತಿವೆ. ಭಕ್ತರಿಗಾಗಿ ಶುದ್ಧ ಕುಡಿಯುವ ನೀರು, ಅನ್ನದಾಸೋಹ, ಶೌಚಾಲಯಗಳ ವ್ಯವಸ್ಥೆ ಇದೆ. ಆದರೆ, ದೇವಾಲಯದ ಕೆಲವು ಕಟ್ಟಡಗಳಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ.

ADVERTISEMENT

2004ರಲ್ಲಿ ಪಟ್ಟಣದ ಒಳಮಠ ಮತ್ತು ಹೊರಮಠ ದೇವಾಲಯಗಳ ಬಳಿ ತಲಾ ಒಂದೊಂದು ಬೃಹತ್ ಅತಿಥಿಗೃಹ ಸಮುಚ್ಛಯಗಳನ್ನು ನಿರ್ಮಿಸಲಾಗಿದೆ. ಒಳಮಠ ಅತಿಥಿಗೃಹದಲ್ಲಿ 24 ಕೊಠಡಿಗಳು, ಹೊರಮಠ ಅತಿಥಿಗೃಹದಲ್ಲಿ 19 ಕೊಠಡಿಗಳು, ಹೊರಮಠ ಯಾತ್ರಿ ನಿವಾಸದಲ್ಲಿ 6 ಕೊಠಡಿಗಳು ಇವೆ. 2004ರಲ್ಲಿ ಅಳವಡಿಸಿದ್ದ ಪೀಠೋಪಕರಣಗಳು ಕಾಲ ಕಳೆದಂತೆ ಹಾಳಾಗಿವೆ. ಹೊರಮಠದ ಅತಿಥಿಗೃಹದ ಕೊಠಡಿಗಳಲ್ಲಿ ಮಂಚಗಳು, ಹಾಸಿಗೆಗಳು ಇಲ್ಲ. ಮಂಚದ ಬದಲಿಗೆ ಹಳೆಯ ಕಾಲದ ರೀತಿ ಕಲ್ಲಿನ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಈ ಕೊಠಡಿಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯಾಗಲಿ, ಗಾಳಿಯ ವ್ಯವಸ್ಥೆಯಾಗಲಿ ಇಲ್ಲ. ಸ್ವಚ್ಛತೆಯ ಕೊರತೆಯಿಂದಾಗಿ ಕೊಠಡಿಯೊಳಗೆ ಕಮಟು ವಾಸನೆ ಮೂಗಿಗೆ ರಾಚುತ್ತದೆ.

ದೇವರಿಗೆ ಹರಿಕೆ ತೀರಿಸಲು, ದೇವರ ದರ್ಶನ ಪಡೆಯಲು ದೇವಾಲಯಕ್ಕೆ ಬರುವ ಭಕ್ತರು ಅತಿಥಿಗೃಹದ ಅವ್ಯವಸ್ಥೆಗೆ ಬೇಸತ್ತಿದ್ದಾರೆ. ಒಲ್ಲದ ಮನಸ್ಸಿನಿಂದ ಅಲ್ಲಿಯೇ ತಂಗುವ ಪರಿಸ್ಥಿತಿ ಎದುರಾಗಿದೆ. ಬೇರೆ ಧಾರ್ಮಿಕ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿನ ಕೊಠಡಿಗಳ ವ್ಯವಸ್ಥೆ ಹದಗೆಟ್ಟಿದೆ. ಹಾಗಾಗಿ ಪ್ರತಿ ಕೊಠಡಿಗಳಿಗೂ ಪೀಠೋಪಕರಣಗಳ ಹೈಟೆಕ್ ಸ್ಪರ್ಶ ಅಗತ್ಯವಿದೆ. ಮಂಚಗಳು, ಶುಭ್ರವಾದ ಹಾಸಿಗೆ, ಹೊದಿಕೆ, ಶುಚಿಯಾದ ಶೌಚಾಲಯಗಳ ವ್ಯವಸ್ಥೆಯಾಗಬೇಕಿದೆ.

ಸಿದ್ದೇಶ್ವರಸ್ವಾಮಿ ದೇವಸ್ಥಾನ
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಹೊರಮಠ ದೇವಾಲಯದ ಆವರಣದಲ್ಲಿರುವ ಅತಿಥಿಗೃಹ ಸಮುಚ್ಛಯ
ಹೊರಮಠದ ಆವರಣದಲ್ಲಿರುವ ಅತಿಥಿ ಗೃಹದಲ್ಲಿರುವ ಕಲ್ಲಿನ ಬೆಂಚ್
ದೇವಾಲಯದ ಆವರಣದಲ್ಲೇ ಕಸ ಸುಡುತ್ತಿರುವುದು
ಪಿ.ರುದ್ರೇಶ
ಟಿ.ರುದ್ರಮುನಿ
ಸಿದ್ದಪ್ಪಾಜಿ
ಹೊರಮಠದ ಅತಿಥಿಗೃಹವು ಸಮಸ್ಯೆಗಳ ಆಗರ. ಸ್ವಚ್ಛತೆ ಸೇರಿ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಕಸ ವಿಲೇವಾರಿ ಮತ್ತು ಮೂಲಸೌಕರ್ಯಗಳ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕಿದೆ
ಪಿ.ರುದ್ರೇಶ ನಾಯಕನಹಟ್ಟಿ
ನಮ್ಮೂರಿಲ್ಲಿರುವ ಅತಿಥಿಗೃಹಗಳ ಸ್ಥಿತಿ ಶೋಚನೀಯ. ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು. ಹೈಟೆಕ್‍ ಸ್ಪರ್ಶ ನೀಡಲು ಸರ್ಕಾರ ಅನುದಾನ ನೀಡಬೇಕು
ಟಿ.ರುದ್ರಮುನಿ ನಾಯಕನಹಟ್ಟಿ
ಸಿದ್ದೇಶ್ವರಸ್ವಾಮಿ ದರ್ಶನಕ್ಕೂ ಮುನ್ನ ಸ್ನಾನ ಮಾಡಿ ಶುಚಿಯಾಗಲು ಸರಿಯಾದ ವ್ಯವಸ್ಥೆ ಇಲ್ಲ. ವಾಸ್ತವ್ಯ ಹೂಡಲು ಅತಿಥಿಗೃಹ ಕೂಡ ನಿರ್ಮಾಣ ಮಾಡಿಲ್ಲ. ಭಕ್ತರಿಗೆ ಮೂಲಸೌಲಭ್ಯ ಕಲ್ಪಿಸಿದರೆ ಅನುಕೂಲ
ಸಿದ್ದಪ್ಪಾಜಿ ತುಮಕೂರು
ನನೆಗುದಿಗೆ ಬಿದ್ದ ದಾಸೋಹ ಮಂದಿರ
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯವು ಅನ್ನ ದಾಸೋಹಕ್ಕೆ ಪ್ರಸಿದ್ಧಿ ಪಡೆದಿದೆ. ಇಲ್ಲಿ ನಿರಂತರ ದಾಸೋಹ  ನಡೆಯುತ್ತಿದೆ. ಪ್ರಸ್ತುತ ಒಳಮಠ ದೇವಾಲಯದ ಹಿಂಬದಿಯಲ್ಲಿ ಏಕಕಾಲಕ್ಕೆ 300 ಜನ ಕುಳಿತು ಊಟ ಮಾಡುವ ದಾಸೋಹ ಭವನವಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಶ್ರಾವಣ ಮಾಸದಲ್ಲಿ ಸಮುದಾಯ ಭವನದಲ್ಲಿ ದಾಸೋಹ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ. ಇದನ್ನೆಲ್ಲ ಮನಗಂಡ ದೇವಾಲಯದ ಆಡಳಿತ ಸಮಿತಿ ₹ 4.95 ಕೋಟಿ ವೆಚ್ಚದಲ್ಲಿ 2015ರಲ್ಲಿ ನೂತನ ದಾಸೋಹ ಭವನ ನಿರ್ಮಾಣಕ್ಕೆ ಮುಂದಾಗಿತ್ತು. ಕಟ್ಟಡ ನಿರ್ಮಾಣ ಜಾಗದ ವಿವಾದ ಹೈಕೋರ್ಟ್‌ ಮೆಟ್ಟಿಲೇರಿತು. ಕಾನೂನು ತೊಡಕುಗಳು ನಿವಾರಣೆಯಾದರೂ ಭವನಕ್ಕೆ ಮುಕ್ತಿ ಸಿಕ್ಕಿಲ್ಲ. ಭವನ ನಿರ್ಮಾಣಕ್ಕೆ ನವೀಕೃತ ದರಪಟ್ಟಿ ಸಿದ್ಧಪಡಿಸಿ ಇಲಾಖೆಯ ಅನುಮೋದನೆಗೆ ರವಾನಿಸಲಾಗಿದೆ. ಹೀಗಾಗಿ ನನೆಗುದಿಗೆ ಬಿದ್ದಿರುವ ದಾಸೋಹ ಭವನ ನಿರ್ಮಾಣವು ಸದ್ಯಕ್ಕೆ ಮರೀಚಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.