ಹಿರಿಯೂರು: ಭದ್ರಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು, ಜಲಾಶಯದ ನೀರಿನ ಮಟ್ಟ 150 ಅಡಿ ತಲುಪಿರುವ ಕಾರಣ ಅಲ್ಲಿನ ನೀರನ್ನು ವಾಣಿವಿಲಾಸಕ್ಕೆ ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಭಾನುವಾರ ನಗರದಲ್ಲಿ ನಡೆದ ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರು ರೈತರ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಒತ್ತಾಯಿಸಲಾಯಿತು.
ನೀರಾವರಿ ಖಾತೆ ಮುಖ್ಯಮಂತ್ರಿ ಬಳಿ ಇದ್ದು, ನೀರು ಹರಿಸುವ ಕುರಿತು ಚರ್ಚಿಸಲು ಭೇಟಿಗೆ ಸಮಯಾವಕಾಶ ಕೊಡಿಸುವಂತೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಕೇಳಿದ್ದು, ಈ ಬಗ್ಗೆ ಸಿಎಂ ಬಳಿ ಮಾತನಾಡುವುದಾಗಿ ತಿಳಿಸಿದ್ದಾರೆ. ಭದ್ರಾ ಮೇಲ್ದಂಡೆ ಕಾಮಗಾರಿಯಲ್ಲಿ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ 12 ಕಿ.ಮೀ. ಕಾಮಗಾರಿ ವಿಳಂಬವಾಗಿದ್ದು, ಅದನ್ನು ಚುರುಕುಗೊಳಿಸಬೇಕು. ಎತ್ತಿನಹೊಳೆಯಿಂದ ವೇದಾವತಿ ನದಿ ಮೂಲಕ ವಾಣಿವಿಲಾಸಕ್ಕೆ ನೀರು ಹರಿಸುವುದಾಗಿ ಹಿಂದಿನ ವರ್ಷ ಸರ್ಕಾರ ನಿರ್ಧಾರ ಮಾಡಿದ್ದು, ಶೀಘ್ರ ಜಾರಿ ಮಾಡುವಂತೆಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನ ಸೆಳೆಯುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಯಿತು.
‘ವಿವಿ ಸಾಗರ ಜಲಾಶಯದ ಸಾಮರ್ಥ್ಯ 30 ಟಿಎಂಸಿ ಅಡಿ. ಅದನ್ನು ಸದ್ಬಳಕೆ ಮಾಡಿಕೊಳ್ಳಲು ಮೀಸಲಿರುವ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಕೇಂದ್ರ ಸರ್ಕಾರದ ಸಂಸ್ಥೆಗಳು ಮತ್ತು ಹಳ್ಳಿಗಳಿಗೆ ಕುಡಿಯುವ ನೀರು ಕೊಡುವ ಮಧ್ಯ ಕರ್ನಾಟಕದ ಏಕೈಕ ಜಲಪಾತ್ರೆಯಾಗಿರುವ ವಿವಿ ಸಾಗರ ಜಲಾಶಯದ ಸಂಗ್ರಹ ಸಾಮರ್ಥ್ಯಕ್ಕೆ ಅನುಗುಣವಾಗಿ ನೀರು ತುಂಬಿಸಲು ವಿಸ್ತೃತ ಯೋಜನೆ ರೂಪಿಸಬೇಕು. ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ಕೇವಲ ಒಂದು ಪಂಪ್ ಮಾತ್ರ ತೆರೆಯಲು ಸಾಧ್ಯವಾಗಿದ್ದು, ಜುಲೈ 1ರಿಂದ ಮಾರ್ಚ್ 31ರವರೆಗೆ ನಿರಂತರವಾಗಿ ಹರಿಸಬೇಕು’ ಎಂದು ಒತ್ತಾಯಿಸಲಾಯಿತು.
‘ವೇದಾವತಿ ನದಿ ಪಾತ್ರದ ಪಿಟ್ಲಾಲಿ ಮತ್ತು ಆಲೂರು ಗ್ರಾಮಗಳ ನಡುವೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಈಗಾಗಲೇ ತಾಂತ್ರಿಕ ಒಪ್ಪಿಗೆ ದೊರೆತಿದ್ದು, ಆರ್ಥಿಕ ಇಲಾಖೆ ಅನುಮೋದನೆ ಪಡೆದು ಟೆಂಡರ್ ಕರೆಯಬೇಕು. ಸುವರ್ಣಮುಖಿ ನದಿಪಾತ್ರದ ದೊಡ್ಡಕಟ್ಟೆ–ಹೂವಿನಹೊಳೆ ಗ್ರಾಮಗಳ ನಡುವೆ ಮತ್ತೊಂದು ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ತಾಂತ್ರಿಕ ಒಪ್ಪಿಗೆ ಪಡೆಯಬೇಕು. ಎತ್ತಿನಹೊಳೆ ನೀರನ್ನು ಹರಿಸುವ ಸಂಬಂಧ ಸಂಸದ ನಾರಾಯಣಸ್ವಾಮಿ ಅವರೊಂದಿಗೆ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿ ಸಾಧ್ಯತೆಗಳ ಪರಿಶೀಲನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ ಕೆ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಈಚೆಗೆ ಅಕಾಲಿಕವಾಗಿ ಮೃತಪಟ್ಟ ಸಮಿತಿ ನಿರ್ದೇಶಕರಾದ ಸಿದ್ಧನಾಯಕ ಮತ್ತು ಆರ್.ಕೆ. ಸದಾಶಿವಪ್ಪ ಅವರಿಗೆ ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಎಚ್. ಆರ್. ತಿಮ್ಮಯ್ಯ, ಸಂಚಾಲಕ ಎಸ್. ಬಿ. ಶಿವಕುಮಾರ್, ಸಿ. ಸಿದ್ದರಾಮಣ್ಣ, ಬಬ್ಬೂರು ಸುರೇಶ್, ವಿವಿಪುರ ವಿಶ್ವನಾಥ್, ಷಫಿಉಲ್ಲಾ ಮಾಸ್ಟರ್, ಎಲ್.ಆನಂದಶೆಟ್ಟಿ, ಎಂಎಂಎಂ ಮಣಿ, ಮಂಜುನಾಥ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.