
ಮೊಳಕಾಲ್ಮುರು: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಸೇರಿದಂತೆ ಎಲ್ಲಾ ಬೆಳೆಗಳು ನಷ್ಟಕ್ಕೀಡಾಗಿದ್ದು, ಈ ಬಗ್ಗೆ ವಿವರವಾದ ವರದಿ ನೀಡಿದಲ್ಲಿ ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ಹೇಳಿದರು.
ತಾಲ್ಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಬಹುತೇಕ ಎಲ್ಲಾ ರೈತರು ನಷ್ಟಕ್ಕೀಡಾಗಿದ್ದಾರೆ. ಫಸಲ್ ಬಿಮಾ ವಿಮೆ ಮಾಡಿಸಿದ ರೈತರಿಗೆ ಪರಿಹಾರ ಸಿಗಬಹುದು. ಆದರೆ ವಿಮೆ ಮಾಡಿಸದ ರೈತರು ಅನ್ಯಾಯಕ್ಕೆ ಒಳಗಾಗುತ್ತಾರೆ. ಆದ್ದರಿಂದ ಎಲ್ಲಾ ರೈತರಿಗೆ ಸಾಮೂಹಿಕ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ತಕ್ಷಣ ವರದಿ ಸಿದ್ಧಪಡಿಸಿ’ ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
‘ಮೂರು ವರ್ಷಗಳಿಂದ ತಾಲ್ಲೂಕಿನಲ್ಲಿ ಜಲಜೀವನ್ ಮಿಷನ್ ಕಾಮಗಾರಿ ನಡೆಯುತ್ತಿದ್ದು ಇನ್ನೂ ಪೂರ್ಣವಾಗಿಲ್ಲ. ರಸ್ತೆಗಳಲ್ಲಿ ಅಗೆದಿರುವ ಗುಂಡಿಗಳನ್ನು ಮುಚ್ಚಿಲ್ಲ. ಹೀಗಾದರೆ ಯೋಜನೆ ಅಡಿ ನೀವು ನೀರು ನೀಡುವುದು ಯಾವಾಗ?’ ಎಂದು ಶಾಸಕ ಎನ್‌ವೈಜಿ ಪ್ರಶ್ನಿಸಿದರು.
‘ಬಹುತೇಕ ಕಡೆ ಕಾಮಗಾರಿ ಮುಕ್ತಾಯವಾಗಿದೆ. ಬಾಕಿ ಇರುವ ಕಡೆ ಚುರುಕು ನೀಡಿ ಶೀಘ್ರ ಪೂರ್ಣಗೊಳಿಸಗುವುದು’ ಇಒ ಹನುಮಂತಪ್ಪ ಉತ್ತರಿಸಿದರು.
‘ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಸಂಬಂಧಪಟ್ಟ ಸ್ಥಳ, ಜಮೀನು ಒತ್ತುವರಿಯಾಗಿದ್ದರೆ ವಶಕ್ಕೆ ಪಡೆದುಕೊಳ್ಳಬೇಕು. ಏನಾದರೂ ಸಮಸ್ಯೆ ಎದುರಾದಲ್ಲಿ ಪೊಲೀಸರ ಸಹಕಾರ ಪಡೆದುಕೊಳ್ಳಬೇಕು. ಕೊಂಡ್ಲಹಳ್ಳಿಯಲ್ಲಿ ಕಸ್ತೂರಬಾ ಬಾಲಿಕಾ ವಸತಿ ನಿಲಯ ಕಟ್ಟಡ ನಿರ್ಮಿಸಲು ಅನುದಾನ ಮಂಜೂರಾಗಿದೆ. ಗ್ರಾಮದ ಲೇಔಟ್ ಒಂದರಲ್ಲಿರುವ ಸರ್ಕಾರದ ಮೀಸಲು ನಿವೇಶನದಲ್ಲಿ ಇದನ್ನು ನಿರ್ಮಿಸುವ ಉದ್ದೇಶವಿದೆ. ನಿವೇಶನ ವಶಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಖಡಕ್ ಸೂಚನೆ ನೀಡಿದರು.
ತಾಲ್ಲೂಕಿನಲ್ಲಿ ನಕಲಿ ವೈದ್ಯರ ಸಮಸ್ಯೆ ಹೆಚ್ಚಿದ್ದು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಸೂಚಿಸಲಾಗಿದೆ. ಆದರೂ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಸಮಸ್ಯೆ ಎದುರಾಗುವ ಮೊದಲು ಈ ಕುರಿತು ಕ್ರಮ ಜರುಗಿಸಬೇಕು. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯಾಧಿಕಾರಿಯು ಈ ಬಗ್ಗೆ ಗಮನ ಹರಿಸಬೇಕು. ಪುಟ್‌ಪಾತ್ ಹೋಟೆಲ್‌ಗಳಲ್ಲಿ ಸತ್ತ ಕೋಳಿ ಹಾಗೂ ಒಡೆದ ಮೊಟ್ಟೆಗಳನ್ನು ಬಳಸುತ್ತಿರುವ ದೂರು ಇದ್ದು ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಗೋಪಾಲಕೃಷ್ಣ ಹೇಳಿದರು.
ತಹಶೀಲ್ದಾರ್ ಟಿ. ಜಗದೀಶ್, ತಾಲ್ಲೂಕು ಪಂಚಾಯಿತಿ ಇಒ ಹನುಮಂತಪ್ಪ, ಸಿಪಿಐ ಆರ್. ನಾಗರಾಜ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.