ADVERTISEMENT

ಒಳಮೀಸಲಾತಿ | ಸ್ಪಷ್ಟತೆ ನೀಡಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಿ: ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:38 IST
Last Updated 2 ಮಾರ್ಚ್ 2026, 6:38 IST
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಷಡಕ್ಷರಮುನಿ ಸ್ವಾಮೀಜಿ
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಷಡಕ್ಷರಮುನಿ ಸ್ವಾಮೀಜಿ   

ಚಿತ್ರದುರ್ಗ: ‘ಒಳಮೀಸಲಾತಿ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದ್ಧತೆ, ದಲಿತಪರ ಕಾಳಜಿ ಪ್ರಶ್ನಾತೀತ. ಆದರೆ 56,432 ಹುದ್ದೆಗಳ ನೇಮಕಾತಿ ಬಗ್ಗೆ ಅವರು ಸ್ಪಷ್ಟತೆ ನೀಡಿದ ಬಳಿಕವೇ ಪ್ರಕ್ರಿಯೆ ಕೈಗೊಳ್ಳಬೇಕು’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಗ್ರಹಿಸಿದರು.

‘ಶೇ 56ರಷ್ಟು ಮೀಸಲಾತಿ ಪ್ರಮಾಣಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಆದ್ದರಿಂದ ನೇಮಕಾತಿಯಲ್ಲಿ ಯಾರಿಗೂ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಬೇಕು. ಇಲ್ಲವಾದಲ್ಲಿ ಸಮುದಾಯ ಮತ್ತೆ ಬೀದಿಗಿಳಿದು ಹೋರಾಟ ಮಾಡಲಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘30 ವರ್ಷ ಹೋರಾಟ ನಡೆಸಿದ ಪರಿಣಾಮ ಒಳಮೀಸಲಾತಿ ಜಾರಿಗೊಂಡಿದ್ದರೂ ಗೊಂದಲಗಳು ಮುಂದುವರಿದಿವೆ. ನೇಮಕಾತಿ ಪ್ರಕ್ರಿಯೆಯಲ್ಲಿ ಒಳಮೀಸಲಾತಿ ಅನ್ವಯಿಸುತ್ತದೆಯೇ, ಇಲ್ಲವೋ ಎಂಬ ಸ್ಪಷ್ಟತೆ ಇಲ್ಲವಾಗಿದೆ. ಇದರಿಂದ ಮಾದಿಗ ಸಮುದಾಯ ಆತಂಕಕ್ಕೆ ಒಳಗಾಗಿದೆ. ಈ ಗೊಂದಲಕ್ಕೆ ಮೊದಲು ತೆರೆ ಎಳೆಯುವ ಕೆಲಸ ಮಾಡಬೇಕು’ ಎಂದರು.

ADVERTISEMENT

‘ಒಳ ಮೀಸಲಾತಿ ವಿಷಯವನ್ನು ಪರಿಶಿಷ್ಟ ಸಮುದಾಯಗಳ ನಾಯಕರು, ಸಂಘಟಕರು ಪರಸ್ಪರ ಪರಿಹರಿಸಿಕೊಂಡಲ್ಲಿ ಮಾತ್ರ ನೇಮಕಾತಿ ಪ್ರಕ್ರಿಯೆಯು ಸುಗಮವಾಗಿ ನಡೆದಾಗ ಮಾತ್ರ ನಿರುದ್ಯೋಗಿಗಳಿಗೆ ನ್ಯಾಯ ಸಿಗುತ್ತದೆ. ಈ ನಿಟ್ಟಿನಲ್ಲಿ ಸಚಿವರು, ಶಾಸಕರು ಮತ್ತು ಸಂಘಟನೆಗಳ ಮುಖಂಡರೆಲ್ಲರೂ ಸರ್ವ ಜನಾಂಗಗಳ ಒಟ್ಟಾರೆ ಹಿತದಲ್ಲಿ ತಮ್ಮ ತಮ್ಮ ಸಮುದಾಯಗಳ ಹಿತವೂ ಅಡಕವಾಗಿರುವುದನ್ನು ಅರಿತು ನೇಮಕಾತಿ ಪ್ರಕ್ರಿಯೆ ತೀವ್ರಗೊಳಿಸಲು ಅನುಕೂಲ ಆಗುವಂತೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಒಳ ಮೀಸಲಾತಿ ನಿಯಮ ಅನುಸರಿಸಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಇಲ್ಲವಾದಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯ ಆಗಲಿದೆ. ಮಾದಿಗ ಸಮುದಾಯಕ್ಕೆ ಅನ್ಯಾಯವಾದರೆ ನಾವು ಸುಮ್ಮನಿರುವುದಿಲ್ಲ. ಯಾವುದೇ ರೀತಿಯ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ’ ಎಂದು ಹಿರಿಯೂರು ಆದಿಜಾಂಬವ ಗುರುಪೀಠದ ಷಡಕ್ಷರಮುನಿ ಸ್ವಾಮೀಜಿ ಎಚ್ಚರಿಸಿದರು.

‘ಒಳಮೀಸಲಾತಿ ವಿಷಯದಲ್ಲಿ ಸರ್ಕಾರ ಅಸಡ್ಡೆ ಪ್ರದರ್ಶಿಸಬಾರದು. ಊಟಕ್ಕೆ ಕರೆದು ತಟ್ಟೆ ಕಸಿದುಕೊಳ್ಳುವುದು, ಅನ್ನಕ್ಕೆ ಕನ್ನ ಹಾಕುವುದು ಮಾನವೀಯತೆಯ ಲಕ್ಷಣವಲ್ಲ. ಸಾಮಾಜಿಕ ನ್ಯಾಯದ ಹರಿಕಾರವೆಂಬ ಭೂಷಣಕ್ಕೆ ಧಕ್ಕೆ ಆಗದ ರೀತಿ ಅಸ್ಪೃಶ್ಯ ಮಾದಿಗರಿಗೆ ನ್ಯಾಯ ಕೊಡಿಸಲು ಸಿದ್ದರಾಮಯ್ಯ ಮುಂದಾಗಬೇಕು’ ಎಂದು ಒತ್ತಾಯಿಸಿದರು.

‘ನಮ್ಮ ಬೇಡಿಕೆ ಕಡೆಗಣಿಸಿ ಮುಂದವರೆದರೆ ಇಡೀ ರಾಜ್ಯದ ಮಾದಿಗ ಸಮುದಾಯ ಹೋರಾಟಕ್ಕೆ ಇಳಿಯಲಿದೆ. ಅನಿವಾರ್ಯವಾದರೆ ಪಾದಯಾತ್ರೆ ಕೈಗೊಳ್ಳಲು ನಾವು ಸಿದ್ಧ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.