ADVERTISEMENT

ಚಿತ್ರದುರ್ಗ | ಒಳಮೀಸಲಾತಿ ಘೋಷಿಸದಿದ್ದರೆ ತಮಟೆ ಚಳವಳಿ: ಮೋಹನ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 5:32 IST
Last Updated 18 ಆಗಸ್ಟ್ 2025, 5:32 IST
ಜಿ.ಎಚ್‌.ಮೋಹನ್‌ ಕುಮಾರ್
ಜಿ.ಎಚ್‌.ಮೋಹನ್‌ ಕುಮಾರ್   

ಚಿತ್ರದುರ್ಗ: ‘ಒಳಮೀಸಲಾತಿ ಜಾರಿ ಸಂಬಂಧ ಕಾಲಹರಣದ ನೀತಿ ಬಿಟ್ಟು ಆ.19ರಂದು ಅಂತಿಮ ನಿರ್ಧಾರ ಪ್ರಕಟಿಸಿ ಒಳಮೀಸಲಾತಿ ಘೋಷಿಸಬೇಕು. ಇಲ್ಲವಾದಲ್ಲಿ ಸರ್ಕಾರವನ್ನು ಎಚ್ಚರಿಸಲು ರಾಜ್ಯದಾದ್ಯಂತ ತಮಟೆ ಚಳವಳಿ ನಡೆಸಲಾಗುತ್ತದೆ’ ಎಂದು ಸ್ವಾಭಿಮಾನಿ ಮಾದಿಗರ ಮಹಾಸಭಾದ ಸಂಚಾಲಕ ಜಿ.ಎಚ್‌.ಮೋಹನ್‌ ಕುಮಾರ್‌ ಎಚ್ಚರಿಸಿದರು.

‘ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗದ ವರದಿಯಂತೆ ಒಳಮೀಸಲಾತಿ ಘೋಷಣೆ ಮಾಡಬೇಕು. ಒಂದು ವೇಳೆ ಅಂದಿನ ಸಂಪುಟ ಸಭೆಯಲ್ಲಿ ಮತ್ತೊಂದು ಸಮಿತಿ ರಚಿಸಲು ಮುಂದಾದರೆ ಉಗ್ರ ಹೋರಾಟಕ್ಕೆ ಇಳಿಯುವುದು ಖಚಿತ. ಯಾವುದೇ ಕಾರಣಕ್ಕೂ ಈ ನಿರ್ಧಾರಕ್ಕೆ ಅವಕಾಶ ಕಲ್ಪಿಸಬೇಡಿ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆಯೋಗ ರಚಿಸುವುದು ಮಾದಿಗ ಸಮಾಜದ ಬೇಡಿಕೆಯಾಗಿರಲಿಲ್ಲ. ಆಯೋಗದ ಕಾರ್ಯ ಕಲಾಪದಲ್ಲಿ ಒಂದೇ ಸಮುದಾಯದ ಅಧಿಕಾರಿಗಳೇ ಕಾರ್ಯನಿರ್ವಹಿಸಿದ್ದಾರೆ. ಈಗ ಅದೇ ಜನ ವರದಿಯ ಬಗ್ಗೆ ತಕರಾರು ತೆಗೆದು ಸಂಪುಟ ಉಪಸಮಿತಿ ರಚಿಸುವ ಹುನ್ನಾರದ ಹಿಂದೆ ಸಕ್ರಿಯರಾಗಿದ್ದಾರೆ. ಇದು ಒಳ ಮೀಸಲಾತಿ ಕುರಿತಾದ ಕಾಂಗ್ರೆಸ್ಸಿನ ವಿಳಂಬ ನೀತಿಯಾಗಿದ್ದು ನಿಧಾನ ದ್ರೋಹದ ಮುಂದುವರಿದ ಭಾಗವಾಗಿದೆ’ ಎಂದು ಕಿಡಿಕಾರಿದರು.

ADVERTISEMENT

‘ಒಳಮೀಸಲಾತಿ ಜಾರಿ ಆಗುವವರೆಗೆ ಉದ್ಯೋಗ ಅವಕಾಶಕ್ಕೆ ಅವಕಾಶ ನೀಡದ ಕಾರಣ ಪರಿಶಿಷ್ಟ ಜಾತಿಯ ಅಲ್ಲದ ಸಮಾಜಗಳೂ ಸಮಸ್ಯೆಗೆ ಸಿಲುಕಿವೆ. ಉದ್ಯೋಗ ಅವಕಾಶಗಳನ್ನು ನಿಲ್ಲಿಸಿ, ಎಲ್ಲ ಮೂರು ಗುಂಪಿನ ದಲಿತರನ್ನು ಬೀದಿಗೆ ಬರುವಂತೆ ಮಾಡಿರುವುದು ಸಿದ್ದರಾಮಯ್ಯನವರ ಸಾಧನೆಯಾಗಿದೆ. ಆ. 19ರಂದು ಅಂತಿಮ ನಿರ್ಧಾರ ಪ್ರಕಟಿಸಿ ಒಳಮೀಸಲಾತಿ ಘೋಷಿಸಬೇಕು. ಬೇರೆ ಮಾರ್ಗ ಅನುಸರಿಸಿದರೆ ಹೋರಾಟ ಖಚಿತ’ ಎಂದರು.

‘ಸಚಿವ ಸಂಪುಟ ಸಭೆಯನ್ನು ಮುಂದೆ ಹಾಕಿ, ಎಲ್ಲ ಜಾತಿ, ಉಪಜಾತಿಗಳವರನ್ನು ಬೀದಿಗೆ ಇಳಿಸಿ, ಗೊಂದಲ ಹುಟ್ಟುಹಾಕಲು ಸಂಪುಟದ ಸದಸ್ಯರೇ ಮುಂದಾಗಿದ್ದರೆ. ಆದರೂ ಸಿದ್ದರಾಮಯ್ಯನವರೂ ಏನೂ ಮಾಡುತ್ತಿಲ್ಲ. ಈಗ ಪರಿಸ್ಥಿತಿ ಎಷ್ಟು ಬಿಗಾಡಿಯಿಸಿದೆ ಎಂದರೆ ಸಿದ್ದರಾಮಯ್ಯನವರಿಗೆ ಸಚಿವ ಸಂಪುಟ ನಡೆಸಲೂ ಸಾಧ್ಯವಾಗುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಂಯೋಜಕ) ರಾಜ್ಯ ಘಟಕದ ಅಧ್ಯಕ್ಷ ಎಚ್‌. ಮಹಾಂತೇಶ ತಿಳಿಸಿದರು.

ಮುಖಂಡರಾದ ರುದ್ರಮುನಿ, ಚನ್ನಗಾನಹಳ್ಳಿ ಮಲ್ಲೇಶ್‌, ಪ್ರಹ್ಲಾದ್‌, ಬಸಣ್ಣ, ತಿಪ್ಪೇಸ್ವಾಮಿ, ಪರಶುರಾಮ್, ಕೃಷ್ಣಮೂರ್ತಿ ಇದ್ದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದರೆ ಸಾಕು ವಿಳಂಬ ದ್ರೋಹದ ಚಾಳಿ ಮಾಮೂಲಾಗಿದೆ. ಸ್ವತಂತ್ರವಾಗಿ ಒಂದು ಸಚಿವ ಸಂಪುಟ ಸಭೆ ನಡೆಸುವಷ್ಟೂ ಹಿಡಿತ ಉಳಿಸಿಕೊಂಡಿಲ್ಲ
. ಜಿ.ಎಚ್‌.ಮೋಹನ್‌ ಕುಮಾರ್ ಸಂಚಾಲಕ ಸ್ವಾಭಿಮಾನಿ ಮಾದಿಗರ ಮಹಾಸಭಾ

‘ಬಲಾಬಲ ಪ್ರದರ್ಶನ ಒಳ್ಳೆಯ ಬೆಳವಣಿಗೆ ಅಲ್ಲ’

‘ಸರ್ಕಾರದ ವಿಳಂಬ ನೀತಿಯ ಸಮಾಯಾವಕಾಶ ಬಳಸಿಕೊಂಡು ನಮ್ಮ ಸೋದರ ಗುಂಪಿನವರು ಬಲಾಬಲ ಪ್ರದರ್ಶನಕ್ಕೆ ಇಳಿದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸರ್ಕಾರದಲ್ಲಿ ಪ್ರಭಾವಿ ಸಚಿವರೂ ತಮ್ಮವರೇ ಇದ್ದರೂ ಅನಗತ್ಯವಾಗಿ ಬೀದಿಗಿಳಿದು ದ್ವೇಷ ಭಾಷಣ ಮಾಡುವುದು ಪರಸ್ಪರ ಅಂತರ ಹೆಚ್ಚು ಮಾಡುತ್ತದೆ. ಈ ಬೆಳವಣಿಗೆಗಳ ಹಿಂದೆ ಇದ್ದಾರೆಂಬ ಮಾಹಿತಿಗಳು ಬಂದಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಯ್ಯಪ್ಪ ಬೇಸರ ವ್ಯಕ್ತಪಡಿಸಿದರು. ‘ಆ.1ಕ್ಕೆ ಸುಪ್ರೀಂಕೋರ್ಟ್‌ ತೀರ್ಪು ಬಂದು ವರ್ಷ ಕಳೆಯಿತು. ಆದರೆ ಒಂದು ಹೆಜ್ಜೆಯೂ ಮುಂದೆ ಹಾಕದೆ ಯಾರದೋ ಅಣತಿಗೆ ತಕ್ಕಂತೆ ಸಿದ್ದರಾಮಯ್ಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಗಮನಿಸಿದರೆ ನಾಗಮೋಹನ್‌ ದಾಸ್‌ ವರದಿಗೂ ಕಾಂತರಾಜ್‌ ವರದಿಗೆ ಆದ ಗತಿಯೇ ಆಗುತ್ತವೆಯೇನೊ ಎಂಬ ಆತಂಕ ಎದುರಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.