ADVERTISEMENT

ಮಾನವೀಯ ಮೌಲ್ಯ ಬೆಳೆಸುವ ಶಿಕ್ಷಣ ಅಗತ್ಯ: ಜೆ. ಸಣ್ಣಪ್ಪ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:40 IST
Last Updated 26 ಫೆಬ್ರುವರಿ 2026, 6:40 IST
ಹಿರಿಯೂರಿನ ವಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ವಿಚಾರ ಸಂಕಿರಣವನ್ನು ನಿವೃತ್ತ ಪ್ರಾಧ್ಯಾಪಕ ಜಿ. ವೆಂಕಟೇಶ್ ಕುಮಾರ್ ಉದ್ಘಾಟಿಸಿದರು
ಹಿರಿಯೂರಿನ ವಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ವಿಚಾರ ಸಂಕಿರಣವನ್ನು ನಿವೃತ್ತ ಪ್ರಾಧ್ಯಾಪಕ ಜಿ. ವೆಂಕಟೇಶ್ ಕುಮಾರ್ ಉದ್ಘಾಟಿಸಿದರು   

ಹಿರಿಯೂರು: ಯುವಕರಲ್ಲಿ ತಾರ್ಕಿಕ ಮನೋಭಾವ, ವೈಜ್ಞಾನಿಕ ಚಿಂತನೆ, ಮಾನವೀಯ ಮೌಲ್ಯಗಳನ್ನು ಬೆಳೆಸುವಂತಹ ಶಿಕ್ಷಣದ ಅಗತ್ಯವಿದೆ ಎಂದು ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಜೆ. ಸಣ್ಣಪ್ಪ ಹೇಳಿದರು.

ನಗರದ ವಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಮೈಸೂರಿನ ಅರಿವಿನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಯುವಕರಲ್ಲಿ ವೈಜ್ಞಾನಿಕ ಚಿಂತನೆ, ತಾರ್ಕಿಕತೆ ಮತ್ತು ಮಾನವೀಯ ಮೌಲ್ಯಗಳ ಅಗತ್ಯತೆ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವ’ ಎಂಬ ವಿಷಯದ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಮಾನವೀಯ ಮೌಲ್ಯಗಳಿಲ್ಲದೆ ಜವಾಬ್ದಾರಿಯುತ ಸಮಾಜ ನಿರ್ಮಾಣ ಅಸಾಧ್ಯ. ಕುವೆಂಪು ಅವರು ಕಂಡಿದ್ದ ವೈಚಾರಿಕತೆಯನ್ನು ನಾವೆಲ್ಲ ಅಳವಡಿಸಿಕೊಳ್ಳಬೇಕಿದೆ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ವಿದ್ಯಾರ್ಥಿಗಳು ಅಂಧಶ್ರದ್ಧೆ, ಮೂಢನಂಬಿಕೆಗಳಿಂದ ದೂರ ಇರಬೇಕು ಎಂದು ತಿಳಿಸಿದರು.

ADVERTISEMENT

ವಿಚಾರ ಸಂಕಿರಣ ಉದ್ಘಾಟಿಸಿದ ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಜಿ. ವೆಂಕಟೇಶ್ ಕುಮಾರ್ ‘ಯುವಕರ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ ಎಷ್ಟಿದೆ ಎಂಬುದು ಊಹಾತೀತ. ಸ್ವಂತ ಆಲೋಚನೆಗಳ ಮೂಲಕ ನಮ್ಮ ಬದುಕನ್ನು ರೂಪಿಸಿಕೊಳ್ಳುವ ಕಲೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಮತ್ತೊಬ್ಬರ ಬದುಕಿನ ಅನುಕರಣೆ ಒಳ್ಳೆಯ ಲಕ್ಷಣವಲ್ಲ ಎಂದು ಎಚ್ಚರಿಸಿದರು.

ಪ್ರಾಧ್ಯಾಪಕರಾದ ಪ್ರೊ.ಡಿ. ಧರಣೇಂದ್ರಯ್ಯ, ಬಿ.ಆರ್. ಹೇಮಲತಾ, ಆರ್. ಗಂಗಾಧರ, ಜಿ.ಎಸ್. ರಾಮಪ್ಪ, ಮೊಹಮ್ಮದ್ ಸದಾತ್, ಬಿ.ಟಿ. ಭರತ್, ಆರ್.ವಲಿ, ಪಿ.ಎನ್. ನರಸಿಂಹಮೂರ್ತಿ ಉಪಸ್ಥಿತರಿದ್ದರು.

ಪ್ರಾಂಶುಪಾಲ ಪ್ರೊ.ಆರ್. ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಎ. ದೇವಿಕಾ ಸ್ವಾಗತಿಸಿ, ರೇಖಾ ನಿರೂಪಿಸಿ, ಜಯಶ್ರೀ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.