ADVERTISEMENT

ಹಿಂದೂ ಧರ್ಮಕ್ಕೆ ಸಾಂಸ್ಕೃತಿಕ ಸ್ವರೂಪವಿಲ್ಲ: ಜೆ.ಯಾದವ ರೆಡ್ಡಿ ಹೇಳಿಕೆ

ಸ್ವರಾಜ್‌ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವ ರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 2:57 IST
Last Updated 19 ಸೆಪ್ಟೆಂಬರ್ 2022, 2:57 IST
ಯಾದವ ರೆಡ್ಡಿ
ಯಾದವ ರೆಡ್ಡಿ   

ಚಿತ್ರದುರ್ಗ: ‘ಹಿಂದುತ್ವದ ಹೆಸರಿನಲ್ಲಿ ರಾಜಕೀಯವಾಗಿ ಮುನ್ನೆಲೆಗೆ ಬರಲು ಹೊರಟಿರುವ ಬಿಜೆಪಿ ಮತಾಂತರ ನಿಷೇಧ ಕಾಯ್ದೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ’ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜೆ. ಯಾದವರೆಡ್ಡಿ ದೂರಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸಮಗ್ರ ಅಧ್ಯಯನ ವರದಿ ಇಲ್ಲದೆ ಏಕಾಏಕಿ ಮತಾಂತರ ನಿಷೇಧ ಕಾಯ್ದೆಯನ್ನು ವಿಧಾನ ಪರಿಷತ್‌ನಲ್ಲಿ ಮಂಡಿಸಲಾಗಿದೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿಯಾಗಿದೆ. ಮತಾಂತರ ಕುರಿತು ಇಷ್ಟು ವರ್ಷ ಯಾವುದೇ ಸಮಸ್ಯೆ ಅನಾಹುತವಾಗಿಲ್ಲ. ದೊಡ್ಡ ಪ್ರಮಾಣದಲ್ಲಿ ಎಲ್ಲಿಯಾದರೂ ಮತಾಂತರವಾಗಿದ್ದರೆ ಸರ್ಕಾರ ಅಂಕಿ ಅಂಶಗಳನ್ನು ನೀಡಲಿ ’ ಎಂದು ಸವಾಲು ಹಾಕಿದರು.

‘ಕರಪತ್ರ ಹಂಚಿದರೆ, ಕುರಾನ್ ಪಠಿಸಿದರೆ ಮತಾಂತರ ಹೇಗಾಗುತ್ತದೆ. ಅವಕಾಶ ವಂಚಿತರಿಗೆ ಶಿಕ್ಷಣ, ನಿರ್ಗತಿಕರಿಗೆ ಅನ್ನ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದರೆ ಮತಾಂತರದ ಸಮಸ್ಯೆಯೇ ಇರುವುದಿಲ್ಲ. ಇದು ಮಾನವೀಯ ಸಂಬಂಧಗಳನ್ನು ಹಾಳು ಮಾಡುವ ಕಾಯ್ದೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ದೇಶಕ್ಕೆ ಕ್ರಿಶ್ಚಿಯನ್‌ ಹಾಗೂ ಮುಸಲ್ಮಾನರ ಕೊಡುಗೆ ಅಪಾರವಾಗಿದೆ. ಹಿಂದೂ ಧರ್ಮ ಎನ್ನುವುದಕ್ಕೆ ಸಾಂಸ್ಕೃತಿಕ ಸ್ವರೂಪವಿಲ್ಲ. ಸರ್ಕಾರ ಇದೇ ಪ್ರವೃತ್ತಿ ಮುಂದುವರೆಸಿದರೆ ಕಾನೂನು ಮೂಲಕ ಪ್ರಶ್ನಿಸುತ್ತೇವೆ’ ಎಂದು ಎಚ್ಚರಿಸಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ಸ್ವರಾಜ್‌ ಇಂಡಿಯಾ ಪಕ್ಷದ ಕಾರ್ಯಾಧ್ಯಕ್ಷ ಶಿವಕುಮಾರ್‌, ಸದಸ್ಯ ಧನಂಜಯ ಹಂಪಯ್ಯನಮಾಳಿಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.