ADVERTISEMENT

ಜಯಣ್ಣ, ಒಡೆಯರ್ ಪ್ರಾಮಾಣಿಕ ಹೋರಾಟಗಾರರು: ಮಾಜಿ ಸಚಿವ ಎಚ್.ಆಂಜನೇಯ

ನುಡಿನಮನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 13:50 IST
Last Updated 29 ನವೆಂಬರ್ 2020, 13:50 IST
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಹೋರಾಟಗಾರರಾದ ಎಂ.ಜಯಣ್ಣ ಹಾಗೂ ಮುರುಘರಾಜೇಂದ್ರ ಒಡೆಯರ್‌ ನುಡಿನಮನ ಕಾರ್ಯಕ್ರಮವನ್ನು ಮಾಜಿ ಸಚಿವ ಎಚ್.ಆಂಜನೇಯ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಇದ್ದರು.
ಚಿತ್ರದುರ್ಗದಲ್ಲಿ ಭಾನುವಾರ ನಡೆದ ಹೋರಾಟಗಾರರಾದ ಎಂ.ಜಯಣ್ಣ ಹಾಗೂ ಮುರುಘರಾಜೇಂದ್ರ ಒಡೆಯರ್‌ ನುಡಿನಮನ ಕಾರ್ಯಕ್ರಮವನ್ನು ಮಾಜಿ ಸಚಿವ ಎಚ್.ಆಂಜನೇಯ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಇದ್ದರು.   

ಚಿತ್ರದುರ್ಗ: ‘ಜಿಲ್ಲೆಯ ಯಾವುದೇ ಜನಪರ ಹೋರಾಟಗಳಿಗೆ ಸದಾ ಸಿದ್ಧರಿದ್ದ ಎಂ.ಜಯಣ್ಣ ಹಾಗೂ ಮುರುಘರಾಜೇಂದ್ರ ಒಡೆಯರ್ ಪ್ರಾಮಾಣಿಕ ಹೋರಾಟಗಾರರು’ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಐಎಂಎ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಹೋರಾಟಗಾರರಾದ ಎಂ.ಜಯಣ್ಣ ಮತ್ತು ಮುರುಘರಾಜೇಂದ್ರ ಒಡೆಯರ್ ಸ್ಮರಣಾರ್ಥ ಭಾನುವಾರ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಚಿತ್ರದುರ್ಗ ಜಿಲ್ಲೆಯ ನೀರಾವರಿ ಸೌಲಭ್ಯಕ್ಕೆ ಜಯಣ್ಣ ಹೋರಾಟಕ್ಕೆ ಮುಂದಾದ ವೇಳೆ ಈ ಭಾಗಕ್ಕೆ ಭದ್ರಾ ಮೇಲ್ದಂಡೆಯಿಂದ ನೀರು ತರಲು ಸಾಧ್ಯವೇ ಎಂಬ ಅನುಮಾನ ನನಗೂ ಮೂಡಿತ್ತು. ಆದರೆ, ಸಾಧ್ಯವಿದೆ ಎಂಬುದನ್ನು ಇಲ್ಲಿನ ಹೋರಾಟಗಾರರು ತೋರಿಸಿಕೊಟ್ಟಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಇಬ್ಬರೂ ರಾಜಕೀಯವಾಗಿ ಬೆಳೆಯಬಹುದಿತ್ತು. ಬಿಜೆಪಿಯಿಂದ ಟಿಕೆಟ್‌ ಪಡೆದು ಈ ಹಿಂದೆ ಸ್ಪರ್ಧಿಸಿದ್ದ ಒಡೆಯರ್ ಹಾಗೂ ಬಿಎಸ್‌ಪಿಯಲ್ಲಿದ್ದ ಜಯಣ್ಣ ಅದೇ ಪಕ್ಷದಲ್ಲಿದ್ದರೆ, ಇಷ್ಟೊತ್ತಿಗೆ ಯಾವುದಾದರೂ ಅಧಿಕಾರ ಅನುಭವಿಸುತ್ತಿದ್ದರು. ಇವರ ಸಮಕಾಲೀನರು ರಾಜಕೀಯವಾಗಿ ಬೆಳೆದರು. ಇವರು ಮಾತ್ರ ಅಧಿಕಾರದ ಅವಕಾಶಗಳಿಂದ ವಂಚಿತರಾದರು’ ಎಂದು ವಿಷಾದಿಸಿದರು.

‘ಪ್ರೊ.ಬಿ.ಕೃಷ್ಣಪ್ಪ ಅವರೊಂದಿಗೆ ಇದ್ದುಕೊಂಡು ದಲಿತ ಚಳವಳಿ, ಜಾತಿ ವ್ಯವಸ್ಥೆ ವಿರುದ್ಧ ದನಿ ಎತ್ತಿದ ಜಯಣ್ಣ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು. 1994ರ ವಿಧಾನಸಭಾ ಚುನಾವಣೆಯಲ್ಲಿ ಭರಮಸಾಗರ ಕ್ಷೇತ್ರದಲ್ಲಿ ನನಗೆ ಪ್ರತಿಸ್ಪರ್ಧಿಯಾಗಿ ನಿಂತಾಗ ಸ್ವಲ್ಪ ಬೇಸರ ಉಂಟಾಗಿತ್ತು. ಈ ವೇಳೆ ಇಬ್ಬರೂ ಸೋಲು ಕಾಣಬೇಕಾಯಿತು. ಕಾಂಗ್ರೆಸ್‌ಗೆ ಬಂದಾಗ ಜವಾಬ್ದಾರಿಯುತ ಸ್ಥಾನ ಕೊಡಿಸಬೇಕು ಎಂದು ಪ್ರಯತ್ನಿಸಿದೆ. ಅಷ್ಟೊತ್ತಿಗೆ ಅವರ ಆರೋಗ್ಯ ಕೈಕೊಟ್ಟಿತು’ ಎಂದು ಸ್ಮರಿಸಿಕೊಂಡರು.

ಆರ್ಥಿಕ ಚಿಂತಕ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ‘ಬಸವ, ಬುದ್ಧ, ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರ ಅಂತರಂಗದಲ್ಲಿ ಉಂಟಾದ ತಲ್ಲಣಗಳೇ ಬಹಿರಂಗ ಚಳವಳಿಯ ದಾರಿಯಲ್ಲಿ ಸಾಗುವಂತೆ ಮಾಡಿತು. ಆದ್ದರಿಂದ ಜನಪರ ಹೋರಾಟದಿಂದ ಮಾತ್ರ ಸಮಾಜದಲ್ಲಿ ಅಭಿವೃದ್ಧಿಯ ಪರಿವರ್ತನೆ ತರಬಹುದು. ಈ ನಿಟ್ಟಿನಲ್ಲಿ ಜಯಣ್ಣ, ಒಡೆಯರ್ ಕೂಡ ಶ್ರಮಿಸಿದ್ದಾರೆ’ ಎಂದರು.

‘ಮಿಶ್ರ ಆರ್ಥಿಕ ವ್ಯವಸ್ಥೆ, ಸಮಾಜವಾದಿ ಸ್ತಂಭ ಸಡಿಲಗೊಳಿಸುವ ಕೆಲಸಕ್ಕೆ ಕೈಹಾಕಿ ಬಂಡವಾಳಶಾಹಿಗಳ ಪರವಾಗಿ ಸರ್ಕಾರ ಕೆಲಸ ಮಾಡಿದರೆ, ಖಾಸಗೀಕರಣ ಹಾಗೂ ಜಾಗತೀಕರಣದ ಪ್ರಭಾವ ಹೆಚ್ಚಾಗುತ್ತದೆ. ಇದರಿಂದ ಸಬಲರು ಮತ್ತು ಅಸಬಲರ ಮಧ್ಯೆ ತಿಕ್ಕಾಟ ಶುರುವಾಗುತ್ತದೆ. ಇದು ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಮಾರಕವಾಗಲಿದೆ. ಇದನ್ನು ಎದುರಿಸಲು ಈ ಇಬ್ಬರು ನಾಯಕರಂತೆ ಹೋರಾಡುವ ಮನಸುಗಳ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ಎ.ಜೆ.ಚರ್ಚ್‌ನ ರೆವೆರಂಡ್ ಫಾದರ್ ಎಂ.ಎಸ್.ರಾಜು, ರಾಜ್ಯ ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿ ಕೆ.ಎಸ್.ನಾಗಣ್ಣ, ರಂಗಾನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.