ADVERTISEMENT

ಉದ್ಯೋಗ ಮೇಳ: ಆಕಾಂಕ್ಷಿಗಳಿಗೆ ನಿರಾಸೆ

ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ನೂರಾರು ಯುವಕ–ಯುವತಿಯರು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 16:18 IST
Last Updated 31 ಆಗಸ್ಟ್ 2021, 16:18 IST
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಮಿನಿ ಉದ್ಯೋಗ ಮೇಳದ ಸಂದರ್ಶನದಲ್ಲಿ ಭಾಗವಹಿಸಿದ್ದ ಉದ್ಯೋಗಾಕಾಂಕ್ಷಿಗಳು 
ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಮಿನಿ ಉದ್ಯೋಗ ಮೇಳದ ಸಂದರ್ಶನದಲ್ಲಿ ಭಾಗವಹಿಸಿದ್ದ ಉದ್ಯೋಗಾಕಾಂಕ್ಷಿಗಳು    

ಚಿತ್ರದುರ್ಗ: ಉದ್ಯೋಗ ಅರಸಿ ಪ್ರಥಮ ಬಾರಿ ಸಂದರ್ಶನಕ್ಕಾಗಿ ಬಂದಿದ್ದವರೇ ಅಲ್ಲಿ ಹೆಚ್ಚಿದ್ದರು. ಒಂದಾದರು ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಉಳ್ಳವರ ಸಂಖ್ಯೆ ವಿರಳವಾಗಿತ್ತು. ವಿದ್ಯಾಭ್ಯಾಸದ ಜತೆಗೆ ಉದ್ಯೋಗ ಸಿಗಬಹುದೇ ಎಂಬ ನಿರೀಕ್ಷೆಯೂ ಕೆಲವರಲ್ಲಿತ್ತು. ಆದರೆ, ಸಂದರ್ಶನದ ಬಳಿಕ ಬಹುತೇಕರು ನಿರಾಸೆಯಿಂದ ಹಿಂದಿರುಗಿದರು.

ಜಿಲ್ಲಾ ಕ್ರೀಡಾಂಗಣ ಸಮೀಪದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಆವರಣದಲ್ಲಿ ಬೆಂಗಳೂರಿನ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ತರಬೇತಿ ಸಂಸ್ಥೆಯಿಂದ ಮಂಗಳವಾರ ಆಯೋಜಿಸಿದ್ದ ಮಿನಿ ಉದ್ಯೋಗ ಮೇಳದಲ್ಲಿ ಕಂಡ ದೃಶ್ಯವಿದು.

ಆರ್ಥಿಕವಾಗಿ ಹಿಂದುಳಿದ, ಕೃಷಿಯಿಂದ ನಷ್ಟ ಅನುಭವಿಸಿದ ಬಡ ರೈತರ ಮಕ್ಕಳ ಸಂಖ್ಯೆ ಹೆಚ್ಚಾಗಿ ಕಂಡುಬಂದಿತು. ಎಸ್ಸೆಸ್ಸೆಲ್ಸಿ, ಪಿಯು ಈಗಷ್ಟೇ ಮುಗಿಸಿ ಐಟಿಐ ವ್ಯಾಸಂಗಕ್ಕೆ ಸೇರಿರುವವರಲ್ಲಿ ಕೆಲವರು ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸಿ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದಲೂ ಬಂದಿದ್ದರು. ‘ಇದೇ ಪ್ರಥಮ ಬಾರಿ ಸಂದರ್ಶನಕ್ಕೆ ಹಾಜರಾಗುತ್ತಿದ್ದೇವೆ. ಈವರೆಗೂ ಯಾವ ಮೇಳದಲ್ಲಿಯೂ ಭಾಗವಹಿಸಿಲ್ಲ. ಇಂಗ್ಲಿಷ್‌ನಲ್ಲಿ ಮಾತನಾಡಬೇಕೆ...’ ಹೀಗೆ ತಮಗೆ ತಾವೇ ಪ್ರಶ್ನೆ ಮಾಡಿಕೊಳ್ಳುತ್ತಲೇ ಸಂದರ್ಶನಕ್ಕೂ ಮುನ್ನವೇ ತಳಮಳಗೊಂಡರು.

ADVERTISEMENT

ಕಂಪನಿಗಳು ಯಾವ ರೀತಿ ಸಂದರ್ಶನ ನಡೆಸುತ್ತವೆ ಎಂಬುದನ್ನು ತಿಳಿದುಕೊಳ್ಳಲು ಪದವಿ ವ್ಯಾಸಂಗ ಮಾಡುತ್ತಿರುವ ಅನೇಕ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರು. ಚಿತ್ರದುರ್ಗಕ್ಕೆ ಸಮೀಪವಿರುವ ದಾವಣಗೆರೆ, ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ಸಿಕ್ಕರೆ ಮಾಡೋಣ ಎಂಬ ಉತ್ಸಾಹದಿಂದಲೂ ಕೆಲ ಯುವಕ–ಯುವತಿಯರು ಮೇಳದಲ್ಲಿ ಪಾಲ್ಗೊಂಡಿದ್ದರು. ಆದರೆ, ಸಂದರ್ಶನ ನಡೆಸಿದ ಕಂಪನಿಗಳೆಲ್ಲವೂ ಹೆಚ್ಚಾಗಿ ಬೆಂಗಳೂರು, ಮೈಸೂರು ಭಾಗದಿಂದ ಬಂದಿದ್ದವು. ಈ ಭಾಗದಲ್ಲಿ ಕೆಲಸ ಮಾಡಲು ಉತ್ಸಾಹ ಇಲ್ಲದವರಿಗೆ ಮರು ಪ್ರಶ್ನೆಯನ್ನೇ ಕೇಳದೆ ಕಳುಹಿಸುತ್ತಿದ್ದರು.

ಈಗಾಗಲೇ ಹಲವು ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವಿಗಳು ಹೆಚ್ಚಿನ ಸಂಬಳದ ನಿರೀಕ್ಷೆಯೊಂದಿಗೆ ಬಂದಿದ್ದರು. ಆದರೆ, ₹ 20 ಸಾವಿರಕ್ಕಿಂತಲೂ ಹೆಚ್ಚು ವೇತನ ಸಿಗುವುದಿಲ್ಲ ಎಂಬುದನ್ನು ಮನಗಂಡು ಹಿಂದಿರುಗಿದರು. ₹ 10 ಸಾವಿರದಿಂದ ₹ 15 ಸಾವಿರದೊಳಗೆ ವೇತನ ಸಿಕ್ಕರೆ ಮಾಡುವ ಉತ್ಸಾಹದಲ್ಲಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯು ಉತ್ತೀರ್ಣರಾದವರು ಸಂದರ್ಶನ ಎದುರಿಸುವಲ್ಲಿ ಚಡಪಡಿಸಿದರು. ಸ್ನಾತಕೋತ್ತರ ಪದವಿ ಪಡೆದ ಕೆಲವರು ಮಾರ್ಕೆಟಿಂಗ್ ಮಾಡುವ ಉದ್ಯೋಗ ಒಪ್ಪಿಕೊಳ್ಳದೆ ಊರುಗಳತ್ತ ಮುಖ ಮಾಡಿದರು.

‘ಎಂಎಸ್ಸಿ ಕೃಷಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಾಲ್ಕು ವರ್ಷವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಕೂಡ ತೆಗೆದುಕೊಂಡಿದ್ದೇನೆ. ಬಿಎಸ್ಸಿ ಮುಗಿದಾಗಲೇ ನೆಲಮಂಗಲದಲ್ಲಿ ನಡೆದ ಸಂದರ್ಶನದಲ್ಲಿ ಎರಡು ಕಂಪನಿಗಳು ಕರೆದಿದ್ದವು. ಆದರೆ, ಓದು ಮುಂದುವರೆಸಿದ್ದ ಕಾರಣಕ್ಕೆ ಹೋಗಲಿಲ್ಲ. ಉದ್ಯೋಗದ ಹುಡುಕಾಟದಲ್ಲಿ ಇದ್ದೇನೆ. ಆದರೆ, ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗುತ್ತಿಲ್ಲ’ ಎಂದು ಹಿರಿಯೂರು ತಾಲ್ಲೂಕಿನ ಬ್ಯಾರಮಡು ಗ್ರಾಮದ ಅನಿತಾ ಅಳಲು ತೋಡಿಕೊಂಡರು.

‘ಮನೆಯ ಕಡೆ ಆರ್ಥಿಕ ತೊಂದರೆ ಇದ್ದು, ತುಂಬಾ ಕಷ್ಟವಿದೆ. ಅಪ್ಪ ಕೂಲಿ ಕೆಲಸ ಮಾಡುತ್ತಿದ್ದು, ಅಣ್ಣ ಕಿರಾಣಿ ಅಂಗಡಿಗೆ ಹೋಗುತ್ತಿದ್ದಾನೆ. ಅಕ್ಕನ ಮದುವೆ ಮಾಡಬೇಕು. ಅದಕ್ಕೆ ಸಾಕಷ್ಟು ಹಣ ಬೇಕು. ಅದಕ್ಕಾಗಿ ಐಟಿಐ ಎಲೆಕ್ಟ್ರಿಷಿಯನ್ ಕೋರ್ಸ್‌ಗೆ ಸೇರಿದ್ದರು ಕೆಲಸಕ್ಕಾಗಿ ಅಲೆಯುತ್ತಿದ್ದೇನೆ’ ಎಂದು ಚಿತ್ರದುರ್ಗ ತಾಲ್ಲೂಕಿನ ಗೌರಮ್ಮನಹಳ್ಳಿಯ ರಸವುಲ್ ಬೇಗ್ ನೋವು ತೋಡಿಕೊಂಡರು.

ಲಾಕ್‌ಡೌನ್‌ ಬಳಿಕ ಕೆಲಸಕ್ಕೆ ಪರದಾಟ
ಲಾಕ್‌ಡೌನ್‌ ಬಳಿಕ ಬೆಂಗಳೂರಿನ ಕೆಲ ಕಂಪನಿಗಳೇ ಸಂಪೂರ್ಣ ಬಂದ್‌ ಆದ ನಂತರ ಅನೇಕರು ಕೆಲಸಕ್ಕಾಗಿ ಪರದಾಡುತ್ತಿದ್ದಾರೆ. ಇದು ಕೂಡ ಮಿನಿ ಉದ್ಯೋಗ ಮೇಳದಲ್ಲಿ ಬೆಳಕಿಗೆ ಬಂದಿತು.

‘ಕೋವಿಡ್ ಲಾಕ್‌ಡೌನ್‌ಕ್ಕೂ ಮುನ್ನ ಮಾಸಿಕ ₹ 28 ಸಾವಿರ ದುಡಿಮೆ ಮಾಡುತ್ತಿದ್ದೆ. ಜೀವನ ನಿರ್ವಹಣೆಗೆ ಯಾವ ತೊಂದರೆ ಇರಲಿಲ್ಲ. ಲಾಕ್‌ಡೌನ್ ನಂತರ ಕಂಪನಿ ಮುಚ್ಚಿತು. ಜತೆಯಲ್ಲಿ ಕೆಲಸ ಮಾಡುತ್ತಿದ್ದ 200ಕ್ಕೂ ಅಧಿಕ ಮಂದಿ ಕೆಲಸ ಕಳೆದುಕೊಂಡರು. ವರ್ಷವಾದರೂ ಮತ್ತೆ ಕೆಲಸ ಸಿಕ್ಕಿಲ್ಲ’ ಎಂದು ಸಂದರ್ಶನಕ್ಕೆ ಹಾಜರಾಗಿದ್ದ ವಿಜಯನಗರದ ಜಿ.ಸುರೇಶ್‌ಕುಮಾರ್ ಬೇಸರ ಹೊರಹಾಕಿದರು.

***

ಕಂಪನಿಯೊಂದರಲ್ಲಿ ಎಂಟು ವರ್ಷ ಕೆಲಸ ಮಾಡಿದ ಅನುಭವ ಇದೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೆ, ಅನುಭವಕ್ಕೆ ತಕ್ಕಂತೆ ವೇತನ ಸಿಗುತ್ತಿಲ್ಲ. ಅದಕ್ಕಾಗಿ ಮೇಳಗಳಿಗೂ ಭಾಗವಹಿಸುತ್ತಿದ್ದೇನೆ.
-ಸುರೇಶ್‌ಕುಮಾರ್, ಉದ್ಯೋಗಾಕಾಂಕ್ಷಿ

***

ಕೆಲಸ ನೀಡಿದಾಗ ಅನುಭವ ಸಿಗುತ್ತದೆ. 27 ವರ್ಷ ಒಳಗಿನವರಿಗೆ ಮಾತ್ರ ಅವಕಾಶ ಎನ್ನುತ್ತಿದ್ದಾರೆ. ಇದನ್ನು ಮೊದಲೇ ಹೇಳುವುದು ಸೂಕ್ತ. ದೂರದಿಂದ ಬರುವುದು ತಪ್ಪುತ್ತದೆ. ಪ್ರತಿಷ್ಠಿತ ಕಂಪನಿಗಳು ಬರುತ್ತವೆ ಎಂದು ತಿಳಿಸುತ್ತಾರೆ. ಮೇಳಕ್ಕೆ ಬಂದರೆ ಆ ನಿರೀಕ್ಷೆ ಹುಸಿಯಾಗುತ್ತದೆ.
-ಶಿವಕುಮಾರ್, ಬಸವಾಪುರ, ಹೊಳಲ್ಕೆರೆ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.