ADVERTISEMENT

ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರು ಬದಲಿಸದಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 2:23 IST
Last Updated 11 ಡಿಸೆಂಬರ್ 2021, 2:23 IST
ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರನ್ನು ಬದಲಾಯಿಸಬಾರದು ಎಂದು ಆಗ್ರಹಿಸಿ ಹೊಸದುರ್ಗ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟ ಶುಕ್ರವಾರ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿತು.
ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರನ್ನು ಬದಲಾಯಿಸಬಾರದು ಎಂದು ಆಗ್ರಹಿಸಿ ಹೊಸದುರ್ಗ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟ ಶುಕ್ರವಾರ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿತು.   

ಹೊಸದುರ್ಗ: ಕಾಡುಗೊಲ್ಲ ಅಭಿವೃದ್ಧಿ ನಿಗಮದ ಹೆಸರನ್ನು ಗೊಲ್ಲ–ಕಾಡುಗೊಲ್ಲ ಲಅಭಿವೃದ್ಧಿ ನಿಗಮ ಎಂದು ಬದಲಾಯಿಸಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಹೊಸದುರ್ಗ ಕಾಡುಗೊಲ್ಲ ಸಂಘಟನೆಗಳ ಒಕ್ಕೂಟ ಶುಕ್ರವಾರ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿತು.

ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‍ ಅವರು ಗೊಲ್ಲ–ಕಾಡುಗೊಲ್ಲ ಅಭಿವೃದ್ದಿ ನಿಗಮ ಎಂದು ಹೆಸರು ಬದಲಾಯಿಸುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವುದಕ್ಕೆ ಒಕ್ಕೂಟದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

‘ಶಾಸಕಿ ಪೂರ್ಣಿಮಾ ಅವರು ಕಾಡುಗೊಲ್ಲ ಜನಾಂಗದ ವಿರುದ್ಧ ಬರೆದಿರುವ ಪತ್ರದಿಂದ ನಮ್ಮ ಜಾತಿಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಿದೆ. ಕಾಡುಗೊಲ್ಲರ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ರಚಿಸಿರುವ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಪ್ರವರ್ಗ-1ರಲ್ಲಿ ಇರುವ ಗೊಲ್ಲ ಜಾತಿಯನ್ನು ಸೇರಿಸಬಾರದು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಕಾಡುಗೊಲ್ಲರಿಗಿಂತ ಹೆಚ್ಚು ಅಭಿವೃದ್ಧಿ ಹೊಂದಿರುವ ಗೊಲ್ಲ ಜನಾಂಗದವರು ತಮ್ಮ ಪ್ರಭಾವ ಬಳಸಿ ಎಲ್ಲಾ ಸೌಲಭಗಳನ್ನು ಅವರೇ ಪಡೆದುಕೊಳ್ಳುತ್ತಾರೆ. ಮತ್ತೆ ಕಾಡುಗೊಲ್ಲರು ಅವಕಾಶ ವಂಚಿತರಾಗಬೇಕಾಗುತ್ತದೆ. ಗೊಲ್ಲ ಸಮುದಾಯದವರಿಗಾಗಿ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲಿ. ಅದಕ್ಕೆ ಕಾಡುಗೊಲ್ಲರು ಯಾವುದೇ ಆಕ್ಷೇಪ ವ್ಯಕ್ತಿಪಡಿಸುವುದಿಲ್ಲ. ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಗೊಲ್ಲ ಜಾತಿಯನ್ನು ಸೇರಿಸಬಾರದು’ ಎಂದು ಆಗ್ರಹಿಸಿದರು.

ADVERTISEMENT

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಸಕಿ ಪೂರ್ಣಿಮಾ ಅವರ ರಾಜಕೀಯ ಒತ್ತಡಕ್ಕೆ ಮಣಿದು ಕಾಡುಗೊಲ್ರ ಅಭಿವೃದ್ಧಿಗಾಗಿ ರಚಿಸಿರುವ ನಿಗಮದ ಹೆಸರನ್ನು ಬದಲಾಯಿಸಬಾರದು. ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ ಗೊಲ್ಲ ಜಾತಿಯನ್ನು ಸೇರಿಸಬಾರದು. ಈ ಸಂಬಂಧ ಶಾಸಕಿ ಪೂರ್ಣಿಮಾ ಅವರು ಬರೆದಿರುವ ಪತ್ರ ವ್ಯವಹಾರಗಳನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಕಾಡುಗೊಲ್ಲ ಸಂಘಟನೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.

ಕಾಡುಗೊಲ್ಲ ಸಮಾಜದ ನಾಗರಾಜು ಅಗಸರಹಳ್ಳಿ, ಅಜ್ಜಪ್ಪ, ಬಾಲೇನಹಳ್ಳಿ ರುದ್ರಪ್ಪ, ರಂಗಸ್ವಾಮಿ, ಕಾಂತರಾಜ್, ಸಣ್ಣಕಿಟ್ಟದಹಳ್ಳಿ ಶ್ರೀನಿವಾಸ್, ಪ್ರವೀಣ್, ಮೋಹನ್, ಮಂಜು ಶೃಂಗೇರಿ, ಸುರೇಶ್‍ಕುಮಾರ್, ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.