ADVERTISEMENT

ಪರಶುರಾಂಪುರ: ಕಾಡುಗೊಲ್ಲ ಕ್ಯಾತಪ್ಪನ ಜಾತ್ರೆ ಪ್ರಾರಂಭ

ತಿಮ್ಮಯ್ಯ .ಜೆ ಪರಶುರಾಂಪುರ
Published 19 ಜನವರಿ 2024, 7:24 IST
Last Updated 19 ಜನವರಿ 2024, 7:24 IST
<div class="paragraphs"><p>ಹೋಬಳಿಯ ಬೊಮ್ಮನಕುಂಟೆ ಗ್ರಾಮದಲ್ಲಿ ಕ್ಯಾತಪ್ಪನ ಜಾತ್ರೆ ಪೂಜೆ ಮರ ಕಡಿಯುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು</p></div>

ಹೋಬಳಿಯ ಬೊಮ್ಮನಕುಂಟೆ ಗ್ರಾಮದಲ್ಲಿ ಕ್ಯಾತಪ್ಪನ ಜಾತ್ರೆ ಪೂಜೆ ಮರ ಕಡಿಯುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು

   

ಪರಶುರಾಂಪುರ: ಹೋಬಳಿಯ ಚನ್ನಮ್ಮನಾಗತಿಹಳ್ಳಿಯ ಕಾಡುಗೊಲ್ಲರ ಕ್ಯಾತಪ್ಪನ ಜಾತ್ರೆಗೆ ಗುರುವಾರ ಬೊಮ್ಮನಕುಂಟೆ ಗ್ರಾಮದಲ್ಲಿ ‘ಜಾತ್ರೆ ಪೂಜೆ ಮರ’ ಕಡಿಯುವ ಮೂಲಕ ವಿಧ್ಯುಕ್ತ ಚಾಲನೆ ದೊರೆಯಿತು.

ಜ. 11ರಂದು ದೇವರಿಗೆ ಕಂಕಣ ಕಟ್ಟಿ ಹುರುಳಿ ಕೈ ತೊಳೆಯುವ ಮೂಲಕ 13 ಗುಡಿಕಟ್ಟಿನ ಅಣ್ಣ ತಮ್ಮಂದಿರು ಜಾತ್ರೆಗೆ ಸಿದ್ಧತೆ ಮಾಡಿಕೊಂಡಿದ್ದು, ಫೆ. 2ರವರೆಗೆ ಬುಡಕಟ್ಟು ಸಂಪ್ರದಾಯದ ವಿವಿಧ ಆಚರಣೆಗಳೊಂದಿಗೆ ಜಾತ್ರೆ ನಡೆಯುವುದು ಈ ಭಾಗದ ವಿಶೇಷ.

ADVERTISEMENT

ಜ. 21ರಂದು ದೇವಸ್ಥಾನದ ಸುತ್ತಲೂ ಕಳ್ಳೆ ಬೇಲಿ ಕಟ್ಟಲು ಕಳ್ಳೆ ಕಡಿಯುವುದು, ಜ. 22ರಂದು ಜೂಜಿನ ಕಳ್ಳೆ ಹಾಕುವುದು, 23ರಂದು ವಸಲು ದಿನ್ನೆಗೆ ತುಗ್ಗಲಿಮೋರು ಮತ್ತು ಎರದ ಕಳ್ಳೆ ತರುವುದು, 24ರಂದು ವಸಲು ದಿನ್ನೆಯಯಲ್ಲಿ ಬಾರೆ ಕಳ್ಳೆಯಿಂದ ಗುಡಿಕಟ್ಟುವುದು ಮತ್ತು ಕಳಸ ಸ್ಥಾಪನೆ ಮಾಡುವ ಕಾರ್ಯ ನಡೆಯಲಿದೆ.

ಜ. 25ರಂದು ಗುಡುಕಟ್ಟಿನ ಪರಿವಾರದ ದೇವರು ಚನ್ನಮ್ಮನಾಗತಿಹಳ್ಳಿಗೆ ಬರುವುದು, 26ರಂದು ಹುತ್ತದ ಪೂಜೆ ಮತ್ತು ಕೊಣನ ಪೂಜೆ ಮಾಡುವುದು, 27ರಂದು ಹಾವಿನಗೂಡು ಪೂಜೆ, 28ರಂದು ನವಣೆ ಅನ್ನದ ನೈವೇದ್ಯ ದಾಸೋಹ, 29ರಂದು ಜಾತ್ರೆಯ ಪ್ರಾಧನ ಘಟ್ಟ ಬಾರೆ ಕಳ್ಳೆಯ ಗುಡಿಯ ಮೇಲಿನ ಕಳಸ ಕೀಳುವ ಆಚರಣೆ ನಡೆಯಲಿದೆ.

ಕ್ಯಾತಪ್ಪನ ಹಿನ್ನೆಲೆ: ‘ಕ್ಯಾತಪ್ಪ ದೇವರು ಮೊದಲು ರೆಡ್ಡಿ ಜನಾಂಗದ ಹೇಮರೆಡ್ಡಿ ಮತ್ತು ಭೀಮರೆಡ್ಡಿ ಎಂಬುವವರಿಗೆ ಒಲಿದಿದ್ದು, ಅವರು ಶ್ರೀಮಂತರಾದ ಮೇಲೆ ದೇವರನ್ನು ನಿರ್ಲಕ್ಷಿಸಿ ನವಣೆ ಮತ್ತು ಹುರುಳಿಯ ಕಣಜದಲ್ಲಿ ಮುಚ್ಚಿಟ್ಟರಂತೆ. ಇದರಿಂದ ಕೊಪಗೊಂಡ ದೇವರು ಅವರ ಮನೆಯಲ್ಲಿ ದನ ಕಾಯುತ್ತಿದ್ದ ಬೊಮ್ಮಲಿಂಗ ಎನ್ನುವ ಕಾಡುಗೊಲ್ಲರ ಯುವಕನಿಗೆ ಒಲಿಯಿತು. ಆಗಿನಿಂದ ಈ ಜನಾಂಗದ ಆರಾಧ್ಯ ದೈವನಾದ ಎನ್ನುವ ಪ್ರತೀತಿ ಇದೆ’ ಎನ್ನುತ್ತಾರೆ ಹಿರಿಯರು.

ಜಾತ್ರೆ ವೇಳೆಯಲ್ಲಿ ಹುರುಳಿ ಮತ್ತು ನವಣೆ ನಿಶಿದ್ದ: ಪ್ರತಿ ವರ್ಷ ಜಾತ್ರೆ ನಡೆಯುವ ದಿನದಿಂದ ಮುಗಿಯುವ ದಿನದವರೆಗೂ ಕಾಡುಗೊಲ್ಲ ಬುಡಕಟ್ಟಿಗೆ ಸೇರಿದ ಕೊಣನ ಗೊಲ್ಲರು ಮತ್ತು ಬೊಮ್ಮನ ಗೊಲ್ಲರು ಬೆಡಗಿನವರು ನವಣೆ ಮತ್ತು ಹುರಳಿಯನ್ನು ಮನೆಯಿಂದ ಹೊರ ಹಾಕುತ್ತಾರೆ. ಈ ವರ್ಷ ಜ. 11ರಂದು ಹುರುಳಿ ಕೈ ತೊಳೆದು ಮನೆಯಿಂದ ಹೊರ ಹಾಕಲಾಗಿದೆ. ಆಗಿನಿಂದ ಅವನ್ನು ಮುಟ್ಟುದಾಗಲೀ, ತಿನ್ನುವುದಾಗಲೀ ಮಾಡುವುದಿಲ್ಲ.

ಫೆ. 1ರಂದು ಹುರುಳಿ ನೈವೇದ್ಯ ಮಾಡಿ ವೃತ ಕಂಕಣ ವಿಸರ್ಜನೆ ಮಾಡುವ ಮೂಲಕ ಹುರಳಿ ನೈವೇದ್ಯವನ್ನು ದೇವಸ್ಥಾನದಲ್ಲಿ ಪ್ರಸಾದವಾಗಿ ಸ್ವಿಕರಿಸಿದ ಮೇಲೆಯೇ ಮತ್ತೆ ಮನೆಯೊಳಗೆ ಹುರಳಿ ಮತ್ತು ನವಣೆಯನ್ನು ಸೇರಿಸುತ್ತಾರೆ. ರೆಡ್ಡಿ ಜನಾಂಗದವರು ಕ್ಯಾತಪ್ಪನನ್ನು ಹುರುಳಿ ಮತ್ತು ನವಣೆ ಕಣಜದಲ್ಲಿಟ್ಟಿದ್ದರಿಂದ ಈ ಆಚರಣೆ ಮಾಡುತ್ತಾ ಬಂದಿದ್ದಾರೆ.

ಈ ಭಾರಿ ಹೋಬಳಿಯ ಬೊಮ್ಮನಕುಂಟೆ ಗ್ರಾಮದಲ್ಲಿ ಕಾಡುಗೊಲ್ಲ ಸಮುದಾಯದ ಕರಿ ಕಂಬಳಿ ಮತ್ತು ಗಂಡುಗೊಡಲಿಗಳನ್ನು ಹಿಡಿದ ಕೊಣನಗೊಲ್ಲರು ಮತ್ತು ಬೊಮ್ಮನಗೊಲ್ಲ ಬೆಡಗಿನವರು ಗುರುವಾರ ಪೂಜೆ ಮರ ಕಡಿದರು. ಬಳಿಕ ಮೆರವಣಿಗೆಯ ಮೂಲಕ ಜಾತ್ರೆ ನಡೆಯುವ ಪುರ್ಲಹಳ್ಳಿ ಸಮೀಪ ಇರುವ ವಸಲು ದಿನ್ನೆಗೆ ಮರದ ತುಂಡನ್ನು ತಂದರು.

ಹೋಬಳಿಯ ಬೊಮ್ಮನಕುಂಟೆ ಗ್ರಾಮದಲ್ಲಿ ಕಡಿದಿರುವ ಕ್ಯಾತಪ್ಪನ ಜಾತ್ರೆ ಪೂಜೆ ಮರ
ಪ್ರತಿ ವರ್ಷದಂತೆ ಈ ಬಾರಿಯೂ ಜಾತ್ರೆ ಆರಂಭವಾಗಿದ್ದು ಹಿರಿಯರು ನಡೆಸಿಕೊಂಡು ಬಂದ ಸಂಪ್ರದಾಯವನ್ನು ಚಾಚೂ ತಪ್ಪದೇ ಆಚರರಿಸುತ್ತಿದ್ದೇವೆ.
ಪೂಜಾರಿ ಚಂದ್ರಣ್ಣ
ಬಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಸಮುದಾಯದ ಕ್ಯಾತಪ್ಪನ ಜಾತ್ರೆ ಈಡಿ ರಾಜ್ಯಕ್ಕೆ ಕಾಡುಗೊಲ್ಲರ ವಿವಿಧ ಮಜಲುಗಳನ್ನು ಪರಿಚಯಿಸುವಂತಹ ವೇದಿಕೆ. ನಮ್ಮ ಬದುಕು ರೂಪಿತಗೊಂಡಿರುವುದೇ ಇಂತಹ ಆಚರಣೆಗಳಿಂದ.
ಬೂದಿಹಳ್ಳಿ ರಾಜಣ್ಣ ಕಾಡುಗೊಲ್ಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.