
ಹೊಸದುರ್ಗ: ‘ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆಯ ಆರಾಧಕರಾಗಿರಬೇಕು. ನಿತ್ಯ ಕನ್ನಡ ಭಾಷೆ ಬಳಸಿ’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.
ತಾಲ್ಲೂಕಿನ ಮತ್ತೋಡು ಗ್ರಾಮದಲ್ಲಿ ಶನಿವಾರ ಕಸಾಪ ಹೋಬಳಿ ಘಟಕದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಈ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹೊಂದಿರಬೇಕು. ನೆಲದ ಮೇಲೆ ಗೌರವವಿರಲಿ’ ಎಂದು ಹೇಳಿದರು.
ಸಾಹಿತಿ ತಾಳ್ಯ ಚಂದ್ರಶೇಖರ್ ಮಾತನಾಡಿ, ‘ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಆದರೆ, ಅದರ ಬಳಕೆ ಕಂಡುಬರುವುದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು’ ಎಂದು ಅಭಿಪ್ರಾಯಪಟ್ಟರು.
ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎಚ್.ಬಿಲ್ಲಪ್ಪ ಮಾತನಾಡಿ, ‘ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎನ್ನುವ ಮಾತು ಇದೆ. ಅದನ್ನ ನಾವು ಅನುಸರಿಸಬೇಕು. ಕನ್ನಡ ನೆಲಕ್ಕೆ ಕನ್ನಡ ಭಾಷೆಗೆ, ನಾಡು ನುಡಿಗೆ ತುಂಬಾ ಮಹತ್ವ ಕೊಡಬೇಕು. ಅದರ ಉಳಿವು, ಬೆಳವಣಿಗಾಗಿ ಎಲ್ಲರೂ ಸಹಕಾರ ನೀಡಬೇಕು’ ಎಂದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಕನ್ನಡ ಭಾವುಟದ ಧ್ವಜಾರೋಹಣ ಕಾರ್ಯಕ್ರಮದ ನಂತರ ವಿವಿಧ ಕಲಾತಂಡಗಳೊಂದಿಗೆ ಗ್ರಾಮದ ರಾಜಬೀದಿಯಲ್ಲಿ ಕನ್ನಡ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ನೆಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಮತ್ತೋಡು ಘಟಕದ ಅಧ್ಯಕ್ಷ ಶಿವಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶಿವಣ್ಣ, ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಪರಮ್ಮ, ಕಾರ್ಯದರ್ಶಿ ದಾಸಪ್ಪ, ಮುಖಂಡರಾದ ಡಿ ಪರಶುರಾಮಪ್ಪ, ಲಕ್ಕಪ್ಪ, ಮಂಜುನಾಥ್ ಸ್ವಾಮಿ, ಆರ್ ಮಲ್ಲಪ್ಪ, ಸದಾಶಿವಪ್ಪ, ಜಿ.ನಾಗಪ್ಪ, ರಾಮಣ್ಣ, ವಾಸುದೇವಮೂರ್ತಿ, ಗಂಗಾಧರ್, ಜಗದೀಶ್, ಶ್ರೀನಿವಾಸ್, ರಮೇಶ್, ದಿನೇಶ್, ಪರಣ್ಣ, ಮಾರುತಿ ಸೇರಿದಂತೆ ಹಲವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.