
ಚಿತ್ರದುರ್ಗದ ಮುಖ್ಯ ರಸ್ತೆಯ ಅಂಗಡಿಗಳ ಮೇಲೆ ರಾರಾಜಿಸುತ್ತಿರುವ ಇಂಗ್ಲಿಷ್ ನಾಮಫಲಕಗಳು
ಪ್ರಜಾವಾಣಿ ಚಿತ್ರ: ವಿ.ಚಂದ್ರಪ್ಪ
ಚಿತ್ರದುರ್ಗ: ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಬಳಸಬೇಕೆಂಬ ನಿಯಮವಿದೆ. ಇದನ್ನು ಉಲ್ಲಂಘಿಸಿದರೆ ದಂಡ ವಿಧಿಸುವ, ಅಂಗಡಿಗಳ ಪರವಾನಗಿಯನ್ನೇ ರದ್ದು ಪಡಿಸುವ ಅವಕಾಶವಿದೆ. ಜಿಲ್ಲೆಯ ಹಲವೆಡೆ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ.
ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ನಾಮಕಾವಸ್ತೆಗೆ ಕನ್ನಡ ಬಳಕೆ ಮಾಡುತ್ತಿದ್ದು, ಕನ್ನಡ ಪರ ಹೋರಾಟಗಾರರ ಪ್ರತಿಭಟನೆ, ಫಲಕಗಳಿಗೆ ಮಸಿ ಬಳಿಯುವ ಕಾರ್ಯ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತ ಎಂಬಂತಾಗಿದೆ.
ನಗರದ ಬಿ.ಡಿ.ರಸ್ತೆ, ವಾಸವಿ ಮಹಲ್, ಲಕ್ಷ್ಮಿ ಬಜಾರ್, ಹೊಳಲ್ಕೆರೆ ರಸ್ತೆ, ಸಂತೆಹೊಂಡದ ರಸ್ತೆ ಸೇರಿದಂತೆ ಹಲವೆಡೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡವನ್ನು ಹುಡುಕುವಂತಾಗಿದೆ. ಲೋಹ, ಫೈಬರ್ ಜೊತೆಗೆ ಡಿಜಿಟಲ್, ಎಲ್‌ಇಡಿ ಪರದೆಗಳ ನಾಮಫಲಕಗಳಲ್ಲಿ ಇಂಗ್ಲಿಷ್ ರಾರಾಜಿಸುತ್ತಿದೆ. ಇವುಗಳಲ್ಲಿ ಕನ್ನಡದ ಅಕ್ಷರಗಳು ಮೂಲೆಗುಂಪಾಗಿವೆ.
ಬಹುತೇಕ ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಹೆಸರು ಇಂಗ್ಲಿಷ್‌ನಲ್ಲಿರುವುದು ಕಾಣಸಿಗುತ್ತಿದೆ. ಇವುಗಳಲ್ಲಿ ನೀಡುವ ಟಿಕೆಟ್‌ಗಳಲ್ಲೂ ಕನ್ನಡ ಮಾಯವಾಗಿದೆ.
ನಾಮಫಲಕಗಳಲ್ಲಿ ಕನ್ನಡ ಕಡೆಗಣನೆ ಮಾಡುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು 2023ರ ಡಿಸೆಂಬರ್‌ನಲ್ಲಿ ರಾಜ್ಯವ್ಯಾಪ್ತಿ ಪ್ರತಿಭಟನೆ ನಡೆಸಿದ್ದವು. ನಂತರ ಎಚ್ಚೆತ್ತ ರಾಜ್ಯ ಸರ್ಕಾರ, ಕನ್ನಡ ಭಾಷೆಯ ಬಳಕೆಯನ್ನು ಉತ್ತೇಜಿಸಲು 2024ರಲ್ಲಿ ‘ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯ್ದೆ’ ಜಾರಿಗೆ ತಂದಿತ್ತು. ಇದರನ್ವಯ ನಾಮಫಲಕಗಳ ಒಟ್ಟಾರೆ ವಿಸ್ತೀರ್ಣದಲ್ಲಿ ಶೇ 60 ರಷ್ಟು ಭಾಗ ಕನ್ನಡಮಯವಾಗಿರಬೇಕು. ಕನ್ನಡದ ಬರಹ ಮೇಲ್ಭಾಗದಲ್ಲೇ ಇರಬೇಕೆಂಬುದನ್ನು ಕಡ್ಡಾಯಗೊಳಿಸಿತ್ತು. ಇಷ್ಟಾದರೂ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.
ನಿಯಮ ಉಲ್ಲಂಘಿಸಿದರೆ ನಾಮಫಲಕ ತೆರವುಗೊಳಿಸುವ ಜೊತೆಗೆ ಉದ್ದಿಮೆ ಪರವಾನಗಿ ರದ್ದುಗೊಳಿಸುವುದಾಗಿ ಸ್ಥಳೀಯ ಸಂಸ್ಥೆಗಳು ಎಚ್ಚರಿಸಿವೆ. ಆದರೂ ಅಂಗಡಿ ಮಾಲೀಕರು ಇದಕ್ಕೆ ಕಿಮ್ಮತ್ತು ಕೊಡುತ್ತಿಲ್ಲ.
ಕನ್ನಡ ಪರ ಸಂಘಟನೆಗಳು ಈ ವಿಚಾರವಾಗಿ ಜಿಲ್ಲೆಯಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿವೆ. ಸರ್ಕಾರ ಶಾಸನ ರೂಪಿಸಿದ ಬಳಿಕ ಹೋರಾಟದ ತೀವ್ರತೆ ಮತ್ತಷ್ಟು ಹೆಚ್ಚಿದೆ. ಕೆಲವರು ದಂಡ ಪಾವತಿಯಿಂದ ಪಾರಾಗಲು ಕಾಟಾಚಾರಕ್ಕೆಂದು ನಾಮಫಲಕಗಳಲ್ಲಿ ಕನ್ನಡ ಅಕ್ಷರಗಳನ್ನು ಹಾಕಿಕೊಂಡಂತಿವೆ.
‘ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಇಷ್ಟಾಗಿಯೂ ವಾಣಿಜ್ಯ ಮಳಿಗೆಗಳು ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ. ಜನಪ್ರತಿನಿಧಿಗಳು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಮಳಿಗೆಗಳ ಮಾಲೀಕರ ದುರಂಹಕಾರಕ್ಕೆ ಇದೇ ಮುಖ್ಯ ಕಾರಣ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕನ್ನಡ ಪರ ಹೋರಾಟಗಾರರು ಹೇಳುತ್ತಾರೆ.
‘ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ತಿದ್ದುಪಡಿ ಕಾಯ್ದೆ’ಯಂತೆ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡ ಬಳಕೆ ಕಡ್ಡಾಯ. ನಿಯಮ ಉಲ್ಲಂಘನೆ ಕಂಡು ಬರುತ್ತಿದ್ದು ಕನ್ನಡ ಜಾಗೃತಿ ಸಮಿತಿ ಕ್ರಮಕ್ಕೆ ಮುಂದಾಗಲಿದೆ.ಅಶೋಕ್ ಕುಮಾರ್ ಸಂಗೇನಹಳ್ಳಿ ಕನ್ನಡ ಜಾಗೃತಿ ಸಮಿತಿ ಸದಸ್ಯ
ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಕೆ ಕಡ್ಡಾಯ ಎಂಬುದು ಹೇಳಿಕೆಗೆ ಸೀಮಿತವಾದಂತೆ ಕಾಣುತ್ತಿದೆ. ನಗರದಲ್ಲಿ ಕನ್ನಡ ನಾಮಫಲಕಗಳನ್ನು ಹುಡುಕುವ ಸ್ಥಿತಿ ಎದುರಾಗಿದೆ. ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು.ಒ.ಪ್ರತಾಪ್ ಜೋಗಿ ವಕೀಲರು
ಆಂಧ್ರದ ತಾಳಿಕೆರೆಯಲ್ಲಿ ನಡೆಯುವ ಗಾದ್ರಿಪಾಲನಾಯಕ ಓಬಳಸ್ವಾಮಿ ಜಾತ್ರೆಯಲ್ಲಿ ಚಿತ್ರದುರ್ಗದ ನಾಯಕ ಜನಾಂಗದವರು ನೇತೃತ್ವ ವಹಿಸುತ್ತಾರೆ. 3 ದಿನ ಎರಡೂ ರಾಜ್ಯಗಳ ಸಹಸ್ರಾರು ಭಕ್ತರ ಸಂಗಮವಾಗುತ್ತದೆ.ಎನ್. ಶ್ರೀರಾಮುಲು ನಿವೃತ್ತ ಅರಣ್ಯಾಧಿಕಾರಿ ಮೊಳಕಾಲ್ಮುರು
ಅಂಗಡಿ ಮುಂಗಟ್ಟು ಶಾಲಾ–ಕಾಲೇಜು ಆಸ್ಪತ್ರೆಗಳಲ್ಲಿ ಶೇ 60ರಷ್ಟು ಕನ್ನಡ ನಾಮ ಫಲಕವಿರಬೇಕೆಂದು ಸರ್ಕಾರ ಆದೇಶಿಸಿದ್ದರೂ ಸರಿಯಾಗಿ ಪಾಲನೆಯಾಗುತ್ತಿಲ್ಲ. ಸಾಕಷ್ಟು ಹೋರಾಟ ಮಾಡಿದರೂ ನಿಯಮ ಪಾಲನೆಯಾಗುತ್ತಿಲ್ಲ.ಕೆ.ಟಿ.ಶಿವಕುಮಾರ್ ಅಧ್ಯಕ್ಷ ಕರುನಾಡ ವಿಜಯಸೇನೆ ಜಿಲ್ಲಾ ಘಟಕ
ಫಲಕಗಳು ಕನ್ನಡದಲ್ಲಿದ್ದರೂ ಬಳಕೆ ಭಾಷೆ ತೆಲುಗು
ನಾಯಕನಹಟ್ಟಿ: ಹೋಬಳಿಯ ಬಹುತೇಕ ಅಂಗಡಿ ಮುಂಗಟ್ಟುಗಳು ವಾಣಿಜ್ಯ ಮಳಿಗೆಗಳಿಗೆ ಕನ್ನಡದ ನಾಮಫಲಕ ಅಳವಡಿಸಲಾಗಿದೆ. ಆದರೆ ವ್ಯಾವಹಾರಿಕ ಭಾಷೆ ಮಾತ್ರ ತೆಲುಗು ಮಿಶ್ರಿತ ಕನ್ನಡವಾಗಿದೆ. ನಾಯಕನಹಟ್ಟಿ ಮತ್ತು ತಳಕು ಹೋಬಳಿಯಲ್ಲಿ ವಾಲ್ಮೀಕಿ ನಾಯಕ ಸಮುದಾಯ ಬಹುಸಂಖ್ಯಾತವಾಗಿದೆ. ಅವರು ಬಳಸುವ ಭಾಷೆ ಮ್ಯಾಸಬೇಡ ಬುಡಕಟ್ಟಿನ ಸಾಂಸ್ಕೃತಿಕ ಸೊಗಡಿನಿಂದ ಕೂಡಿದ ಕನ್ನಡ ಮತ್ತು ತೆಲುಗು ಮಿಶ್ರಿತವಾದ ವಿಶಿಷ್ಟ ತೆಲುಗು. ನಿತ್ಯ ಅಂಗಡಿ ಮುಂಗಟ್ಟುಗಳಲ್ಲಿ ಇದೇ ಭಾಷೆಯಲ್ಲಿ ಸಂವಹನ ನಡೆಯುತ್ತದೆ. ತಳಕು ಹೋಬಳಿಯು ಆಂಧ್ರ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಕಾರಣ ಕನ್ನಡ ಮತ್ತು ತೆಲುಗು ಬಳಕೆ ಯಥೇಚ್ಛವಾಗಿದೆ. ಅದರಂತೆ ನಾಯಕನಹಟ್ಟಿ ಭಾಗದಲ್ಲೂ ತೆಲುಗು ಭಾಷೆ ಪ್ರಭಾವ ಹೆಚ್ಚಿದೆ. ಅದರಲ್ಲೂ ಪಟ್ಟಣದಲ್ಲಿರುವ ಗುರುತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಹೆಚ್ಚಾಗಿ ಆಂಧ್ರಪ್ರದೇಶದಿಂದ ಭಕ್ತರು ಆಗಮಿಸುತ್ತಾರೆ. ಅವರೊಂದಿಗೆ ಸರಾಗವಾಗಿ ತೆಲುಗಿನಲ್ಲಿ ಸಂವಹನ ನಡೆಸಲಾಗುತ್ತದೆ.
ಗಡಿ ಜಾತ್ರೆಗಳಲ್ಲಿ ಬೆಸೆಯುತ್ತಿದೆ ಅವಳಿ ರಾಜ್ಯಗಳ ಸಂಸ್ಕೃತಿ ಬಾಂಧವ್ಯ
ಮೊಳಕಾಲ್ಮುರು: ಜಿಲ್ಲೆಯ ಆಂಧ್ರಪ್ರದೇಶದ ಗಡಿಯಲ್ಲಿ ನಡೆಯುವ ಅವಳಿ ರಾಜ್ಯಗಳ ಜಾತ್ರೆಗಳು ಉಭಯ ರಾಜ್ಯಗಳ ಜನರ ಭಾಷೆ ಬಾಂಧವ್ಯ ಸಂಸ್ಕೃತಿ ಬೆಸೆಯುವ ಕೊಂಡಿಗಳಾಗಿವೆ. ಗಡಿಯಲ್ಲಿ ಪರಿಶಿಷ್ಟ ಜಾತಿ ಪಂಗಡದ ಜನರು ಬಹುಸಂಖ್ಯಾತರಾಗಿದ್ದಾರೆ. ಬುಡಕಟ್ಟು ಸಂಸ್ಕೃತಿ ಹೆಚ್ಚು ಕಾಣಬಹುದು. ಇಲ್ಲಿ ನಡೆಯುವ ಗೌರಸಮುದ್ರ ಮಾರಮ್ಮ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ನುಂಕಿಮಲೆ ಸಿದ್ದೇಶ್ವರ ಚಳ್ಳಕೆರೆಯ ದನಗಳ ಜಾತ್ರೆ ಜುಂಜಪ್ಪ ಜಾತ್ರೆ ರಾಯದುರ್ಗ ತಾಲ್ಲೂಕುಗಳಲ್ಲಿ ನಡೆಯುವ ಜಾತ್ರೆಗಳನ್ನು ಎರಡೂ ರಾಜ್ಯದವರು ಭಾವೈಕ್ಯತೆಯಿಂದ ಆಚರಣೆ ಮಾಡುತ್ತಾರೆ. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮತ್ತು ಗೌರಸಮುದ್ರ ಮಾರಮ್ಮದೇವಿಯ ಮೂಲ ಆಂಧ್ರವಾಗಿರುವುದೂ ಇದಕ್ಕೆ ಕಾರಣ. ಗಡಿಯ ಹಳ್ಳಿಗಳಲ್ಲಿ ಪರಸ್ಪರ ವಿವಾಹ ಸಂಬಂಧಗಳು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿವೆ. ಈ ಕಾರಣಕ್ಕಾಗಿ ಗಡಿಯಲ್ಲಿ ಕುಟುಂಬಗಳ ಮಧ್ಯೆ ಕೊಟ್ಟು ತೆಗೆದುಕೊಳ್ಳುವ ಸಂಸ್ಕೃತಿ ಕಾಣಬಹುದು. ಕೃಷಿ ಉತ್ಪನ್ನ ಮೇವು ಗೊಬ್ಬರ ಸೇರಿದಂತೆ ಅನೇಕ ಉತ್ಪನ್ನಗಳ ಕೊಡು ಕೊಳ್ಳುವಿಕೆ ಜೀವಂತಿಕೆ ಪಡೆದಿದೆ. ಮೊಳಕಾಲ್ಮುರಿನಲ್ಲಿ ಬಹುಸಂಖ್ಯಾತರಾದ ನಾಯಕ ಜನಾಂಗದವರ ಮಾತೃಭಾಷೆ ತೆಲುಗು. ಈ ಕಾರಣಕ್ಕಾಗಿ ಇಲ್ಲಿ ವ್ಯವಹಾರಕ್ಕೆ ತೆಲುಗು ಜ್ಞಾನ ಅಗತ್ಯ. ರಾಯದುರ್ಗ ಆಂಧ್ರದಲ್ಲಿದ್ದರೂ ಅಲ್ಲಿ ಕನ್ನಡ ಹೆಚ್ಚು ಬಳಕೆಯಲ್ಲಿದೆ. ವ್ಯವಹಾರದಲ್ಲೂ ಕನ್ನಡ ಪ್ರಾಬಲ್ಯವಿದೆ. ಅಲ್ಲಿನ ಬಹುಸಂಖ್ಯಾತರಲ್ಲಿ ಒಬ್ಬರಾದ ಗೊಲ್ಲ ಜನಾಂಗದ ಮಾತೃಭಾಷೆ ಕನ್ನಡ. ಭಾಷಾವಾರು ಪ್ರಾಂತ್ಯ ವಿಂಗಡಣೆ ತನಕ ಆಂಧ್ರದ ಕದರಿ ತನಕ ಕರ್ನಾಟಕದ ಗಡಿ ವಿಸ್ತರಿಸಿಕೊಂಡಿತ್ತು. ಈಗಲೂ ಇಲ್ಲಿ ಕನ್ನಡ ಹೆಚ್ಚು ಬಳಕೆಯಲ್ಲಿದೆ. ಕನ್ನಡದ ನಾಮಫಲಕಗಳನ್ನೂ ಕಾಣಬಹುದಾಗಿದೆ. ಇಬ್ಬರೂ ಭಾಷೆ ಸಂಸ್ಕೃತಿಗೆ ಸಂಬಂಧಪಟ್ಟಂತೆ ಎಂದಿಗೂ ವೈಮನಸ್ಸು ತೋರ್ಪಡಿಸಿಲ್ಲ. ಆದರೆ ಇತ್ತೀಚಿಗೆ ವಾಣಿವಿಲಾಸ ಜಲಾಶಯ ಕೋಡಿ ನೀರಿನ ಹಂಚಿಕೆ ಚಳ್ಳಕೆರೆಯ ಪರಶುರಾಂಪುರ ಭಾಗದಲ್ಲಿ ನಡೆದ ಬ್ಯಾರೇಜ್ ಕಾಮಗಾರಿಗಳ ಸಮಯದಲ್ಲಿ ಅಲ್ಲಿನ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. ಇಲ್ಲಿನ ಪ್ರಸಿದ್ಧ ಮೊಳಕಾಲ್ಮುರು ರೇಷ್ಮೆಸೀರೆ ಕಂಬಳಿ ಉದ್ಯಮದಲ್ಲೂ ಎರಡೂ ರಾಜ್ಯಗಳ ಕಾರ್ಮಿಕರು ಹಾಗೂ ಮಾಲೀಕರ ಸಹಭಾಗಿತ್ವವಿದೆ. ಪ್ರಸಿದ್ಧ ಜೀನ್ಸ್ ಉದ್ಯಮದಲ್ಲಿ ಎರಡೂ ರಾಜ್ಯಗಳ ಕಾರ್ಮಿಕರ ಶ್ರಮವಿದೆ. ಇವು ಅವಳಿ ರಾಜ್ಯಗಳ ಬಾಂಧವ್ಯ ಬೆಸುಗೆಗೆ ಕೊಡುಗೆ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.