ADVERTISEMENT

ಕರಿಬಸವೇಶ್ವರಸ್ವಾಮಿ ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 12:09 IST
Last Updated 25 ಫೆಬ್ರುವರಿ 2020, 12:09 IST
ಚಿತ್ರದುರ್ಗದ ಗುರು ಕರಿಬಸವೇಶ್ವರ ಗದ್ದುಗೆ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಚಿತ್ರದುರ್ಗದ ಗುರು ಕರಿಬಸವೇಶ್ವರ ಗದ್ದುಗೆ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.   

ಚಿತ್ರದುರ್ಗ: ಇಲ್ಲಿನ ಜೋಗಿಮಟ್ಟಿ ರಸ್ತೆಯ ಗುರು ಕರಿಬಸವೇಶ್ವರ ಗದ್ದುಗೆ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ರಥಕ್ಕೆ ಬಾಳೆ ಹಣ್ಣು ಎಸೆದು, ಕಾಯಿ ಒಡೆದು ಭಕ್ತಿ ಸಮರ್ಪಿಸಿದರು.

ಉಕ್ಕಡಗಾತ್ರಿ ಕರಿಬಸವೇಶ್ವರ ಅಜ್ಜಯ್ಯರಿಗೆ ಚಿತ್ರದುರ್ಗ ಸೇರಿ ರಾಜ್ಯದ ಹಲವೆಡೆ ಅಪಾರ ಭಕ್ತರಿದ್ದಾರೆ. ಉಕ್ಕಡಗಾತ್ರಿ ಜಾತ್ರೆಯ ಸಂದರ್ಭದಲ್ಲಿಯೇ ಇಲ್ಲಿಯೂ ರಥೋತ್ಸವ ನೆರವೇರುವುದು ವಾಡಿಕೆ.

ರಥೋತ್ಸವದ ಅಂಗವಾಗಿ ಅಜ್ಜಯ್ಯ ಹಾಗೂ ಗಾಯತ್ರಿ ದೇವಿಗೆ ಬೆಳಿಗ್ಗೆ ಅಭಿಷೇಕ ನೆರವೇರಿತು. ಗಂಗಾಪೂಜೆ, ಮಹಾರುದ್ರಾಭಿಷೇಕದ ಪೂಜೆಗಳು ಜರುಗಿದವು. ಅಜ್ಜಯ್ಯ ಹಾಗೂ ದೇವಿಯ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಕೊಂಡೊಯ್ದು ರಥದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ತರಹೇವಾರಿ ಪುಷ್ಪಗಳಿಂದ ಅಲಂಕರಿಸಿದ ರಥದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.

ADVERTISEMENT

ಶುಭ ಗಳಿಗೆ ಸಮೀಪಿಸುತ್ತಿದ್ದಂತೆ ರಥದ ಚಕ್ರಗಳು ಉರುಳಿದವು. ಕರಿಬಸವೇಶ್ವರ ಸ್ವಾಮಿಯನ್ನು ಸ್ಮರಿಸಿತ್ತ ಭಕ್ತರು ರಥದ ಚಕ್ರಕ್ಕೆ ತೆಂಗಿನ ಕಾಯಿ ಒಡೆದರು. ಬಾಳೆ ಹಣ್ಣು, ದವನದೊಂದಿಗೆ ಭಕ್ತಿ ಸಮರ್ಪಿಸಿದರು. ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲದಿಂದ ಆರಂಭವಾದ ರಥೋತ್ಸವ ಸೇತುವೆವರೆಗೆ ಸಾಗಿ ಮತ್ತೆ ಅಜ್ಜಯ್ಯರ ಗುಡಿಗೆ ಮರಳಿತು.

ಡೊಳ್ಳು, ತಮಟೆ, ಕಹಳೆ, ನಗಾರಿ, ಉರುಮೆ ಸೇರಿ ಹಲವು ವಾದ್ಯ ವೃಂದಗಳು ರಥೋತ್ಸವಕ್ಕೆ ಜೀವಕಳೆ ತುಂಬಿದವು. ಕೀಲುಕುದುರೆ, ವೀರಗಾಸೆ ಸೇರಿ ಹಲವು ಕಲಾತಂಡಗಳು ಗಮನ ಸೆಳೆದವು. ಕರುವಿನಕಟ್ಟೆ ವೃತ್ತ, ಪ್ರಶಾಂತ ನಗರ, ಜಟ್‌ಪಟ್‌ ನಗರ ಸೇರಿ ಹಲವು ಬಡಾವಣೆಗಳಿಂದ ಭಕ್ತರು ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.