ADVERTISEMENT

ಚಿತ್ರದುರ್ಗ: ಸ್ಮಶಾನ ಮೌನಕ್ಕೆ ಶರಣಾದ ಕವಾಡಿಗರಹಟ್ಟಿ

ಕಲುಷಿತ ನೀರಿಗೆ ಐವರು ಬಲಿ, ಅಸ್ವಸ್ಥಗೊಂಡವರ ಸಂಖ್ಯೆ 177ಕ್ಕೆ ಏರಿಕೆ

ಪ್ರಜಾವಾಣಿ ವಿಶೇಷ
Published 5 ಆಗಸ್ಟ್ 2023, 0:17 IST
Last Updated 5 ಆಗಸ್ಟ್ 2023, 0:17 IST
ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಮೌನಕ್ಕೆ ಶರಣಾಗಿದೆ. ಬಹುತೇಕರು ಆಸ್ಪತ್ರೆಗೆ ಸೇರಿರುವುದರಿಂದ ಬೀದಿಗಳು ಬಿಕೊ ಎನ್ನುತ್ತಿವೆ
ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಮೌನಕ್ಕೆ ಶರಣಾಗಿದೆ. ಬಹುತೇಕರು ಆಸ್ಪತ್ರೆಗೆ ಸೇರಿರುವುದರಿಂದ ಬೀದಿಗಳು ಬಿಕೊ ಎನ್ನುತ್ತಿವೆ   

ಜಿ.ಬಿ.ನಾಗರಾಜ್‌

ಚಿತ್ರದುರ್ಗ: ನಗರದ 17ನೇ ವಾರ್ಡ್‌ ವ್ಯಾಪ್ತಿಯ ಕವಾಡಿಗರಹಟ್ಟಿ ಕಲುಷಿತ ನೀರಿನಿಂದ ತಲ್ಲಣಗೊಂಡಿದೆ. ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದವರು ಶವವಾಗಿ ಮರಳುತ್ತಿರುವುದು ಜನರಲ್ಲಿ ದಿಗಿಲು ಮೂಡಿಸಿದೆ. ಮುಂದುವರಿದ ಸಾವಿನ ಸರಣಿಯಿಂದ ಹಟ್ಟಿ ಸ್ಮಶಾನ ಮೌನಕ್ಕೆ ಶರಣಾಗಿದೆ.

ಅಸ್ವಸ್ಥರಾದವರು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬರುವವರೆಗೂ ಏನನ್ನೂ ಹೇಳಲಾಗದ ಸ್ಥಿತಿ ಇದೆ. ಶುಕ್ರವಾರ ಒಂದೇ ದಿನ ಇಬ್ಬರು ಮೃತಪಟ್ಟಿದ್ದನ್ನು ಕಂಡು ಸ್ಥಳೀಯರು ದಿಕ್ಕೇ ತೋಚದಂತಾಗಿದ್ದಾರೆ. ಮತ್ತೆ 19 ಜನರಲ್ಲಿ ವಾಂತಿ–ಭೇದಿ ಕಾಣಿಸಿಕೊಂಡಿದ್ದು, ಅಸ್ವಸ್ಥರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ಮೊದಲ ಮೂರು ಸಾವು ಸಂಭವಿಸಿದಾಗ ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದ ಹಟ್ಟಿಯಲ್ಲಿ ಈಗ ಸದ್ದೇ ಇಲ್ಲದಂತಾಗಿದೆ.

ADVERTISEMENT

ಚಿತ್ರದುರ್ಗದ ಹೊರವಲಯದ ಕವಾಡಿಗರಹಟ್ಟಿ 3,675 ಜನರು ಇದ್ದಾರೆ. ಇದರಲ್ಲಿ 1,128 ಜನರು ಇರುವ ಮೂರು ಬೀದಿಗಳಿಗೆ ಮಾತ್ರ ಕಲುಷಿತ ನೀರು ಪೂರೈಕೆಯಾಗಿದೆ. ಪರಿಶಿಷ್ಟ ಜಾತಿಯ ಜನರೇ ಹೆಚ್ಚಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿನಗೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದವರು ಇದರಿಂದ ಕಂಗಾಲಾಗಿದ್ದಾರೆ.

ಪ್ರತಿ ಮನೆಯಲ್ಲಿ ಇಬ್ಬರು, ಮೂವರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಕುಟುಂಬದ ಸದಸ್ಯರು ಆರೈಕೆಗೆ ತೆರಳಿದ್ದು, ಬೀದಿಯ ಬಹುತೇಕ ಮನೆಗಳಿಗೆ ಬೀಗ ಹಾಕಲಾಗಿದೆ. ‘ಆಸ್ಪತ್ರೆಯಿಂದ ಸಾವಿನ ಸುದ್ದಿ ಬಾರದಿರಲಿ’ ಎಂದು ಜನ ಪ್ರಾರ್ಥಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಮನೆಗೆ ಬಂದವರನ್ನು ಆತಂಕದಿಂದಲೇ ಜನರು ಪ್ರಶ್ನಿಸುತ್ತಿದ್ದಾರೆ. ಶಾಲೆಗೆ ತೆರಳಬೇಕಿದ್ದ 40ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರದಿಂದ (ಸೂಳೆಕೆರೆ) ನಗರಕ್ಕೆ ಪೂರೈಸುವ ನೀರು ಕವಾಡಿಗರಹಟ್ಟಿಗೂ ಸರಬರಾಜು ಆಗುತ್ತಿದೆ. ಓವರ್‌ ಹೆಡ್‌ ಟ್ಯಾಂಕ್‌ ಮೂಲಕ ಮನೆಮನೆಗೆ ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ಕೆರೆಯ ನೀರಿಗೆ ಪರ್ಯಾಯವಾಗಿ ಐದು ಕೊಳವೆ ಬಾವಿಗಳೂ ವಾರ್ಡ್‌ ವ್ಯಾಪ್ತಿಯಲ್ಲಿದ್ದು, ಆಗಾಗ ಎರಡೂ ಮೂಲಗಳಿಂದ ನೀರು ಓದಗಿಸಲಾಗುತ್ತದೆ.

ಕೆಲ ಕುಟುಂಬಗಳು ಮಾತ್ರ ಕುಡಿಯುವ ಉದ್ದೇಶಕ್ಕೆ ಶುದ್ಧ ಕುಡಿಯುವ ನೀರಿನ (ಆರ್‌ಒ) ಘಟಕ ಹೊಂದಿವೆ. ಬಹುತೇಕ ಮನೆಗಳಲ್ಲಿ ನಳದ ನೀರನ್ನು ಸೋಸಿ ಕುಡಿಯುತ್ತಿದ್ದಾರೆ. ಅಡುಗೆ ಹಾಗೂ ಕುಡಿಯಲು ನಲ್ಲಿ ನೀರು ಬಳಸಿದ ಮನೆಗಳಲ್ಲಿ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಕುಡಿಯಲು ಆರ್‌ಒ ಘಟಕ ಬಳಕೆ ಮಾಡಿದವರು ಅಪಾಯದಿಂದ ಪಾರಾಗಿದ್ದಾರೆ.

ಚಿತ್ರದುರ್ಗದ ಕವಾಡಿಗರಹಟ್ಟಿಯ ಕಲುಷಿತ ನೀರಿಗೆ ಕಾರಣವಾದ ಓವರ್‌ ಹೆಡ್‌ ಟ್ಯಾಂಕನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಶುಕ್ರವಾರ ಪರಿಶೀಲಿಸಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.