ADVERTISEMENT

ಹೊಳಲ್ಕೆರೆ: ನವೀನ್ ಹುಟ್ಟೂರಿನಲ್ಲಿ ಮನೆ ಮಾಡಿದ ಸಂಭ್ರಮ

ಹೊಳಲ್ಕೆರೆ ತಾಲ್ಲೂಕಿನ ಎನ್.ಜಿ. ಹಳ್ಳಿಯ ಗ್ರಾಮಸ್ಥರ ಮೊಗದಲ್ಲಿ ಸಂತಸದ ಅಲೆ

ಸಾಂತೇನಹಳ್ಳಿ ಸಂದೇಶ ಗೌಡ
Published 15 ಡಿಸೆಂಬರ್ 2021, 3:56 IST
Last Updated 15 ಡಿಸೆಂಬರ್ 2021, 3:56 IST
ಹೊಳಲ್ಕೆರೆ ತಾಲ್ಲೂಕಿನ ಎನ್.ಜಿ. ಹಳ್ಳಿಯಲ್ಲಿರುವ ಕೆ.ಎಸ್. ನವೀನ್ ಅವರ ಹಳೆಯ ಮನೆ.
ಹೊಳಲ್ಕೆರೆ ತಾಲ್ಲೂಕಿನ ಎನ್.ಜಿ. ಹಳ್ಳಿಯಲ್ಲಿರುವ ಕೆ.ಎಸ್. ನವೀನ್ ಅವರ ಹಳೆಯ ಮನೆ.   

ಹೊಳಲ್ಕೆರೆ: ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಕೆ.ಎಸ್. ನವೀನ್ ಹುಟ್ಟೂರಾದ ತಾಲ್ಲೂಕಿನ ಎನ್.ಜಿ. ಹಳ್ಳಿಯಲ್ಲಿ ಸಂಭ್ರಮ ಮನೆ ಮಾಡಿದೆ. ನವೀನ್ ಗೆಲುವಿನಿಂದ ಇಡೀ ಗ್ರಾಮದಲ್ಲಿ ಸಂತಸದ ಅಲೆ ಉಕ್ಕಿದೆ.

ಊರು ಮನೆ ಮಗ ಚುನಾವಣೆಯಲ್ಲಿ ಗೆದ್ದಿರುವುದು ಎಲ್ಲರಿಗೂ ಖುಷಿ ತಂದಿದೆ. ಈ ಹಿಂದೆ ಎರಡು ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಸೋತಿದ್ದರು. ಈ ಬಾರಿ ಮತದಾರರು ಅವರ ಕೈ ಹಿಡಿದಿದ್ದಾರೆ. ನವೀನ್ ಅವರ ತಾತ ಕೊಟ್ಟಿಗೆ ರಂಗಪ್ಪ ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದರು.

‘ನವೀನ್‌ ಅವರ ತಾತನವರ ಕಾಲದಲ್ಲಿ ನಮ್ಮೂರಿಗೆ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ವಿದ್ಯಾರ್ಥಿನಿಲಯಗಳು, ಬ್ಯಾಂಕ್ ಮತ್ತಿತರ ಮೂಲಸೌಕರ್ಯಗಳು ಬಂದವು. ಈಗ ನವೀನ್ ಅವರು ತಮ್ಮ ಅಜ್ಜನ ಹಾದಿಯಲ್ಲಿ ಸಾಗಿ ಮತ್ತಷ್ಟು ಸೌಲಭ್ಯ ಕಲ್ಪಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ’ ಎಂದು ಅವರ ಒಡನಾಡಿಗಳಾದ ಟಿ. ಜಯಪ್ರಕಾಶ್ ಹಾಗೂ ಬಾಬು ಚರಣ್ ತಿಳಿಸಿದರು.

ADVERTISEMENT

‘ನವೀನ್ ಅವರಿಗೆ ಕೃಷಿ ಬಗ್ಗೆ ಹೆಚ್ಚು ಆಸಕ್ತಿ. ಅವರ ತೋಟದಲ್ಲಿ ಅಡಿಕೆ, ಬಾಳೆ, ಸುಗಂಧರಾಜ ಬೆಳೆಯುತ್ತಾರೆ. 25 ನಾಟಿ ಹಸುಗಳನ್ನು ಸಾಕಿದ್ದಾರೆ. ಹರಿಯಾಣದಿಂದ 50 ಹಸುಗಳನ್ನು ತರಿಸಲು ಶೆಡ್ ಸಜ್ಜುಗೊಳಿಸಿದ್ದಾರೆ. ಕೆಲಸದವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ. ನವೀನ್ ಅವರು ಆಗಾಗ ಬಂದು ಹೋಗುತ್ತಾರೆ. ಇಲ್ಲಿಗೆ ಬಂದಾಗ ಹಸುಗಳ ಜತೆ ಕಾಲಕಳೆಯುತ್ತಾರೆ. ಕೃಷಿಯಲ್ಲೂ ತೊಡಗುತ್ತಾರೆ. ತೋಟದಲ್ಲಿ ನವಿಲುಗಳನ್ನು ನೋಡಿ ಸಂಭ್ರಮಿಸುತ್ತಾರೆ’ ಎಂದು ಅವರು ವಿವರಿಸಿದರು.

‘ನಾವೆಲ್ಲಾ ಸೇರಿ ಮುತ್ತಿನ ಕುಮಾರಿ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್ ರಚಿಸಿದ್ದೇವೆ. ನವೀನ್ ಅದರ ಅಧ್ಯಕ್ಷ. ₹ 45 ಲಕ್ಷ ವೆಚ್ಚದಲ್ಲಿ ಮುತ್ತಿನ ಕುಮಾರಿ ರಥ ನಿರ್ಮಿಸಲು ಚಿಂತನೆ ನಡೆಸಿದ್ದೇವೆ. ಟ್ರಸ್ಟ್ ವತಿಯಿಂದ ಸಮಾಜಸೇವಾ ಕಾರ್ಯ ನಡೆಸಲು ತೀರ್ಮಾನಿಸಿದ್ದೇವೆ. ನವೀನ್ ಅವರು ಗ್ರಾಮದಲ್ಲಿ ಸಾಮರಸ್ಯ ತರುವ ಕೆಲಸ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಎಲ್ಲರೂ ಕೂಡಿ ಬಾಳುವಂತೆ ಮಾಡಿದ್ದಾರೆ’ ಎನ್ನುತ್ತಾರೆ ಜಯಪ್ರಕಾಶ್.

‘ಗ್ರಾಮದ ಹಬ್ಬ, ಜಾತ್ರೆ ವೇಳೆ ಅವರು ಬಂದು ಪೂರ್ವಭಾವಿ ಸಭೆ ನಡೆಸಿ, ಸಾರು ಹಾಕಿದ ನಂತರವೇ ನಮ್ಮೂರಿನ ಮುತ್ತಿನ ಕುಮಾರಿ ಜಾತ್ರೆ ನಡೆಯುತ್ತದೆ. ಪ್ರತಿ ವರ್ಷ ಸರ್ಪೋತ್ಸವ, ಸಿಂಹೋತ್ಸವ ಮಾಡಿಸುತ್ತಾರೆ. ರಥ ಎಳೆದು ಭಕ್ತಿ ಸಮರ್ಪಿಸುತ್ತಾರೆ’ ಎನ್ನುತ್ತಾರೆ ಗಿರೀಶ್, ರಮೇಶ್, ಮಲ್ಲಿಕಾರ್ಜುನ್, ಸಂತೋಷ್, ನಾಗರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.