ADVERTISEMENT

ಚಿತ್ರದುರ್ಗ | ಪ್ರವಾಸೋದ್ಯಮ ನೀತಿ: 39 ತಾಣಗಳಿಗೆ ಸ್ಥಾನ

ಎಂ.ಎನ್.ಯೋಗೇಶ್‌
Published 10 ಸೆಪ್ಟೆಂಬರ್ 2025, 7:27 IST
Last Updated 10 ಸೆಪ್ಟೆಂಬರ್ 2025, 7:27 IST
ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ
ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ   

ಚಿತ್ರದುರ್ಗ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಹೊಸ ಪ್ರವಾಸೋದ್ಯಮ ನೀತಿ 2024–29ರಲ್ಲಿ ಜಿಲ್ಲೆಯ 39 ಪ್ರವಾಸಿ ತಾಣಗಳು ಸ್ಥಾನ ಪಡೆದಿವೆ. ಚಳ್ಳಕೆರೆ ತಾಲ್ಲೂಕಿನ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ, ಹಿರಿಯೂರು ತಾಲ್ಲೂಕಿನ ವದ್ದೀಕೆರೆ ಸಿದ್ದೇಶ್ವರಸ್ವಾಮಿ ದೇವಾಲಯ, ಚಿತ್ರದುರ್ಗ ತಾಲ್ಲೂಕಿನ ತಮಟಕಲ್ಲು ಹೊಸದಾಗಿ ಸೇರ್ಪಡೆಯಾಗಿವೆ.

ಪ್ರತಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಿ ಜಾಗತಿಕ ಪ್ರವಾಸಿ ತಾಣದ ರೂಪ ನೀಡುವುದು, ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದು, ಉದ್ಯೋಗ ಸೃಷ್ಟಿಸುವುದು ಪ್ರವಾಸೋದ್ಯಮ ನೀತಿಯ ಉದ್ದೇಶವಾಗಿದೆ. ನೀತಿಯಲ್ಲಿ ರಾಜ್ಯದ 1,275 ತಾಣಗಳಿಗೆ ಮಾನ್ಯತೆ ನೀಡಲಾಗಿದ್ದು ಅವುಗಳ ಪೈಕಿ ಜಿಲ್ಲೆಯಲ್ಲಿ 39 ತಾಣಗಳನ್ನು ಗುರುತಿಸಲಾಗಿದೆ.

ಕೋಟೆನಾಡು ಚಿತ್ರದುರ್ಗ ಜಿಲ್ಲೆ ವಿಶ್ವದ ಭೂಪಟದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ವಿಶ್ವಪ್ರಸಿದ್ಧ ಕಲ್ಲಿನಕೋಟೆ ಸೇರಿದಂತೆ ಹಲವು ಪ್ರವಾಸಿ ತಾಣಗಳು, ಜಿಲ್ಲೆಯಲ್ಲಿರುವ ಪ್ರಾಕೃತಿಕ ಸಂಪನ್ಮೂಲ, ವಿಭಿನ್ನ ಪರಿಸರ ಸದಾ ಪ್ರವಾಸಿಗರನ್ನು ಸೆಳೆಯುತ್ತದೆ. ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಹೊಸ ತಾಣ ಗುರುತಿಸಿರುವುದು ಮತ್ತಷ್ಟು ಪ್ರವಾಸಿಗರನ್ನು ಕೈಬೀಸಿ ಕರೆಯುವಂತೆ ಮಾಡಿದೆ.

ADVERTISEMENT

ರಾಜ್ಯ ಹೊರರಾಜ್ಯಗಳ ಲಕ್ಷಾಂತರ ಭಕ್ತರು ದರ್ಶನ ಪಡೆಯುವ ಗುರು ತಿಪ್ಪೇರುದ್ರಸ್ವಾಮಿಯ ದೇವಾಲಯ ಇಲ್ಲಿಯವರೆಗೂ ಪ್ರವಾಸೋದ್ಯಮ ನೀತಿಯಲ್ಲಿ ಸೇರಿರಲಿಲ್ಲ. ಜಿಲ್ಲೆಯಲ್ಲಿ ಮನೆಗೊಬ್ಬರಿಗೆ ತಿಪ್ಪೇರುದ್ರಸ್ವಾಮಿ ಎಂದು ಹೆಸರಿಡುತ್ತಾರೆ. ಈಗಷ್ಟೇ ನೀತಿಯಲ್ಲಿ ಸೇರ್ಪಡೆಯಾಗಿರುವುದು ಕ್ಷೇತ್ರದ ಅಭಿವೃದ್ಧಿಯ ಬಾಗಿಲು ತೆರೆದುಕೊಂಡಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

‘ಮಾಡಿದಷ್ಟು ನೀಡು ಭಿಕ್ಷೆ’ ಎಂಬ ತತ್ವವನ್ನು ಸಾರಿದ ತಿಪ್ಪೇರುದ್ರಸ್ವಾಮಿಗಳು 15ನೇ ಶತಮಾನದಲ್ಲಿ ಅನೇಕ ಪವಾಡಗಳ ಮೂಲಕ ಭಕ್ತರ ಗಮನ ಸೆಳೆದಿದ್ದರು. ಕೇವಲ ಧಾರ್ಮಿಕ ಗುರುವಾಗಿರದೇ, ಕೆರೆ–ಕಟ್ಟೆ ನಿರ್ಮಿಸಿ ಬರದ ನಾಡಿಗೆ ನೀರು ತಂದ ಭಗೀರಥರಾಗಿ ಕಂಡಿದ್ದರು. ಪ್ರತಿ ವರ್ಷ ನಡೆಯುವ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸೇರುತ್ತಾರೆ.

ಹಿರಿಯೂರು ತಾಲ್ಲೂಕಿನ ವದ್ದೀಕೆರೆ ಗ್ರಾಮದ ಐತಿಹಾಸಿಕ ಕಾಲಭೈರವೇಶ್ವರಸ್ವಾಮಿ (ಸಿದ್ದೇಶ್ವರ) ದೇವಾಲಯ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಸ್ಥಾನ ಪಡೆದಿದೆ. ಇಲ್ಲಿಯ ಮಜ್ಜನ ಬಾವಿಯ ಚಮತ್ಕಾರದ ಬಗ್ಗೆ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ದೇವರ ರಥೋತ್ಸವದಂದು ಬಾವಿ ಭರ್ತಿಯಾಗಿರುತ್ತದೆ. ರಥೋತ್ಸವದ ಮರು ದಿನ ಮಜ್ಜನ ಬಾವಿ ಸಂಪೂರ್ಣ ಖಾಲಿಯಾಗುತ್ತದೆ. ಕಂಕಣ ವಿಸರ್ಜನೆ ದಿನದ ನಂತರ ಮತ್ತೆ ಬಾವಿ ತುಂಬಿಕೊಳ್ಳುತ್ತದೆ. ಈ ಬಾವಿಯ ನೀರನ್ನು ಮೈಮೇಲೆ ಹಾಕಿಕೊಂಡರೆ ಆರೋಗ್ಯ ಭಾಗ್ಯ ದೊರೆಯಲಿದೆ ಎಂಬುದು ಜನರ ನಂಬಿಕೆಯಾಗಿದೆ.

ಚಿತ್ರದುರ್ಗದ ಸಮೀಪದಲ್ಲಿರುವ ತಮಟಕಲ್ಲು ಗ್ರಾಮ ಶಿಲಾ ಶಾಸನಗಳ ಗ್ರಾಮವಾಗಿದ್ದು ಈ ಬಾರಿಯ ಪ್ರವಾಸೋದ್ಯಮ ನೀತಿಯಲ್ಲಿ ಸ್ಥಾನ ಪಡೆದಿದೆ. ಗ್ರಾಮದ ಹೊರ ವಲಯದಲ್ಲಿರುವ ಎರಡು ದೊಡ್ಡ ಕಲ್ಲುಚಪ್ಪಡಿಗಳಲ್ಲಿರುವ ಶಾಸನಗಳು ಕ್ರಿ.ಶ. 6ನೇ ಶತಮಾನದ ಗುಣಮಧುರ ಎಂಬ ರಾಜನವು. ಒಂದು ಶಾಸನದಲ್ಲಿ ‘ರಾಜ ಮಸಿಕ್ಕಾಪುರದ ಅಧಿಪತಿಯಾಗಿದ್ದಾನೆಂದೂ, ಶೌರ್ಯದ, ತ್ಯಾಗ, ರಸಿಕತೆಗಳಿಗೆ ಹೆಸರಾಗಿದ್ದ’ ಎಂದು ಹೇಳುತ್ತದೆ. ಅದೇ ಕಾಲದ ವಟ್ಟೆಳತ್ತು ಲಿಪಿಯ ತಮಿಳು ಶಾಸನ ಕೂಡ ಗ್ರಾಮದಲ್ಲಿದ್ದು ತಮಿಳುನಾಡು ಸಂಶೋಧಕರ ಕುತೂಹಲದ ತಾಣವೂ ಆಗಿದೆ.

‘39 ತಾಣಗಳಷ್ಟೇ ಅಲ್ಲ. ನೂರಾರು ಆಕರ್ಷಕ ತಾಣಗಳು ದುರ್ಗದ ಪಕೃತಿಯ ಮಡಿಲಲ್ಲಿವೆ. ಪ್ರವಾಸೋದ್ಯಮ ಇಲಾಖೆ ಅವುಗಳನ್ನೂ ಗುರುತಿಸಬೇಕು’ ಎಂದು ಯುವ ಸಂಶೋಧಕ ಎನ್‌.ಎಸ್‌.ಮಹಾಂತೇಶ್‌ ಒತ್ತಾಯಿಸಿದರು.

ವದ್ದೀಕೆರೆ ಸಿದ್ದೇಶ್ವರ ದೇವಾಲಯದ ಸಮೀಪದ ಮಜ್ಜನ ಬಾವಿ
ತಮಟಕಲ್ಲು ಬಳಿ ದೊರೆತಿರುವ ಶಾಸನ
ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ (ಡಿಟಿಡಿಸಿ) ಶಿಫಾರಸಿನ ಮೇರೆಗೆ ಹೊಸದಾಗಿ ಮೂರು ತಾಣಗಳನ್ನು ನೀತಿಯಲ್ಲಿ ಸೇರಿಸಲಾಗಿದೆ. ತಾಣಗಳ ಅಭಿವೃದ್ಧಿಗೆ ಇದು ಸಹಾಯಕವಾಗಲಿದೆ.
ಶಶಿಕುಮಾರ್‌ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ

ಪ್ರವಾಸೋದ್ಯಮ ನೀತಿಯಲ್ಲಿರುವ ತಾಣಗಳು (ಪಟ್ಟಿ) ಚಿತ್ರದುರ್ಗ ತಾಲ್ಲೂಕು ಕಲ್ಲಿನಕೋಟೆ ಚಂದ್ರವಳ್ಳಿ ಆಡುಮಲ್ಲೇಶ್ವರ ಜೋಗಿಮಟ್ಟಿ ನಿಜಲಿಂಗಪ್ಪ ಸ್ಮಾರಕ ಪಂಡರಹಳ್ಳಿ ತಮಟಕಲ್ಲು ಹೊಸದುರ್ಗ ತಾಲ್ಲೂಕು ಹಾಲುರಾಮೇಶ್ವರ ದೇವಾಲಯ ಜಾನಕಲ್‌ ಬೆಲಗೂರು ಹೆಗ್ತೆರೆ ದಶರಥರಾಮೇಶ್ವರ ಹೊಸದುರ್ಗ ಕೋಟೆ ಗವಿರಂಗನಾಥ ಸ್ವಾಮಿ ಬೆಟ್ಟ ಚೆನ್ನಕೇಶವ ದೇವಾಲಯ ಬಾಗೂರು ನೀರಗುಂದ ಸಿದ್ದೇಶ್ವರ ದೇವಾಲಯ ಚಳ್ಳಕೆರೆ ತಾಲ್ಲೂಕು ತಿಪ್ಪೇರುದ್ರಸ್ವಾಮಿ ದೇವಾಲಯ ರಾಮದುರ್ಗ/ಹೊಸಗುಡ್ಡ ಗೌರಸಮುದ್ರ ಮಾರಮ್ಮ ದೇವಾಲಯ ಹೊಳಲ್ಕೆರೆ ತಾಲ್ಲೂಕು ರಾಮಗಿರಿ ದೊಡ್ಡಹೊಟ್ಟೆ ರಂಗಪ್ಪನ ಬೆಟ್ಟ ಪ್ರಸನ್ನ ಗಣಪತಿ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯ ‌ರಾಮೇಶ್ವರ ದೇವಾಲಯ  ಭರಮಣ್ಣನಾಯಕ ದುರ್ಗ ಹಿರಿಯೂರು ತಾಲ್ಲೂಕು ವಿವಿ ಸಾಗರ ಜಲಾಶಯ ಗಾಯತ್ರಿ ಜಲಾಶಯ ತೇರುಮಲ್ಲೇಶ್ವರ ದೇವಾಲಯ ವದ್ದೀಕೆರೆ ಸಿದ್ದೇಶ್ವರ ಅಂಬಲಗೆರೆ ರಂಗನಾಥಸ್ವಾಮಿ ಮರಡಿಹಳ್ಳಿ ಪೊಲ್ಲೋಲಾವಾ ಮೊಳಕಾಲ್ಮುರು ತಾಲ್ಲೂಕು ಮೊಳಕಾಲ್ಮುರು ಗುಡ್ಡ ಸಂತೇಗುಡ್ಡ ರಂಗಯ್ಯನ ದುರ್ಗ ಜಲಾಶಯ ನುಂಕಿಮಲೆ/ದೇವರಗುಡ್ಡ ಅಶೋಕ ಸಿದ್ದಾಪುರ/ಬ್ರಹ್ಮಗಿರಿ ಜಟಿಂಗ ರಾಮೇಶ್ವರ ಬಿಳಿನೀರು ಚಿಲುಮೆ ಕೊಂಡ್ಲಹಳ್ಳಿ ತ್ರಿಶಂಕೇಶ್ವರಿ ದೇವಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.