ADVERTISEMENT

ಚಿತ್ರದುರ್ಗ | ಐತಿಹಾಸಿಕ ಕೆಂಚಮಲ್ಲಪ್ಪ ಹೊಂಡದ ಮೂಲಸ್ವರೂಪಕ್ಕೆ ಧಕ್ಕೆ

ಬಿ.ಡಿ.ರಸ್ತೆ ವಿಸ್ತರಣೆ ನೆಪದಲ್ಲಿ ಹಾನಿ, ಜಲಸಂರಕ್ಷಣೆ ಮರೆತ ಸರ್ಕಾರ

ಜಿ.ಬಿ.ನಾಗರಾಜ್
Published 28 ಜೂನ್ 2020, 19:30 IST
Last Updated 28 ಜೂನ್ 2020, 19:30 IST
ಚಿತ್ರದುರ್ಗದ ಎಲ್‌ಐಸಿ ಸಮೀಪದ ಕೆಂಚಮಲ್ಲಪ್ಪ ಹೊಂಡಕ್ಕೆ ಗೋಡೆ ಕಟ್ಟಲಾಗುತ್ತಿದೆ.ಚಿತ್ರ–ಭವಾನಿ ಮಂಜು
ಚಿತ್ರದುರ್ಗದ ಎಲ್‌ಐಸಿ ಸಮೀಪದ ಕೆಂಚಮಲ್ಲಪ್ಪ ಹೊಂಡಕ್ಕೆ ಗೋಡೆ ಕಟ್ಟಲಾಗುತ್ತಿದೆ.ಚಿತ್ರ–ಭವಾನಿ ಮಂಜು   

ಚಿತ್ರದುರ್ಗ: ಐತಿಹಾಸಿಕ ಕೋಟೆನಗರಿಯ ಸೌಂದರ್ಯ ಹೆಚ್ಚಿಸಿ ಜಲಸಂರಕ್ಷಣೆಯ ಮಹತ್ವ ಸಾರಿದ ಹೊಂಡ, ಕಲ್ಯಾಣಿ ಸ್ಥಳೀಯ ಆಡಳಿತದ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿರುವುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ. ಬಿ.ಡಿ. ರಸ್ತೆ ವಿಸ್ತರಣೆಯ ನೆಪದಲ್ಲಿ ಕೆಂಚಮಲ್ಲಪ್ಪ ಹೊಂಡದ ಮೂಲ ಸ್ವರೂಪಕ್ಕೆ ಧಕ್ಕೆಯುಂಟು ಮಾಡಲಾಗಿದೆ.

ಜೀವ ವಿಮಾ ನಿಗಮದ ಸಮೀಪದಲ್ಲಿರುವ ಕೆಂಚಮಲ್ಲಪ್ಪ ಹೊಂಡ ‘ಎಲ್‌ಐಸಿ’ ಹೊಂಡವೆಂದೇ ಪರಿಚಿತ. ಕಲ್ಯಾಣಿಯಂತೆ ಕಂಗೊಳಿಸುತ್ತಿದ್ದ ಹೊಂಡದ ಉತ್ತರ ಭಾಗ ರಸ್ತೆಯಲ್ಲಿ ಹೂತು ಹೋಗಿದೆ. ಕಾಂಕ್ರಿಟ್‌ ಗೋಡೆ ನಿರ್ಮಿಸಿ ಪಾರಂಪರಿಕ ಸ್ವರೂಪವನ್ನು ಸಂಪೂರ್ಣವಾಗಿ ಹಾಳು ಮಾಡಲಾಗಿದೆ.

ಪಾಳೆಗಾರರ ಪರಿಕಲ್ಪನೆ:ಬರದ ಬವಣೆಯನ್ನು ಅನುಭವಿಸಿದ ಕೋಟೆನಾಡು ಜಲಸಂರಕ್ಷಣೆಯ ಮಹತ್ವವನ್ನು ಶತಮಾನಗಳ ಹಿಂದೆಯೇ ಅರಿತಿದೆ. ಭೂಮಿಯ ಮೇಲೆ ಬಿದ್ದ ಪ್ರತಿ ಹನಿಯನ್ನು ಸಂಗ್ರಹಿಸಲು ಚಿತ್ರದುರ್ಗ ಆಳಿದ ಪಾಳೆಗಾರರು ಒತ್ತು ನೀಡಿದ್ದರು. ಹೀಗಾಗಿ, ಐತಿಹಾಸಿಕ ಕಲ್ಲಿನ ಕೋಟೆ ಸೇರಿ ನಗರದೊಳಗೆ ಹಲವು ಕಲ್ಯಾಣಿ, ಹೊಂಡಗಳು ರೂಪು ತಳೆದಿದ್ದವು. ನಗರದ ನೀರಿನ ಅಗತ್ಯತೆಯನ್ನು ಈ ಹೊಂಡಗಳೇ ಪೂರೈಸುತ್ತಿದ್ದವು.

ADVERTISEMENT

ಬೆಟ್ಟ ಪ್ರದೇಶದಿಂದ ಕೂಡಿದ ನಗರದಲ್ಲಿ ಬಿದ್ದ ಮಳೆ ನೀರು ಜಲಮೂಲಗಳನ್ನು ಸೇರುವಂತೆ ವಿನ್ಯಾಸ ಮಾಡಲಾಗಿದೆ. ಕೋಟೆಯೊಳಗಿನ ಹೊಂಡ, ಒಡ್ಡುಗಳಿಗೆ ಬರುವ ನೀರು, ಕೋಟೆ ಹೊರಭಾಗದ ಹೊಂಡಗಳ ಒಡಲು ಸೇರುತ್ತದೆ. ಸಿಹಿನೀರು ಹೊಂಡದ ನೀರನ್ನು ನಗರದ ಜನ ಹಲವು ವರ್ಷ ಕುಡಿಯಲು ಬಳಸುತ್ತಿದ್ದರು. ಜೋಗಿಮಟ್ಟಿ ರಸ್ತೆ ಹಾಗೂ ಕೋಟೆ ಮುಂಭಾಗದಲ್ಲಿ ಬಿದ್ದ ನೀರು ರಾಜಕಾಲುವೆ ಮೂಲಕ ಕೆಂಚಮಲ್ಲಪ್ಪ ಹೊಂಡ ಸೇರುತ್ತಿತ್ತು.

ನೀರಿನ ಬದಲು ತ್ಯಾಜ್ಯ:ಕೆಂಚಮಲ್ಲಪ್ಪ ಹೊಂಡದ ನೀರು ಹಲವು ಬಡಾವಣೆಗಳಿಗೆ ಬಳಕೆ ಆಗುತ್ತಿತ್ತು. ಹೊಂಡ ಮಲಿನಗೊಂಡಂತೆ ನೀರಿನ ಬಳಕೆ ಕಡಿಮೆಯಾಗಿತ್ತು. ಪ್ಲಾಸ್ಟಿಕ್‌ ಚೀಲ, ನೀರಿನ ಬಾಟಲಿ, ತೆಂಗಿನ ಕಾಯಿ, ಪೂಜೆ ಸಾಮಗ್ರಿಗಳು ಹೊಂಡದ ನೀರಿನಲ್ಲಿ ತೇಲುವಂತಾಯಿತು. ಹೊಂಡವನ್ನು ಶುಚಿಗೊಳಿಸುವ ಅಭಿಯಾನವನ್ನು ನಗರಸಭೆ 2017ರಲ್ಲಿ ನಡೆಸಿತ್ತು. ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ನೇತೃತ್ವದಲ್ಲಿ 2019ರಲ್ಲಿಯೂ ಸ್ವಚ್ಛತೆ ಕಾರ್ಯ ನಡೆದಿತ್ತು.

ಹೊಂಡ ಸಂರಕ್ಷಣೆ ಮಾಡುವಂತೆ ಆಗಾಗ ಕೂಗು ಕೇಳಿಬರುತ್ತದೆಯಾದರೂ ಸ್ಪಷ್ಟ ರೂಪುರೇಷ ಸಿದ್ಧವಾಗುತ್ತಿಲ್ಲ. ಹೊಂಡ ಶುಚಿಗೊಂಡ ತಿಂಗಳ ಬಳಿಕ ಮತ್ತೆ ಕೊಳೆತು ದುರ್ವಾಸನೆ ಬೀರುವ ತಾಣವಾಗುತ್ತದೆ. ಹೊಂಡದ ಅರ್ಧ ಭಾಗ ತುಂಬಿದ್ದು, ಈಗಲೂ ನೀರು ಪಾಚಿ ಕಟ್ಟಿದೆ.

ರಸ್ತೆ ವಿಸ್ತರಣೆಗೆ ಒತ್ತುವರಿ:ಬಿ.ಡಿ.ರಸ್ತೆ ವಿಸ್ತರಣೆ ಕಾಮಗಾರಿಯನ್ನು ಕೈಗೆತ್ತಿಕೊಂಡು ವರ್ಷ ಕಳೆದಿದೆ. ರಸ್ತೆಯ ಮಧ್ಯ ಭಾಗದಿಂದ 13.5 ಮೀಟರ್‌ ವಿಸ್ತರಣೆ ಆಗಲಿದೆ. 10.5 ಮೀಟರ್‌ ಕಾಂಕ್ರಿಟ್‌ ರಸ್ತೆ ಹಾಗೂ 2 ಮೀಟರ್‌ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ. ಚಳ್ಳಕೆರೆ ಗೇಟಿನಿಂದ ಪ್ರವಾಸಿ ಮಂದಿರದವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆ ವಿಸ್ತರಣೆಗೆ ಹೊಂಡವನ್ನು ಬಲಿ ಪಡೆಯಲಾಗಿದೆ.

ಲಾಕ್‌ಡೌನ್‌ ಘೋಷಣೆಗೂ ಮೊದಲೇ ಹೊಂಡದ ಒಂದು ಭಾಗದ ಗೋಡೆಯನ್ನು ಕೆಡವಲಾಗಿದೆ. ಬಳಿಕ ಸುಮಾರು ಎರಡು ತಿಂಗಳು ಕಾಮಗಾರಿ ಸ್ಥಗಿತಗೊಂಡಿತ್ತು. ತೆರೆದ ಬಾವಿಯಂತೆ ಕಾಣುತ್ತಿದ್ದ ಹೊಂಡಕ್ಕೆ ಕಾಂಕ್ರಿಟ್‌ ಗೋಡೆ ನಿರ್ಮಿಸಲಾಗಿದೆ. ಹೊಂಡ ಕಿರಿದಾಗಿದ್ದು, ಸೌಂದರ್ಯವನ್ನು ಕಳೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.