ADVERTISEMENT

ಸಾರಿಗೆ ಬಸ್‌ ಸಂಚಾರ ಆರಂಭ

ತಾಲ್ಲೂಕು ಕೇಂದ್ರಗಳಿಗೆ ಸೇವೆ, 30 ಪ್ರಯಾಣಿಕರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 4 ಮೇ 2020, 15:48 IST
Last Updated 4 ಮೇ 2020, 15:48 IST

ಚಿತ್ರದುರ್ಗ: ಒಂದೂವರೆ ತಿಂಗಳಿಂದ ಸ್ಥಗಿತಗೊಂಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ ಸಂಚಾರ ಸೋಮವಾರ ಪುನರಾರಂಭಗೊಂಡಿತು. ಮೊಳಕಾಲ್ಮುರು ಹೊರತುಪಡಿಸಿ ಎಲ್ಲ ತಾಲ್ಲೂಕು ಕೇಂದ್ರಗಳಿಗೆ ಮೊದಲ ದಿನವೇ 32 ಬಸ್‌ಗಳು ಸೇವೆ ಒದಗಿಸಿದವು.

ಹಸಿರು ವಲಯದಲ್ಲಿ ಸಾರಿಗೆ ಬಸ್‌ ಸಂಚಾರಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಜಿಲ್ಲೆಯ ಒಳಗೆ ಸಂಚರಿಸಬಹುದಾಗಿದೆ. ಹಸಿರು ವಲಯದಲ್ಲಿರುವ ಚಿತ್ರದುರ್ಗದಲ್ಲಿ ಬಸ್‌ ಸಂಚಾರಕ್ಕೆ ಎರಡು ದಿನಗಳ ಹಿಂದೆಯೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸೇವೆ ಒದಗಿಸಲಾಯಿತು.

ನಿಗದಿತ ಸಮಯಕ್ಕೂ ಮೊದಲೇ ಪ್ರಯಾಣಿಕರು ನಿಲ್ದಾಣಕ್ಕೆ ಬಂದಿದ್ದರು. ಜನದಟ್ಟಣೆಯನ್ನು ನಿಯಂತ್ರಿಸಲು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಸರತಿ ಸಾಲು ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಮಾರ್ಕಿಂಗ್‌ ಮಾಡಲಾಗಿತ್ತು. ಬೆಳಿಗ್ಗೆ 10.30ಕ್ಕೆ ಆರಂಭವಾದ ಸಂಚಾರ ಸಂಜೆ 7 ಗಂಟೆಯವರೆಗೆ ನಡೆಯಿತು.

ADVERTISEMENT

ಚಿತ್ರದುರ್ಗ ಡಿಪೊದ 18 ಬಸ್‌, ಹೊಸದುರ್ಗ ಡಿಪೊದ 6 ಬಸ್‌ ಹಾಗೂ ಚಳ್ಳಕೆರೆ ಡಿಪೊದಿಂದ 8 ಬಸ್‌ ಸಂಚರಿಸಿದವು. ಹಿರಿಯೂರು, ಹೊಳಲ್ಕೆರೆ ಸೇರಿ ಎಲ್ಲ ತಾಲ್ಲೂಕು ಕೇಂದ್ರಗಳಿಗೆ ಬಸ್‌ ಸಂಚರಿಸಿದವು.

ಸರತಿ ಸಾಲಿನಲ್ಲಿ ಬಂದ ಪ್ರಯಾಣಿಕರನ್ನು ಥರ್ಮಲ್‌ ಸ್ಕ್ರೀನಿಂಗ್‌ ಮಾಡಲಾಯಿತು. ಈ ಕಾರ್ಯಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಬಸ್‌ ನಿಲ್ದಾಣಕ್ಕೆ ನಿಯೋಜಿಸಲಾಗಿದೆ. ಜ್ವರ, ಶೀಥ, ಕೆಮ್ಮು ಇರುವವರಿಗೆ ಪ್ರಯಾಣಕ್ಕೆ ಅವಕಾಶ ನೀಡಲಿಲ್ಲ. ನಿಲ್ದಾಣದಿಂದ ಹೊರಟ ಬಸ್‌ ಮಾರ್ಗ ಮಧ್ಯೆದಲ್ಲಿ ನಿಲುಗಡೆ ಮಾಡಲಿಲ್ಲ. ಪ್ರಯಾಣಿಸಿದ ಪ್ರತಿಯೊಬ್ಬರ ಹೆಸರು, ವಿಳಾಸ ಹಾಗೂ ಮೊಬೈಲ್‌ ಸಂಖ್ಯೆಯನ್ನು ನಿರ್ವಾಹಕರು ದಾಖಲಿಸಿಕೊಂಡರು.

ಪ್ರಯಾಣಕ್ಕೆ ಮಾಸ್ಕ್‌ ಕಡ್ಡಾಯಗೊಳಿಸಲಾಗಿತ್ತು. ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಒಂದು ಬಸ್‌ನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಪ್ರಯಾಣಕ್ಕೂ ಮೊದಲೇ ಎಲ್ಲರ ಕೈಗಳನ್ನು ಸ್ಯಾನಿಟೈಸ್‌ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.