ADVERTISEMENT

ಹಿರಿಯೂರು: ದಶಕಗಳ ಕನಸು ನನಸಾಗುವ ಹೊತ್ತು...

ನಾಳೆ ಉದ್ಘಾಟನೆಗೊಳ್ಳಲಿರುವ ಕೆಎಸ್‌ಆರ್‌ಟಿಸಿ ಬಸ್‌ ಡಿಪೊ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:38 IST
Last Updated 29 ಆಗಸ್ಟ್ 2025, 5:38 IST
ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೊ 
ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಡಿಪೊ    

ಹಿರಿಯೂರು: ನಗರದಲ್ಲಿ ಕೆಎಸ್‌ಆರ್‌ಟಿಸಿ (ರಾಜ್ಯ ರಸ್ತೆ ಸಾರಿಗೆ ಸಂಸ್ಥೆ)ಯ ಬಸ್‌ ಘಟಕ (ಡಿಪೊ) ಸ್ಥಾಪನೆ ಆಗುವುದನ್ನು ಕಣ್ತುಂಬಿಕೊಳ್ಳಬೇಕೆಂಬ ಸ್ಥಳೀಯರ ದಶಕಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಹುಳಿಯಾರು ರಸ್ತೆಯಲ್ಲಿ ಅಂದಾಜು ₹ 6 ಕೋಟಿ ವೆಚ್ಚದಲ್ಲಿ ಡಿಪೊ ನಿರ್ಮಾಣಗೊಂಡಿದ್ದು, ಆಗಸ್ಟ್ 30ರಂದು ಬೆಳಿಗ್ಗೆ 11ಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆಗೊಳಿಸಲಿದ್ದಾರೆ.

ನಗರದಲ್ಲಿ ಕೆಎಸ್‌ಆರ್‌ಟಿಸಿ ಡಿಪೊ ಆರಂಭಿಸಬೇಕೆಂಬ ಕೂಗು ಮೊದಲ ಬಾರಿಗೆ ಕೇಳಿಬಂದಿದ್ದು 1998ರಲ್ಲಿ. ಸಚಿವರಾಗಿದ್ದ ಪಿಜಿಆರ್ ಸಿಂಧ್ಯಾ ಅವರು ಕೆಎಸ್‌ಆರ್‌ಟಿಸಿಯ ನೂತನ ಬಸ್‌ ನಿಲ್ದಾಣದ ಉದ್ಘಾಟನೆಗೆಂದು ನಗರಕ್ಕೆ ಬಂದಿದ್ದರು. ಆಗ ಸ್ಥಳೀಯರು ಡಿಪೊ ಆರಂಭಿಸಬೇಕೆಂಬ ಆಗ್ರಹ ಮುಂದಿಟ್ಟಿದ್ದರು. 2010ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಡಿ. ಸುಧಾಕರ್ ಅವರು ಸಾರಿಗೆ ಸಚಿವ ಆರ್. ಅಶೋಕ ಅವರನ್ನು ಕರೆತಂದು ಹಾಲಿ ಜಾಗದಲ್ಲೇ ಡಿಪೊ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಅದಾಗಿ 12 ವರ್ಷಗಳಾದರೂ ಈ ಕನಸು ಈಡೇರಿರಲಿಲ್ಲ.

ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದ ಬಿ.ಶ್ರೀರಾಮುಲು ಈ ಬೇಡಿಕೆಗೆ ಸ್ಪಂದಿಸಿದ್ದರು. 2022ರ ಜೂನ್ 6ರಂದು ಅವರು ಡಿಪೊ ನಿರ್ಮಾಣಕ್ಕೆ ಮತ್ತೆ ಭೂಮಿ ಪೂಜೆ ನೆರವೇರಿಸಿದ್ದರು. ತಮ್ಮ ಅಧಿಕಾರವಧಿಯಲ್ಲೇ ಅದನ್ನು ನಿರ್ಮಿಸಿ ಉದ್ಘಾಟಿಸುವ ಭರವಸೆಯನ್ನೂ ನೀಡಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅದು ಈಡೇರಲಿಲ್ಲ. ಅದಾಗಿ ಮೂರು ವರ್ಷಗಳ ನಂತರ ಲೋಕಾರ್ಪಣೆಗೆ ಮುಹೂರ್ತ ನಿಗದಿಯಾಗಿದೆ. ಇದು ನಾಗರಿಕರ ಸಂತಸಕ್ಕೂ ಕಾರಣವಾಗಿದೆ.

ADVERTISEMENT

ಚಿತ್ರದುರ್ಗ ಬಿಟ್ಟರೆ ಜಿಲ್ಲೆಯಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಹಿರಿಯೂರು. ಬೀದರ್– ಶ್ರೀರಂಗಪಟ್ಟಣ, ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗಳು ನಗರದ ಮೂಲಕ ಹಾದು ಹೋಗಿವೆ. ಚಳ್ಳಕೆರೆ, ಹೊಸದುರ್ಗ ತಾಲ್ಲೂಕುಗಳಲ್ಲಿ ಸಾರಿಗೆ ಸಂಸ್ಥೆ ಡಿಪೊಗಳಿವೆ. ಆದರೆ ಹಿರಿಯೂರು ಇದರಿಂದ ವಂಚಿತವಾಗಿತ್ತು. ವಿಧಾನಸಭೆ ಚುನಾವಣೆಗೆ ಇಲ್ಲಿಂದಲೇ ಸ್ಪರ್ಧಿಸಿ ಗೆದ್ದಿದ್ದ ಕೆ.ಎಚ್. ರಂಗನಾಥ್, ಡಿ. ಮಂಜುನಾಥ್ ಅವರು ಸಚಿವ ಸ್ಥಾನವನ್ನೂ ಅಲಂಕರಿಸಿದ್ದರು. ಆದರೂ ಇಲ್ಲಿ ಡಿಪೊ ಸ್ಥಾಪನೆ ಭಾಗ್ಯ ಮಾತ್ರ ದೊರೆತಿರಲಿಲ್ಲ.

ಮರುಚಾಲನೆ

2017ರಲ್ಲಿ ಪೂರ್ಣಿಮಾ ಶ್ರೀನಿವಾಸ್ ಶಾಸಕಿಯಾಗಿದ್ದಾಗ ತಾಲ್ಲೂಕಿನ ಪಟ್ರೆಹಳ್ಳಿ ಸಮೀಪದ ಆದಿವಾಲ ಗ್ರಾಮದ ರಿ.ಸ.ನಂ. 109ರಲ್ಲಿ ಎಂಟು ಎಕರೆ ಭೂಮಿಯನ್ನು ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಿರುವುದಾಗಿ ತಿಳಿಸಿದ್ದರು. ಡಿಪೊ ನಿರ್ಮಾಣಕ್ಕೆ ₹ 10 ಕೋಟಿ ಅನುದಾನ ಕೇಳಿರುವುದಾಗಿಯೂ ಹೇಳಿದ್ದರು. ಕೋವಿಡ್ ಕಾರಣದಿಂದ ಕಾಮಗಾರಿ ಆರಂಭವಾಗಲೇ ಇಲ್ಲ. 2022ರ ಜೂನ್‌ನಲ್ಲಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರನ್ನು ಕರೆಸಿದ್ದ ಪೂರ್ಣಿಮಾ, 2010 ರಲ್ಲಿ ಗುರುತಿಸಿದ್ದ ಜಾಗದಲ್ಲಿ ಭೂಮಿ ಪೂಜೆ ನೆರವೇರಿಸಿದ್ದರು. ಅದಾಗಿ ಎರಡೂವರೆ ವರ್ಷ ಕಳೆದರೂ ಡಿಪೊ ಕಾಮಗಾರಿ ಪೂರ್ಣಗೊಳ್ಳದ ಕಾರಣಕ್ಕೆ ತಾಲ್ಲೂಕು ರೈತಸಂಘದ ಎರಡು ಬಣಗಳು, ಪ್ರಗತಿಪರ ಸಂಘಟನೆಗಳು ಧರಣಿ ನಡೆಸಿದ್ದವು.

ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಒತ್ತಡಕ್ಕೆ ಮಣಿದ ಸಚಿವ ಡಿ.ಸುಧಾಕರ್ ಆದಷ್ಟು ಬೇಗ ಡಿಪೊ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು. ಇದೀಗ ಲೋಕಾರ್ಪಣೆಗೆ ಕಾಲ ಕೂಡಿಬಂದಿದೆ.   

ಚಿತ್ರದುರ್ಗಕ್ಕಿಂತ ಹೆಚ್ಚು ಬಸ್ಸು

ಹಿರಿಯೂರಿನ ಮೂಲಕ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಜಿಲ್ಲಾ ಕೇಂದ್ರ ಚಿತ್ರದುರ್ಗಕ್ಕಿಂತಲೂ ಅಧಿಕ ಸಂಖ್ಯೆಯ ಬಸ್‌ಗಳು ಇಲ್ಲಿನ ನಿಲ್ದಾಣಕ್ಕೆ ಬಂದು ಹೋಗುತ್ತವೆ. ಇಲ್ಲಿ ಡಿಪೊ ಆರಂಭವಾದಲ್ಲಿ ತುಮಕೂರು, ಚಿಕ್ಕಮಗಳೂರು, ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಹಲವು ಪ್ರಮುಖ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಓಡಿಸಬಹುದು. ಇದು ಸಂಸ್ಥೆಗೂ ಲಾಭದಾಯಕ’ ಎಂದು ಸಂಸ್ಥೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹೇಳುತ್ತಾರೆ.

25 ವರ್ಷಗಳ ಹೋರಾಟದ ಫಲವಾಗಿ ಡಿಪೊ ಪ್ರಾರಂಭವಾಗುತ್ತಿದೆ. ಈವರೆಗೂ ಸರ್ಕಾರಿ ಬಸ್‌ಗಳನ್ನೇ ಕಾಣದ ಗ್ರಾಮಗಳಿಗೆ ಇನ್ನಾದರೂ ಬಸ್‌ ಸೇವೆ ಸಿಗುವಂತಾಗಲಿ.  
ಜಯಪ್ರಕಾಶ್ ಕೆ.ಕೆ.ಹಟ್ಟಿ ಹಿರಿಯೂರು
15 ವರ್ಷಗಳ ಹಿಂದೆ ಹಿರಿಯೂರಿನ ಜನಸಂಖ್ಯೆ 20000 ಇತ್ತು. ಈಗ 75000 ದಾಟಿದೆ. ಕೆಲ ಹಳ್ಳಿಗಳೂ ನಗರದ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿವೆ. ಬಸ್‌ ಡಿಪೊ ಆರಂಭವಾದ ತಕ್ಷಣ ನಗರ ಸಾರಿಗೆ ವ್ಯವಸ್ಥೆ ಜಾರಿಗೆ ಬರಲಿ.
ವಿನಾಯಕ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹಿರಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.