ADVERTISEMENT

ಬೀದಿಗಿಳಿದ ಸಾರಿಗೆ ನೌಕರರ ಕುಟುಂಬ

ಮೂರನೇ ದಿನಕ್ಕೆ ಕಾಲಿಟ್ಟ ನೌಕರರ ಮುಷ್ಕರ: ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 12:47 IST
Last Updated 13 ಡಿಸೆಂಬರ್ 2020, 12:47 IST
ಸರ್ಕಾರಿ ನೌಕರರು ಎಂದು ಘೋಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರ ಮುಂದುವರೆಸಿರುವುದನ್ನು ಬೆಂಬಲಿಸಿ ಕೆಲ ನೌಕರರ ಕುಟುಂಬದವರು ಚಿತ್ರದುರ್ಗದಲ್ಲಿ ಭಾನುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು
ಸರ್ಕಾರಿ ನೌಕರರು ಎಂದು ಘೋಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರ ಮುಂದುವರೆಸಿರುವುದನ್ನು ಬೆಂಬಲಿಸಿ ಕೆಲ ನೌಕರರ ಕುಟುಂಬದವರು ಚಿತ್ರದುರ್ಗದಲ್ಲಿ ಭಾನುವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು   

ಚಿತ್ರದುರ್ಗ: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಹಂತ-ಹಂತವಾಗಿ ಮುಷ್ಕರದ ಕಾವು ಏರುತ್ತಿದ್ದು, ನೌಕರರ ಕುಟುಂಬಗಳು ಮುಷ್ಕರ ಬೆಂಬಲಿಸಿ ಭಾನುವಾರ ಬೀದಿಗೆ ಇಳಿದು ಧರಣಿ ನಡೆಸಿದವು.

ಸರ್ಕಾರಿ ನೌಕರರು ಎಂದು ಘೋಷಿಸುವಂತೆ ಒತ್ತಾಯಿಸಿ ನೌಕರರು ಮುಷ್ಕರ ಮುಂದುವರೆಸಿದ್ದಾರೆ. ಸ್ಪಂದನೆ ದೊರೆಯದ ಕಾರಣ ರಸ್ತೆಗಿಳಿದ ಕೆಲ ನೌಕರರ ಪತ್ನಿಯರು ಹಾಗೂ ಮಕ್ಕಳು ಸರ್ಕಾರದ ನಿರ್ಲಕ್ಷ್ಯ ಧೋರಣೆ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲಾಧಿಕಾರಿ ವೃತ್ತದ ಸಮೀಪ ಪ್ರತಿಭಟನೆ ನಡೆಸಲು 50ಕ್ಕೂ ಹೆಚ್ಚು ನೌಕರರು ಸಿದ್ಧತೆ ಮಾಡಿಕೊಂಡಿದ್ದರು. ಅನುಮತಿ ಪಡೆಯದ ಕಾರಣ ಕೆಲಕಾಲ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ನ್ಯಾಯಯುತ ಹಕ್ಕಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ನೌಕರರು ಮನವಿ ಮಾಡಿಕೊಂಡರು. ಇದಕ್ಕೆ ಪೊಲೀಸರು ಒಪ್ಪಲಿಲ್ಲ. ‘ಅನುಮತಿ ಪಡೆದಿದ್ದೀರಾ’ ಎಂದು ಪೊಲೀಸರು ಪ್ರಶ್ನಿಸಿದರು.

ADVERTISEMENT

‘ಹಕ್ಕಿಗಾಗಿ ಮುಷ್ಕರ ನಡೆಸುತ್ತಿದ್ದೇವೆ. ಅನುಮತಿ ಪಡೆಯುತ್ತೇವೆ, ಅವಕಾಶ ಮಾಡಿಕೊಡಿ’ ಎಂದು ನೌಕರರು ಕೋರಿದರು. ವಾದ –ಪ್ರತಿವಾದ ಮುಗಿದ ಬಳಿಕ ಅರ್ಧ ಗಂಟೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಧರಣಿ ನಡೆಸಿದರು.

ನೌಕರರು ಕಷ್ಟದ ಸ್ಥಿತಿಯಲ್ಲಿದ್ದಾರೆ. ಸರ್ಕಾರಿ ನೌಕರರಂತೆ ಸೌಲಭ್ಯಗಳಿಲ್ಲ. ಆದರೂ, ಸಂಸ್ಥೆಗಾಗಿ ದುಡಿಯುತ್ತಿದ್ದಾರೆ. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಲ್ಲಿ ಸರ್ಕಾರ ಏಕೆ ಕಾಳಜಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಸ್ಪಂದಿಸದ್ದಿರೆ ಮುಷ್ಕರ ತೀವ್ರ ಸ್ವರೂಪ ಪಡೆಯಲಿದೆ. ಯಾರೊಬ್ಬರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಇದರಿಂದ ರಾಜ್ಯದ ಸಾವಿರಾರು ಪ್ರಯಾಣಿಕರಿಗೆ ತೊಂದರೆ ಉಂಟಾಗಲಿದೆ. ನಿಗಮಕ್ಕೆ ನಷ್ಟವಾಗಲಿದೆ. ಇದನ್ನು ಮನಗಂಡು ಸಂಸ್ಥೆಗಾಗಿ ಪ್ರಾಮಾಣಿಕವಾಗಿ ದುಡಿಯುವ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಿ ಎಂದು ಸರ್ಕಾರಕ್ಕೆ ಕೋರಿದರು.

ಚಾಲಕರು, ನಿರ್ವಾಹಕರು ಜಿಲ್ಲೆಯಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದತ್ತ ಸುಳಿಯಲಿಲ್ಲ. ಕಚೇರಿ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಸದಾ ಜನಸಂದಣಿಯಿಂದ ಕೂಡಿರುತ್ತಿದ್ದ ನಿಲ್ದಾಣ ಬಸ್ ಮತ್ತು ಪ್ರಯಾಣಿಕರಿಲ್ಲದೇ ಭಾನುವಾರವೂ ಬಿಕೊ ಎನ್ನುತ್ತಿತ್ತು. ಧರಣಿ ಸಂಸ್ಥೆಯ ರಮಾ ನಾಗರಾಜ್, ಜಿಲ್ಲಾ ಕುರುಬ ಸಮುದಾಯದ ಮುಖಂಡ ಶ್ರೀರಾಮ್ ಕೆಎಸ್‌ಆರ್‌ಟಿಸಿ ನೌಕರರಿಗೆ ಬೆಂಬಲ ಸೂಚಿಸಿದರು.

ಖಾಸಗಿ ಬಸ್, ಆಟೊಗೆ ಮೊರೆ
ಜಿಲ್ಲೆಯಲ್ಲಿ ಮುಷ್ಕರ ಮುಂದುವರೆದ ಪರಿಣಾಮ ದೂರದ ಊರು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಕೆಲವರು ಅನಿವಾರ್ಯವಾಗಿ ಖಾಸಗಿ ಬಸ್‌ಗಳ ಮೊರೆ ಹೋದರು. ನಗರ ಸಾರಿಗೆ ಬಸ್‌ಗಳ ಸಂಚಾರ ಕೂಡ ಸ್ಥಗಿತಗೊಂಡಿದೆ. ಇದರಿಂದಾಗಿ ನಗರದೊಳಗೆ ಸಂಚರಿಸುವ ಪ್ರಯಾಣಿಕರು ಆಟೊ ಏರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.