
ಹೊಸದುರ್ಗ: ತಾಲ್ಲೂಕಿನ ಕುಂದೂರು ಗೊಲ್ಲರಹಟ್ಟಿಯ ಗೋವರ್ಧನಗಿರಿ ಜಗದಾಂಬ ಮಹಾಸಂಸ್ಥಾನ ಮಠದಲ್ಲಿ ನೆಲೆಸಿರುವ ಅಂಭಾದೇವಿ ಮತ್ತು ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ರಥೋತ್ಸವ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮಠದ ತಿಮ್ಮಪ್ಪ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರಾ ಮಹೋತ್ಸವದ ಕಾರ್ಯಗಳು ಜರುಗಿದವು. ಜ. 31ರಂದು ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣದೊಂದಿಗೆ ರಥೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಅಂಭಾದೇವಿ ಮತ್ತು ಲಕ್ಷ್ಮೀವೆಂಕಟೇಶ್ವರ ದೇವರಿಗೆ ಮಹಾಭೀಷೇಕ ಪೂಜೆ ನಡೆಯಿತು.
ಭಾನುವಾರ ಬೆಳಿಗ್ಗೆ 10.30ರಿಂದ ತಿಮ್ಮಪ್ಪ ಸ್ವಾಮೀಜಿಯವರ ಗೋವರ್ಧಗಿರಿ ಸಿಂಹಾಸನ ಪೀಠಾರೋಹಣ ನಡೆಯಿತು. ನಂತರ ಸಂಜೆ 5.30ಕ್ಕೆ ಅಂಭಾದೇವಿ, ಲಕ್ಷ್ಮೀವೆಂಕಟೇಶ್ವರ ಸ್ವಾಮಿಯನ್ನು ಡೊಳ್ಳು ಬಡಿತ ಹಾಗೂ ಪಲ್ಲಕ್ಕಿಯೊಂದಿಗೆ ರಥದ ಬಳಿ ಕರೆದೊಯ್ಯಲಾಯಿತು. ಬಳಿಕ, ಭಕ್ತರ ಸಮ್ಮುಖದಲ್ಲಿ ಧ್ವಜದ ಹರಾಜು ಪ್ರಕ್ರಿಯೆ ನಡೆಯಿತು. ವಡ್ನಾಳ್ ರಮೇಶ್ ಅವರಿಗೆ ಈ ಬಾರಿಯ ಧ್ವಜದ ಹರಾಜು ₹ 35 ಸಾವಿರಕ್ಕೆ ಆಯಿತು. ನಂತರ ಭಕ್ತರು ರಥ ಎಳೆದು ಭಕ್ತಿ ಸಮರ್ಪಿಸಿದರು. ರಥ ಸಾಗುವ ವೇಳೆ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಬಾಳೆಹಣ್ಣು ಸಮರ್ಪಿಸಿದರು.
ಗೊದೋಳಿ ಲಗ್ನದಲ್ಲಿ ರಥೋತ್ಸವ ನಡೆಯಿತು. ಎಲ್ಲಾ ಜೀವಜಂತುಗಳಿಗೆ ಲೇಸನು ಬಯಸುವುದು ಹಾಗೂ ಜಾತಿ– ಬೇಧವಿಲ್ಲದ ಭಕ್ತಿಯೊಂದೇ ಇಲ್ಲಿನ ಆಶಯ. ಈ ಬಾರಿ ಮಳೆ ಬೆಳೆ ಸಮೃದ್ಧವಾಗಿ ರೈತರು ಸಂಪನ್ನರಾಗಲಿ ಎಂದು ಗೋವರ್ಧನಗಿರಿ ಮಹಾಸಂಸ್ಥಾನದ ತಿಮ್ಮಪ್ಪ ಶ್ರೀಗಳು ಭಕ್ತರಿಗೆ ಆರ್ಶೀವದಿಸಿದರು.
ಫೆ. 2ರಂದು ಸಂಜೆ 4.30ಕ್ಕೆ ಕುಂಭೋತ್ಸವ ಆಚರಣೆಯೊಂದಿಗೆ ಜಾತ್ರೆ ಕೊನೆಗೊಳ್ಳಲಿದೆ. ಮೂರು ದಿನಗಳು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರು ಆಗಮಿಸಿ, ದೇವರುಗಳ ದರ್ಶನ ಪಡೆಯುವುದರ ಜೊತೆಗೆ ಶ್ರೀಗಳ ಆರ್ಶೀವಾದ ಪಡೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.