ADVERTISEMENT

ಪರಶುರಾಂಪುರ: ವಿದ್ಯಾರ್ಥಿನಿಯರ ಗೋಳು ಕೇಳೋರಿಲ್ಲ

ತಿಮ್ಮಯ್ಯ .ಜೆ ಪರಶುರಾಂಪುರ
Published 22 ಡಿಸೆಂಬರ್ 2023, 6:03 IST
Last Updated 22 ಡಿಸೆಂಬರ್ 2023, 6:03 IST
ಪರಶುರಾಂಪುರದ ಕಸ್ತೂರ್ ಬಾ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರು ತಂಗಿರುವ ಕೊಠಡಿಯ ಸ್ಥಿತಿ
ಪರಶುರಾಂಪುರದ ಕಸ್ತೂರ್ ಬಾ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರು ತಂಗಿರುವ ಕೊಠಡಿಯ ಸ್ಥಿತಿ   

ಪರಶುರಾಂಪುರ: ಶಾಲಾ ಕೊಠಡಿಗಳಲ್ಲೇ ವಾಸ. ಸ್ನಾನ, ಶೌಚಕ್ಕೆ ಸರದಿ ಸಾಲು. ಹಾಸಿಗೆ–ಮಂಚ ಗಗನ ಕುಸುಮ. ಸೊಳ್ಳೆಗಳ ವಿಪರೀತ ಕಾಟ. ಇದು ಗ್ರಾಮದಲ್ಲಿರುವ ಕಸ್ತೂರ್ ಬಾ ಬಾಲಕಿಯರ ವಸತಿ ನಿಲಯದ ಪ್ರತಿನಿತ್ಯದ ಚಿತ್ರಣ.

2015-16ರಲ್ಲಿ ಗ್ರಾಮದಲ್ಲಿ ಪ್ರಾರಂಭವಾದ ಈ ವಸತಿ ಶಾಲೆಗೆ ಈವರೆಗೆ ಸ್ವಂತ ಕಟ್ಟಡವಿಲ್ಲ. ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಸರ್ಕಾರಿ ಕೆ.ಪಿ.ಎಸ್ ಬಾಲಕಿಯರ ಶಾಲೆಯ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿವೆ. 

6ರಿಂದ 10ನೇ ತರಗತಿವರೆಗೆ 100 ವಿದ್ಯಾರ್ಥಿನಿಯರ ಪ್ರವೇಶಕ್ಕೆ ಇಲ್ಲಿ ಅವಕಾಶವಿದೆ. 87 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದು, ಇದ್ದುದರಲ್ಲೇ ಕಾಲ ದೂಡುತ್ತಿದ್ದಾರೆ. ಈ ವಸತಿ ಶಾಲೆಯಲ್ಲಿ ಸೌಲಭ್ಯಗಳು ಮರೀಚಿಕೆಯಾಗಿದೆ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.  

ADVERTISEMENT

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ವಸತಿ ಶಾಲೆಯ ನಿರ್ವಹಣೆ ಮಾಡುತ್ತಿದ್ದು, ಶಾಲೆಯ 3 ಕೊಠಡಿಗಳಲ್ಲಿ 87 ವಿದ್ಯಾರ್ಥಿನಿಯರು ವಾಸಿಸುತ್ತಿದ್ದಾರೆ. ಒಂದೊಂದು ಕೊಠಡಿಯಲ್ಲಿ 30 ಜನರು ಮಲಗುವ ಪರಿಸ್ಥಿತಿ ಇದೆ. ಇಷ್ಟು ವಿದ್ಯಾರ್ಥಿನಿಯರಿಗೆ ಬರೀ ಐದು ಶೌಚಾಲಯ ಹಾಗೂ ನಾಲ್ಕು ಸ್ನಾನದ ಗೃಹಗಳಿವೆ. ಎಲ್ಲರೂ ಇದರಲ್ಲೇ ನಿತ್ಯಕರ್ಮಗಳನ್ನು ಪೂರೈಸುವ ಅನಿವಾರ್ಯತೆ ಇದೆ. ಕಳೆದ 15 ದಿನಗಳಿಂದ ಚಳಿ ಹೆಚ್ಚಿದ್ದು, ಹೀಟರ್ ಮೂಲಕ ನೀರು ಕಾಯಿಸಿ ಕೊಡಲಾಗುತ್ತಿದೆ. ಸಂಖ್ಯೆ ಹೆಚ್ಚಿರುವುದರಿಂದ, ಎಲ್ಲರಿಗೂ ಬಿಸಿನೀರು ಸಿಗದ್ದರಿಂದ ಕೆಲವರು ತಣ್ಣೀರಿನಲ್ಲೇ ಸ್ನಾನ ಮಾಡಬೇಕಿದೆ.

ಈ ವಸತಿ ಶಾಲೆಯಲ್ಲಿ ಸಕಲ ಸೌಲಭ್ಯಗಳು, ಉತ್ತಮ ಶಿಕ್ಷಣ ದೊರೆಯಲಿದೆ ಎಂಬ ಭರವಸೆಯೊಂದಿಗೆ ಹದಿ ಹರೆಯದ ಹೆಣ್ಣು ಮಕ್ಕಳನ್ನು ಕಳುಹಿಸಿರುವ ಪಾಲಕರಿಗೆ ನಿತ್ಯವೂ ಚಿಂತೆ. ಸಮರ್ಪಕ ಸೌಲಭ್ಯ ದೊರೆಯದಿದ್ದರೂ ಇಲ್ಲಿರುವ ವಿದ್ಯಾರ್ಥಿನಿಯರು ಸಮಸ್ಯೆ ಬಗ್ಗೆ ಬಾಯಿ ಬಿಟ್ಟರೆ ಮತ್ತೊಂದು ರೀತಿಯ ಸಮಸ್ಯೆ ಎದುರಾಗಬಹುದು ಎಂಬ ಭಯದಿಂದ ಯಾವುದೇ ರೀತಿಯ ದೂರನ್ನು ನೀಡುವ ಗೋಜಿಗೆ ಹೋಗಿಲ್ಲ.

ವಸತಿ ಶಾಲೆಯಲ್ಲಿ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದ ಮಕ್ಕಳು ಶೋಷಣೆಗೆ ಒಳಗಾಗುತ್ತಿದ್ದಾರೆ. 9 ವರ್ಷದಿಂದ ಪ್ರತ್ಯೇಕ ಕಟ್ಟಡದ ವ್ಯವಸ್ಥೆಯಾಗಿಲ್ಲ. ಅದು ಆಗುವವರೆಗೂ ಮೂಲ ಸೌಕರ್ಯ ಸಮಸ್ಯೆ ಸರಿಯಾಗುವುದಿಲ್ಲ. ಅಧಿಕಾರಿಗಳು ಕೂಡಲೇ ಈ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂಬುದು ಪಾಲಕರ ಆಗ್ರಹವಾಗಿದೆ.

ಪರಶುರಾಂಪುರದ ಕಸ್ತೂರ್ ಬಾ ಬಾಲಕಿಯರ ವಸತಿ ನಿಲಯ
ಸತಿ ನಿಲಯಕ್ಕೆ ಸ್ವಂತ ಕಟ್ಟಡ ಇಲ್ಲ. ಈಗಿರುವ ಕಟ್ಟಡದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಚಳಿ ಇರುವುದರಿಂದ ದಿನವೂ ಅಡುಗೆ ಸಿಬ್ಬಂದಿ ನೀರು ಕಾಯಿಸಿ ಬಿಸಿ ಮಾಡಿ ಕೊಡುತ್ತಾರೆ
- ವಭೂತಮ್ಮ ನಿಲಯ ಮೇಲ್ವಿಚಾರಕಿ
ಹೊಸ ಕಟ್ಟಡ ನಿರ್ಮಾಣದ ಯೋಜನಾ ವರದಿ ತಯಾರಿಸಿ ಈಗಾಗಲೇ ಇಲಾಖೆಗೆ ಕಳುಹಿಸಲಾಗಿದೆ. ಅನುಮತಿ ಸಿಕ್ಕ ಕೂಡಲೇ ಕಟ್ಟಡ ನಿರ್ಮಿಸಲಾಗುವುದು
– ವೆಂಕಟೇಶಪ್ಪ, ವಸತಿ ನಿಲಯದ ನೋಡಲ್ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.