ಪರಶುರಾಂಪುರ: ಆಂಧ್ರದ ಗಡಿ ಭಾಗದಲ್ಲಿರುವ ಚನ್ನಮ್ಮ ನಾಗತಿಹಳ್ಳಿ ಗ್ರಾಮದಲ್ಲಿನ ಶತಮಾನ ಪೂರೈಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ಮರದ ನೆರಳಿನಲ್ಲಿಯೇ ವಿದ್ಯಾರ್ಥಿಗಳು ಪಾಠ ಕೇಳುವಂತಾಗಿದೆ.
ಮೈಸೂರಿನ ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ಅವರು 1887ರಲ್ಲಿ ಈ ಶಾಲೆಯನ್ನು ನಿರ್ಮಿಸಿದ್ದರು. ಇದಕ್ಕಾಗಿ ತಮ್ಮ ರಥವೊಂದನ್ನು ಮಾರಾಟ ಮಾಡಿದ್ದರು ಎಂದು ಗ್ರಾಮದ ಹಿರಿಯರು ಸ್ಮರಿಸುತ್ತಾರೆ. 136 ವಸಂತ ಪೂರೈಸಿರುವ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳ ಪಾಠಕ್ಕೆ ತೊಂದರೆಯಾಗಿದೆ.
ಶಾಲೆ 12 ಕೊಠಡಿಗಳನ್ನು ಹೊಂದಿದ್ದು, 8 ಕೊಠಡಿಗಳನ್ನು ನೆಲಸಮ ಮಾಡಲು ಆದೇಶವಾಗಿದೆ. ಆದರೆ, ವರ್ಷ ಕಳೆದರೂ ಇನ್ನೂ ನೆಲಸಮ ಮಾಡಿಲ್ಲ. ಉಳಿದ 4 ಕೊಠಡಿಗಳಲ್ಲಿ 3 ಕೊಠಡಿಗಳ ದುರಸ್ತಿ ಕೆಲಸ ನಡೆದಿದೆ. ಒಂದು ಕೊಠಡಿಯನ್ನು ಕಚೇರಿಗಾಗಿ ಬಳಸಿಕೊಳ್ಳುತ್ತಿದ್ದು, ಮಕ್ಕಳು ಮರದ ನೆರಳಿನಲ್ಲಿ ಕುಳಿತು ಪಾಠ ಕೇಳುವಂತಾವಾಗಿದೆ. ಶಾಲೆಯ ದುಃಸ್ಥಿತಿಗೆ ಇಲಾಖೆ ಮತ್ತು ಜನ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಕಾರಣ ಎಂದು ಶಾಲೆಯ ಹಳೆ ವಿದ್ಯಾರ್ಥಿಗಳಾದ ನರಸಿಂಹಮೂರ್ತಿ, ಅಶೋಕ್, ರಾಘವೇಂದ್ರ, ಬಲರಾಜ್, ಸೋಮಶೇಖರ್, ಬಸವರಾಜ ಶ್ಯಾಮ್ ಕುಮಾರ, ಪ್ರಭು ಎಂ., ಎಚ್.ವಿಶ್ವನಾಥ, ಚಂದ್ರಣ್ಣ, ಹನುಮಂತರಾಯ, ಅಶೋಕ್ ಗೌಡ, ಬಸವರಾಜ, ಮುಂತಾದವರು ದೂರಿದ್ದಾರೆ.
ಸರ್ಕಾರ ಶಾಲೆಯ ಅಭಿವೃದ್ಧಿಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಜನರಿಂದ ದೇಣಿಗೆ ಸಂಗ್ರಹಿಸಿ ಹೊಸ ಶಾಲಾ ಕಟ್ಟಡ ನಿರ್ಮಿಸುತ್ತೇವೆ ಎಂದು ಹಳೆಯ ವಿದ್ಯಾರ್ಥಿ ಗೌಡಪ್ಪ ತಿಳಿಸಿದರು.
ಹಳೆ ಕೊಠಡಿ ಬಿಳುವ ಸ್ಥಿತಿಯಲ್ಲಿದ್ದು, ವಿಷಜಂತುಗಳು ಸೇರಿಕೊಳ್ಳುವ ಸಾಧ್ಯತೆ ಇದೆ. ಕೂಡಲೇ ಶಿಥಿಲಗೊಂಡಿರುವ ಕಟ್ಟಡವನ್ನು ನೆಲಸಮ ಮಾಡಿ, ಮುಂದಾಗುವ ಅನಾಹುತವನ್ನು ತಪ್ಪಿಸಬೇಕು. ಜೊತೆಗೆ ಶಾಲೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಪಾಲಕರು ಮನವಿ ಮಾಡಿದ್ದಾರೆ.
ಶಾಲೆಯ ಹೊಸ ಕಟ್ಟಡ ನಿರ್ಮಾಣ ಸಂಬಂಧ ಶಿಕ್ಷಣ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗಮನಹರಿಸಿ ಕಲಿಕಾ ವಾತಾವರಣ ನಿರ್ಮಿಸಬೇಕು.ಸೋಮಶೇಖರ್ ಅಧ್ಯಕ್ಷರು ಶಾಲಾಭಿವೃದ್ದಿ ಸಮಿತಿ ಚನ್ನಮ್ಮನಾಗತಿಹಳ್ಳಿ
ಹಳೆಯ ಕೊಠಡಿಗಳನ್ನು ನೆಲಸಮ ಮಾಡಿಸಿ ವಿದ್ಯಾರ್ಥಿಗಳ ಪಾಠಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಅನುದಾನದ ಕೊರತೆಯಿಂದ ಕೊಠಡಿಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ.ಕೆ.ಎಸ್.ಸುರೇಶ್ ಕ್ಷೇತ್ರ ಶಿಕ್ಷಣಾಧಿಕಾರಿ ಚಳ್ಳಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.