
ಚಿತ್ರದುರ್ಗದ ಬುರುಜನಹಟ್ಟಿ, ಸಿಹಿನೀರು ಹೊಂಡದ ಬಳಿ ಕಲ್ಲಿನಕೋಟೆಯ ಮುಖ್ಯಗೋಡೆ ಕುಸಿದಿರುವುದು
ಪ್ರಜಾವಾಣಿ ಚಿತ್ರ/ ಚಂದ್ರಪ್ಪ ವಿ.
ಚಿತ್ರದುರ್ಗ: 'ಚಿತ್ರದುರ್ಗದ ಕಲ್ಲಿನ ಕೋಟೆ... ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ...’ ಗೀತೆಯ ಸಾರ ಏಳುಸುತ್ತಿನ ಕೋಟೆಯ ಗಟ್ಟಿತನವನ್ನು ಸಾರುತ್ತದೆ. ಆದರೆ, ಈ ಕಲ್ಲಿನಕೋಟೆ ಸಿಡಿಲು–ಗುಡುಗು ಮಳೆಗೆ ಜಪ್ಪೆನ್ನದೆ ನಿಂತಿದ್ದರೂ, ಈಚಿನ ವರ್ಷಗಳಲ್ಲಿ ನಿರ್ವಹಣೆಯ ಕೊರತೆಯಿಂದಾಗಿ ಕುಸಿತ ಕಂಡಿದೆ. ‘ದುರಸ್ತಿ ಮಾಡುವವರು ಯಾರು?’ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಹೈದರ್ ಅಲಿ ಎಷ್ಟೇ ಪ್ರಯತ್ನಪಟ್ಟರೂ ಕೋಟೆಯ ಆವರಣದೊಳಗೆ ಒಂದು ಗುಂಡನ್ನೂ ತಾಗಿಸಲು ಸಾಧ್ಯವಾಗಿರಲಿಲ್ಲ. ಯುದ್ಧ ತಂತ್ರಕ್ಕೆ ಅನುಗುಣವಾಗಿ ನಿರ್ಮಾಣಗೊಂಡಿದ್ದ ಕೋಟೆ ಜನರಿಗೆ ಭದ್ರತೆಯ ಕವಚ ಒದಗಿಸಿತ್ತು ಎಂದು ಇತಿಹಾಸ ಹೇಳುತ್ತದೆ.
ಸದ್ಯ ಕೋಟೆಯ ಸ್ಥಿತಿ ಹಿಂದಿನಂತಿಲ್ಲ. ಅಲ್ಲಲ್ಲಿ ಕೋಟೆಯ ಗೋಡೆ ಕುಸಿತ ಕಂಡು ಹಲವು ವರ್ಷಗಳೇ ಉರುಳಿವೆ. ಕೋಟೆ ಕಾಪಾಡುವ ಜವಾಬ್ದಾರಿ ಬಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಹಾಗೂ ರಾಜ್ಯ ಪುರಾತತ್ವ ಇಲಾಖೆ ನಡುವೆ ಗೊಂದಲಗಳಿದ್ದು, ಕುಸಿದಿರುವ ಕೋಟೆ ದುರಸ್ತಿ ಕಾಣದಾಗಿದೆ.
ಏಳುಸುತ್ತಿನ ಕೋಟೆಯ ಸಾಕ್ಷಿಯಾಗಿ ನಿಂತಿರುವ ಎಲ್ಲಾ ಸ್ಮಾರಕಗಳನ್ನೂ ಎಎಸ್‌ಐ ನಿರ್ವಹಣೆ ಮಾಡುತ್ತಿಲ್ಲ. ಕೋಟೆಯ ಪ್ರವೇಶದ್ವಾರ (ಕಾಮನ ಬಾಗಿಲು)ದಿಂದ ಮೇಲುದುರ್ಗವನ್ನು ಸುತ್ತುವರಿದಿರುವ ಗೋಡೆಯ ಭಾಗ ಮಾತ್ರ ತನ್ನದು ಎಂದು ಎಎಸ್‌ಐ ಅಧಿಕಾರಿಗಳು ವಾದಿಸುತ್ತಾರೆ. ಈ ಸಂಬಂಧ ಗುಡ್ಡದ ಸುತ್ತಲೂ ಎಎಸ್‌ಐ ಬೇಲಿ ನಿರ್ಮಾಣ ಮಾಡಿದೆ. ಬೇಲಿಯ ಹೊರಗಿರುವ ಯಾವುದೇ ಸ್ಮಾರಕ ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಎಎಸ್‌ಐ ಹೇಳುತ್ತಿರುವುದಕ್ಕೆ ಸ್ಥಳೀಯರ ವಿರೋಧವಿದೆ.
ಪ್ರವೇಶದ್ವಾರದಿಂದ ಚಿಕ್ಕಪೇಟೆ, ದೊಡ್ಡಪೇಟೆ ಕಡೆಗೆ ಸಾಗುವ ಕೋಟೆಯ ಮುಖ್ಯ ಗೋಡೆ ಬುರುಜಿನಹಟ್ಟಿಯ ಸಿಹಿನೀರು ಹೊಂಡದ ಮೂಲಕ ಓಬವ್ವನ ಕಿಂಡಿ ಕಡೆಗೆ ಮುಂದುವರಿಯುತ್ತದೆ. ಸಿಹಿನೀರು ಹೊಂಡದ ಬಳಿಯ (ಉಚ್ಚಂಗಿ ಬಾಗಿಲು ಸಮೀಪ) ಕೋಟೆ ಕುಸಿದು ನಾಲ್ಕೈದು ವರ್ಷಗಳೇ ಆಗಿದೆ. ಓಬವ್ವನ ಕಿಂಡಿ ಭಾಗದ ಗೋಡೆ 3–4 ಕಡೆಗಳಲ್ಲಿ ಕುಸಿದಿದೆ. ಇದು ಎಎಸ್‌ಐ ಹಾಕಿಕೊಂಡಿರುವ ಬೇಲಿಯ ವ್ಯಾಪ್ತಿಯಲ್ಲೇ ಇದ್ದರೂ ದುರಸ್ತಿ ಮಾಡಿಸಿಲ್ಲ.
‘ಕೋಟೆ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಅನುದಾನ ಬರುತ್ತದೆ. ಇಷ್ಟಾದರೂ ಎಎಸ್‌ಐ ಅಧಿಕಾರಿಗಳು ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳ ಕಡೆ ಕೈತೋರಿಸಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಹೊರರಾಜ್ಯದಿಂದ ಬಂದಿರುವ ಅಧಿಕಾರಿಗಳಿಗೆ ಕೋಟೆಯ ಮಾಹಿತಿಯೇ ಇಲ್ಲ. ಅಧಿಕಾರಿಗಳು ಕೋಟೆ ಕುಸಿದ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಕೋಟೆಯ ಮುಖ್ಯ ಗೋಡೆಯೇ ಕುಸಿದಿರುವುದನ್ನು ಅವರು ಅರಿಯಬೇಕು’ ಎಂದು ಸ್ಥಳೀಯ ಸಂಶೋಧಕರೊಬ್ಬರು ಹೇಳಿದರು.
ನಗರದ ಒಳಗಿರುವ ಐದು ಕೋಟೆ ಬಾಗಿಲುಗಳು, ಚಂದ್ರವಳ್ಳಿ ಪ್ರದೇಶದಲ್ಲಿರುವ ಸ್ಮಾರಕಗಳು, ಐತಿಹಾಸಿಕ ತಿಮ್ಮಣ್ಣ ನಾಯಕನ ಕೆರೆ ಭಾಗದ ತಾಣ ಎಎಸ್‌ಐ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಾರೆ. ಕೆಳದುರ್ಗದಲ್ಲಿ ಬರುವ ಕೋಟೆ ಬಾಗಿಲುಗಳನ್ನು ರಾಜ್ಯ ಪುರಾತತ್ವ ಇಲಾಖೆ ನಿರ್ವಹಣೆ ಮಾಡುತ್ತಿದೆ. ಚಂದ್ರವಳ್ಳಿ ಕೆರೆ ನಿರ್ವಹಣೆಯ ಜವಾಬ್ದಾರಿಯನ್ನು ಮುರುಘಾ ಮಠ ಹೊತ್ತಿದೆ. ಕಲ್ಲಿನಕೋಟೆ ಜೊತೆಗೆ ದುರ್ಗದ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ಮಾರಕಗಳ ನಿರ್ವಹಣಾ ಜವಾಬ್ದಾರಿಯನ್ನು ಎಎಸ್‌ಐ ವಹಿಸಿಕೊಳ್ಳಬೇಕು ಎಂಬ ಕೂಗು ಮೊದಲಿನಿಂದಲೂ ಇದೆ.
‘ದುರ್ಗದ ಸ್ಮಾರಕಗಳ ಒಡಲಲ್ಲಿ ಉತ್ಖನನ ನಡೆಯಬೇಕಿದೆ. ಸಂಶೋಧನೆ ನಿರಂತರವಾಗಬೇಕಿದೆ. ಕಲ್ಲಿನಕೋಟೆ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಳ್ಳಬೇಕಿದೆ. ಕೋಟೆಯ ಸುತ್ತ ಬೇಲಿ ಹಾಕಿಕೊಂಡು ಅದಷ್ಟೇ ತನ್ನದು ಎಂದು ಎಎಸ್‌ಐ ಅಧಿಕಾರಿಗಳು ಹೇಳುತ್ತಿರುವುದು ಸರಿಯಲ್ಲ. ಸ್ಥಳೀಯ ರಾಜಕಾರಣಿಗಳು ಈ ಬಗ್ಗೆ ಗಮನ ಹರಿಸಬೇಕು. ಕೋಟೆಗೆ ಸಂಬಂಧಿಸಿದ ಎಲ್ಲಾ ಸ್ಮಾರಕಗಳ ಜವಾಬ್ದಾರಿಯನ್ನು ಎಎಸ್‌ಐ ನಿರ್ವಹಣೆಗೆ ವಹಿಸಬೇಕು’ ಎಂದು ಸಾಹಿತಿ ಎಂ. ಮೃತ್ಯುಂಜಯಪ್ಪ ಒತ್ತಾಯಿಸುತ್ತಾರೆ.
ಈ ಬಗ್ಗೆ ಮಾಹಿತಿ ಪಡೆಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಕೋಟೆ ಸಂರಕ್ಷಕ ಪಿ.ಸುಧೀರ್ ಸಂಪರ್ಕಕ್ಕೆ ಸಿಗಲಿಲ್ಲ.
ಕಲ್ಲಿನಕೋಟೆ ಕೋಟೆ ಬಾಗಿಲುಗಳನ್ನು ದುರಸ್ತಿ ಮಾಡಿ ಸಂರಕ್ಷಿಸುವ ಅಗತ್ಯ ಇದೆ ಎಂದು ಮೈಸೂರಿನ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಸಂರಕ್ಷಣಾ ವಿಭಾಗಕ್ಕೆ ವರದಿ ನೀಡಿದ್ದೇವೆಜಿ.ಪ್ರಹ್ಲಾದ್ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.