
ಚಿತ್ರದುರ್ಗ: ನಗರದ ಮಠದ ಕೆರೆ ಹಾಗೂ ಮಲ್ಲಾಪುರ ಕೆರೆ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಕೋಟೆನಗರಿಯ ಸೌಂದರ್ಯಕ್ಕೆ ಧಕ್ಕೆಯುಂಟಾಗಿದೆ. ಎರಡು ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲೇ ಇರುವ ಈ ಕೆರೆಗಳು ಈಗ ಕೊಳಚೆಗುಂಡಿಗಳಂತಾಗಿವೆ. ದುರ್ವಾಸನೆಯ ತಾಣಗಳಾಗಿಯೂ ಮಾರ್ಪಟ್ಟಿವೆ.
ರಾಷ್ಟ್ರೀಯ ಹೆದ್ದಾರಿ– 48ರ (ಹಳೇ ರಾಷ್ಟ್ರೀಯ ಹೆದ್ದಾರಿ) ಬದಿಯಲ್ಲಿರುವ ಮಠದ ಕೆರೆ ಅಭಿವೃದ್ಧಿಗೆ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಯೋಜನೆ ರೂಪಿಸಿತ್ತು. ಕೆರೆ ಪರಿಸರಕ್ಕೆ ಉದ್ಯಾನದ ರೂಪ ನೀಡಿ ಸಾರ್ವಜನಿಕರ ವಿಹಾರ ಹಾಗೂ ಪ್ರವಾಸಿ ತಾಣವನ್ನಾಗಿ ರೂಪಿಸುವ ಉದ್ದೇಶ ಹೊಂದಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗಿ ಪ್ರವಾಸಿಗರು ಓಡಾಡುವ ಕಾರಣ ಅವರನ್ನು ಸೆಳೆಯಲು ನಗರದ ಸೌಂದರ್ಯ ಇಮ್ಮಡಿಗೊಳಿಸುವ ಗುರಿಯೂ ಇತ್ತು.
2020ರಲ್ಲೇ ಕಾಮಗಾರಿಗೆ ಮಂಜೂರಾತಿ ದೊರೆತರೂ 2024ರ ನವೆಂಬರ್ 25ರಂದು ಕೆಲಸ ಪ್ರಾರಂಭವಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವೇಳೆಗೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡು ಜನಬಳಕೆಗೆ ಲಭ್ಯವಾಗಬೇಕಿತ್ತು. ಆದರೆ ಕುಡಾ ಆಡಳಿತ ಮಂಡಳಿ, ಅಧಿಕಾರಿ ವರ್ಗ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಸ್ಥಗಿತಗೊಂಡು ವರ್ಷವೇ ಕಳೆದಿದೆ.
ಅಭಿವೃದ್ಧಿಯ ಭಾಗವಾಗಿ ಕೆರೆಯ ಸುತ್ತ ನಡಿಗೆ ಪಥ ನಿರ್ಮಿಸಲು ಮಣ್ಣಿನ ಒಡ್ಡು (ಬಂಡ್) ನಿರ್ಮಿಸಲಾಗಿತ್ತು. ಕಾಮಗಾರಿ ಅರ್ಧಕ್ಕೆ ನಿಂತಿರುವ ಕಾರಣ ಒಡ್ಡು ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದು, ಸಂಪೂರ್ಣವಾಗಿ ನಾಶವಾಗುವ ಹಂತ ತಲುಪಿದೆ. ಈಗಾಗಲೇ ಖರ್ಚು ಮಾಡಲಾಗಿರುವ ಅಪಾರ ಪ್ರಮಾಣದ ಅನುದಾನವೂ ನೀರಿನಲ್ಲೇ ಕೊಚ್ಚಿ ಹೋಗಿದೆ.
ಜಿ.ಎಚ್. ತಿಪ್ಪಾರೆಡ್ಡಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಕೆರೆ ಅಭಿವೃದ್ಧಿ ಶುಲ್ಕದ ಜೊತೆಗೆ ಪ್ರತ್ಯೇಕವಾಗಿ ಅವರು ₹4 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದ್ದರು. ಹೆದ್ದಾರಿ ಪಕ್ಕದ ಸುಂದರ ಪರಿಸರದಲ್ಲಿರುವ ಕೆರೆಗೆ ದೀಪಾಲಂಕಾರ ಸೇರಿದಂತೆ ಆಕರ್ಷಕ ರೂಪ ನೀಡಿ ಪ್ರವಾಸಿ ತಾಣವನ್ನಾಗಿ ರೂಪಿಸುವ ಯೋಜನೆ ಇತ್ತು. ಸದ್ಯ ಆರಂಭವಾಗಿದ್ದ ಕೆಲಸಕ್ಕೂ ಗ್ರಹಣ ಹಿಡಿದಿದ್ದು ಸುಂದರ ಕೆರೆಯ ಕನಸು ಕನಸಾಗೇ ಉಳಿದಿದೆ.
‘ಅಭಿವೃದ್ಧಿಯ ನೆಪದಲ್ಲಿ ಕೆರೆಯ ನೀರನ್ನು ಹೊರಕ್ಕೆ ಹರಿಸಲಾಗಿತ್ತು. ಇದರಿಂದಾಗಿ ಸಾವಿರಾರು ಮೀನುಗಳು ಮರಣ ಹೊಂದಿದ್ದವು. ಈಗ ಕೆರೆಯಲ್ಲಿ ನಗರದ ವಿವಿಧ ಬಡಾವಣೆಗಳ ತ್ಯಾಜ್ಯ ತುಂಬಿಕೊಂಡಿದ್ದು ದುರ್ವಾಸನೆ ಬೀರುತ್ತಿದೆ’ ಎಂದು ಕೆರೆಯ ಸಮೀಪದಲ್ಲೇ ಇರುವ ಜಯಲಕ್ಷ್ಮಿ ಬಡಾವಣೆಯ ನಿವಾಸಿ ಶಂಕರಪ್ಪ ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹೆದ್ದಾರಿ– 365ರ ಬದಿಯಲ್ಲಿರುವ ಮಲ್ಲಾಪುರ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಸಣ್ಣ ನೀರಾವರಿ ಇಲಾಖೆ ಕೈಗೊಂಡಿತ್ತು. ವರ್ಷದ ಹಿಂದೆ ಕೆರೆಯ ಏರಿಯಲ್ಲಿ ನಡಿಗೆ ಪಥ ನಿರ್ಮಿಸುವ ಕಾಮಗಾರಿ ಆರಂಭಗೊಂಡಿತ್ತು. ಅದಕ್ಕಾಗಿ ₹1.5 ಕೋಟಿ ವೆಚ್ಚ ಮಾಡಲಾಗಿತ್ತು. ಆದರೆ ಕಾಮಗಾರಿ ಸ್ಥಗಿತಗೊಂಡಿದ್ದು ಕೆರೆ ಅಭಿವೃದ್ಧಿ ಕೆಲಸ ನನೆಗುದಿಗೆ ಬಿದ್ದಿದೆ. ಬಂಡ್ ನಿರ್ಮಾಣವಾದ ನಂತರ ಈಗ ಮತ್ತೆ ಜೊಂಡು ಬೆಳೆದುಕೊಂಡಿದ್ದು, ಹಿಂದೆ ಮಾಡಿದ್ದ ಕಾಮಗಾರಿಯೆಲ್ಲವೂ ಹಾಳಾಗಿದೆ.
ವಿಶಾಲವಾದ ಮಲ್ಲಾಪುರ ಕೆರೆಗೆ ರಂಗನಹಳ್ಳಿಯ ಮಲ್ಲಾಪುರದ ಹಳ್ಳ, ಪಿಳ್ಳೇಕೆರೆನಹಳ್ಳಿ ಹಳ್ಳ ಹಾಗೂ ಮೇದೆಹಳ್ಳಿಯ ಹಳ್ಳದ ನೀರು ಹರಿದು ಬರುತ್ತದೆ. ಜೊತೆಗೆ ಚಿತ್ರದುರ್ಗ ನಗರದ ಬಹುತೇಕ ಬಡಾವಣೆಗಳ ಕೊಳಚೆ ನೀರು ಶುದ್ಧೀಕರಣಗೊಳ್ಳದೇ ಸೇರುತ್ತಿದೆ. ಈ ನೀರು ಮೀನುಗಳ ವಾಸಕ್ಕೂ ಯೋಗ್ಯವಾಗಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲೆಡೆ ದುರ್ವಾಸನೆ ಇದ್ದು ಸಮೀಪದಲ್ಲಿ ವಾಸಿಸುವ ಜನರಿಗೆ ರೋಗಭೀತಿ ಎದುರಾಗಿದೆ.
ಪಿಳ್ಳೆಕೇರನಹಳ್ಳಿ ಬಳಿ 5 ಎಕರೆಯಷ್ಟು ವಿಶಾಲ ಜಾಗದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. 20 ಎಂಎಲ್‌ಡಿ (ಮಿಲಿಯನ್ ಲೀಟರ್ ಪರ್ ಡೇ) ಸಾಮರ್ಥ್ಯದ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ನಗರದ ಎಲ್ಲಾ ಒಳಚರಂಡಿ ನೀರನ್ನು ಈ ಘಟಕಕ್ಕೆ ತಿರುಗಿಸಿದರೆ ನಗರದಾದ್ಯಂತ ಕೊಳಚೆ ನೀರಿನ ಸಮಸ್ಯೆಯೇ ಇರುವುದಿಲ್ಲ. ಆದರೆ ಕೊಳಚೆ ನೀರು ಘಟಕದ ಮೂಲಕ ಹರಿಯದ ಕಾರಣ ಮಲ್ಲಾಪುರ ಕೆರೆ ಮಲಿನಗೊಂಡಿದೆ.
ಈವರೆಗೆ ಶೇ 25ರಷ್ಟೂ ಕೊಳಚೆ ನೀರು ಈ ಘಟಕಕ್ಕೆ ಹರಿಯುತ್ತಿಲ್ಲ. ಕೇವಲ 4ರಿಂದ 5 ಎಂಎಲ್‌ಡಿಯಷ್ಟು ಕೊಳಚೆ ನೀರು ಇಲ್ಲಿಗೆ ಬರುತ್ತಿದೆ. ಉಳಿದಂತೆ ನಗರದೆಲ್ಲೆಡೆ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು, ತ್ಯಾಜ್ಯ ನೀರು ಹೊರವಲಯದ ಜಲಮೂಲಗಳನ್ನು ಸೇರುತ್ತಿದೆ. ಬಹುತೇಕ ಕೊಳಚೆ ನೀರು ಮಲ್ಲಾಪುರ ಕೆರೆಯ ಒಡಲನ್ನು ಸೇರುತ್ತಿದ್ದು, ಇಲ್ಲಿಯ ಜಲಚರಗಳಿಗೆ ಮಾರಕವಾಗಿದೆ. ಇದರಿಂದ ಸುತ್ತಮುತ್ತ ಇರುವ ಬಡಾವಣೆ, ಹಳ್ಳಿಗಳ ಜನರಿಗೆ ರೋಗಭೀತಿ ಕಾಡುತ್ತಿದೆ.
‘ಕಳೆದ ವರ್ಷ ಉಪ ಲೋಕಾಯುಕ್ತರು ಸ್ಥಳಕ್ಕೆ ಭೇಟಿ ನೀಡಿ ನಗರಸಭೆ, ಸಣ್ಣ ನೀರಾವರಿ ಇಲಾಖೆ, ನಗರ ನೀರು ಸರಬರಾಜು ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಗೆ ಹರಿಸುವಂತೆ ಸೂಚಿಸಿದ್ದರು. ಆದರೆ ಇಲ್ಲಿಯವರೆಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಪ್ರವಾಸಿ ತಾಣವಾಗದ ಬ್ಯಾರೇಜ್
ಹಿರಿಯೂರು: ನಗರದಲ್ಲಿ ಯಾವುದೇ ಕೆರೆಗಳಿಲ್ಲ ಆದರೆ ನಗರಕ್ಕೆ ಹೊಂದಿಕೊಂಡಿರುವ ಲಕ್ಕವ್ವನಹಳ್ಳಿ ಸಮೀಪ ವೇದಾವತಿ ನದಿಗೆ ನಿರ್ಮಿಸಿರುವ ಬ್ಯಾರೇಜ್ ಸುಂದರ ಪ್ರವಾಸಿ ತಾಣವಾಗುವ ಲಕ್ಷಣ ಹೊಂದಿದೆ. ಆದರೆ ನಗರಸಭೆಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇದು ಅಭಿವೃದ್ಧಿ ಕಾಣದಾಗಿದೆ. ಜಲಾಶಯ ಕೋಡಿ ಬಿದ್ದ ಸಮಯದಲ್ಲಿ ಚಳ್ಳಕೆರೆ ಮೊಳಕಾಲ್ಮುರು ತಾಲ್ಲೂಕುಗಳಿಗೆ ವಾಣಿವಿಲಾಸದ ನೀರು ಹರಿಸುವಾಗ ಈ ಬ್ಯಾರೇಜು ತುಂಬಿದ ನಂತರವೇ ನೀರು ಮುಂದಕ್ಕೆ ಹರಿದು ಹೋಗುತ್ತದೆ. ಹೀಗಾಗಿ ಒಡ್ಡು ಜೀವಂತವಾಗಿದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪ್ರಸ್ತುತ ಇದು ನಗರಸಭೆ ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆಯಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಒಡ್ಡಿನ ಅಂಚಿನಲ್ಲಿ ಹುಲ್ಲು–ಮುಳ್ಳಿನ ಗಿಡಗಳು ಪೊದೆಯಂತೆ ಬೆಳೆದಿವೆ. ಬ್ಯಾರೇಜ್‌ನಲ್ಲಿ ಒಂದೂವರೆ ಕಿ.ಮೀ. ದೂರದವರೆಗೆ ನೀರು ನಿಲ್ಲುತ್ತದೆ. ಬ್ಯಾರೇಜ್‌ನ ಎರಡೂ ಬದಿ ಉದ್ಯಾನ ನಿರ್ಮಿಸಿ ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಿದಲ್ಲಿ ನಗರದ ಜನತೆಗೆ ಕೂಗಳತೆ ದೂರದಲ್ಲಿ ಸುಂದರ ಪ್ರವಾಸಿ ತಾಣ ಸಿಕ್ಕಂತಾಗುತ್ತದೆ. ಆದಷ್ಟು ಬೇಗ ಇದು ಸಾಕಾರಗೊಳ್ಳಬೇಕು ಎಂಬುದು ಸ್ಥಳೀಯರ ಬೇಡಿಕೆ. ಲಕ್ಕವ್ವನಹಳ್ಳಿ ರಸ್ತೆಯಿಂದ ಬ್ಯಾರೇಜ್‌ಗೆ ತೆರಳಲು ಇದ್ದ ರಸ್ತೆಯನ್ನು ಈಗ ಪಕ್ಕದ ಭೂಮಾಲೀಕರು ಬಂದ್ ಮಾಡಿದ್ದು ಬೇಸಿಗೆ ಸಮಯದಲ್ಲಿ ಈಜಲು ಹೋಗುತ್ತಿದ್ದ ಮಕ್ಕಳಿಗೆ ಪ್ರವೇಶ ಇಲ್ಲದಂತಾಗಿದೆ.
-ಸುವರ್ಣಾ ಬಸವರಾಜ್
ಕರೆಕಲ್ ಕೆರೆ ಅಭಿವೃದ್ಧಿಗೆ ಚಾಲನೆ
ಚಳ್ಳಕೆರೆ: ಜಿಲ್ಲಾ ಖನಿಜ ನಿಧಿ (ಡಿಎಂಎಫ್) ಅನುದಾನದಲ್ಲಿ ವೆಂಕಟೇಶ್ವರ ನಗರದ ಬಳಿಯ ಕರೆಕಲ್ ಕೆರೆಯು ದಾವಣಗೆರೆಯ ಕುಂದವಾಡದ ಕೆರೆ ಮಾದರಿಯಲ್ಲಿ ರೂಪುಗೊಳ್ಳುತ್ತಿದೆ. ಈಗಾಗಲೇ ಕೆರೆ ಏರಿ ಮೇಲೆ ಬೆಳೆದಿದ್ದ ಮುಳ್ಳು ಜಾಲಿ ಗಿಡಗಳನ್ನು ಜೆಸಿಬಿ ಯಂತ್ರದ ನೆರವಿನಿಂದ ತೆರವುಗೊಳಿಸಲಾಗಿದೆ. ಏರಿ ವಿಸ್ತರಣೆ ಕಾರ್ಯ ಭರದಿಂದ ನಡೆದಿದೆ. ಕೆರೆಯ ಸುತ್ತ 4 ಕಿ.ಮೀ ಉದ್ದದ ಏರಿಗೆ ಸೈಜುಗಲ್ಲು ಜೋಡಿಸಲಾಗಿದೆ. ಈಗ 1 ಕಿ.ಮೀ. ಉದ್ದದ ಕಾಮಗಾರಿ ಪ್ರಗತಿಯಲ್ಲಿದೆ.
‘ಅಕಾಲಿಕ ಮಳೆಯಿಂದಾಗಿ ಒಡೆದು ಹೋಗಿದ್ದ ಕೆರೆ ಏರಿ ದುರಸ್ತಿಗೊಳಿಸಿದ ನಂತರ ಕೆರೆ ಅಭಿವೃದ್ಧಿ ಮಾಡಲಾಗುತ್ತಿದೆ. ಕೆರೆ ಕಾಮಗಾರಿಯ ಹೆಚ್ಚುವರಿ ಕೆಲಸಕ್ಕೆ ಟೆಂಡರ್ ಕರೆಯಲಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಅಣ್ಣಪ್ಪ ತಿಳಿಸಿದರು.
‘ಶುದ್ಧ ಕುಡಿಯುವ ನೀರು ಬೆಳಕು ಕಲ್ಲಿನ ಆಸನ ನೆರಳಿನ ಸೌಲಭ್ಯ ನೀಡಿ ಗಿಡ ಮರ ಹಲವು ಬಗೆಯ ಹೂ ಬಳ್ಳಿ ಬೆಳೆಸಲಾಗುವುದು. ಕೆರೆ ಮಧ್ಯೆ ನಡುಗಡ್ಡೆ ಮಾದರಿಯಲ್ಲಿ ಹಸಿರು ದ್ವೀಪ ನಿರ್ಮಿಸಲಾಗುವುದು’ ಎಂದು ನಗರಸಭೆ ಎಂಜಿನಿಯರ್ ವಿನಯ್ ತಿಳಿಸಿದರು.
-ಶಿವಗಂಗಾ ಚಿತ್ತಯ್ಯ
ನಗರ ಪಟ್ಟಣ ವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ಕ್ರಮ ವಹಿಸಲಾಗುವುದು. ಈಗಾಗಲೇ ಸ್ಥಗಿತಗೊಂಡಿರುವ ಕಾಮಗಾರಿಗಳ ಮಾಹಿತಿ ಪಡೆಯಲಾಗುವುದು-ಟಿ.ವೆಂಕಟೇಶ್, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.