
ಲಕ್ಷ್ಮೀಶ್ ಹೆಗಡೆ ಸೋಂದಾ
ಚಿತ್ರದುರ್ಗ: ‘ಆಧಾರವಿಲ್ಲದ ಇತಿಹಾಸಕ್ಕೆ ಪ್ರಾಮುಖ್ಯತೆಯಿಲ್ಲ. ಆದ್ದರಿಂದ ಆಧಾರ ಸಹಿತ ಇತಿಹಾಸ ಕಟ್ಟುವಲ್ಲಿ ಸಂಶೋಧಕರು, ಇತಿಹಾಸಕಾರರು ಮುಂದಾಗಬೇಕಿದೆ’ ಎಂದು ಉಪನ್ಯಾಸಕ ಲಕ್ಷ್ಮೀಶ್ ಹೆಗಡೆ ಸೋಂದಾ ತಿಳಿಸಿದರು.
ನಗರದ ಐಎಂಎ ಹಾಲ್‌ನಲ್ಲಿ ಚಿತ್ರದುರ್ಗ ಇತಿಹಾಸ ಕೂಟದಿಂದ ಭಾನುವಾರ ಆಯೋಜಿಸಿದ್ದ 53ನೇ ಉಪನ್ಯಾಸದಲ್ಲಿ ‘ಕದಂಬ-ಚಿತ್ರದುರ್ಗ ಸಂಬಂಧ: ಕೆಲವು ಗ್ರಹಿಕೆಗಳು’ ಕುರಿತು ಮಾತನಾಡಿದ ಅವರು, ‘ಶಾಸನ ರಹಿತ ಸಂಗತಿಗೆ ಪ್ರಾಮುಖ್ಯತೆಯಿಲ್ಲ. ಏಕೆಂದರೆ ಪ್ರಾಥಮಿಕ ಆಧಾರಗಳಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವುದೇ ಶಾಸನ’ ಎಂದರು.
‘ಚಂದ್ರವಳ್ಳಿ ಶಾಸನ ಕುರಿತು ಅಧ್ಯಯನ, ಚರ್ಚೆಗಳು ಆಗಿವೆ ಎಂದರೆ ಅದರಲ್ಲಿ ವಿಶೇಷವಿದೆ ಎಂದರ್ಥ. ಅನೇಕ ರಾಜ ಮನೆತನಗಳು ಕರ್ನಾಟಕದಲ್ಲಿ ಆಳ್ವಿಕೆ ಮಾಡಿವೆ. ಒಲವು-ನಿಲುವು ಒಂದು ಕಡೆಯಾದರೆ ಕದಂಬ ಸಂಬಂಧಿತ ಒಲವು-ನಿಲುವು ವಿಭಿನ್ನವಾಗಿದೆ. ಪ್ರಶ್ನೆ ಮಾಡಿದರೆ ಅನೇಕ ತರ್ಕಗಳು ಏಳುತ್ತವೆ’ ಎಂದು ತಿಳಿಸಿದರು.
‘ಕದಂಬರ ಬಗ್ಗೆ ಅಧ್ಯಯನ ಮಾಡಿದಾಗ 65 ಶಾಸನಗಳು ಸಿಗುತ್ತವೆ. ಸಂಸ್ಕೃತಿಯ ಮೇಲೆ ಒಲವು-ನಿಲುವು ಇಟ್ಟುಕೊಂಡವರು ಕದಂಬರು. ಅವರ ಕಾಲ ಭಾಷಾ ಸಂಕ್ರಮಣದ ಕಾಲವಾಗಿತ್ತು. 65 ಶಾಸನಗಳಲ್ಲಿ 64 ಶಾಸನಗಳ ಸ್ವರೂಪ ಒಂದು ರೀತಿಯಾದರೆ ಚಂದ್ರವಳ್ಳಿಯ ಒಂದು ಶಾಸನ ಮಾತ್ರ ವಿಭಿನ್ನವಾಗಿದೆ’ ಎಂದರು.
‘ಕದಂಬರು, ಮಯೂರ ವರ್ಮನ ಇತಿಹಾಸ ಕುರಿತು ಲಕ್ಷ್ಮೀಶ್ ಹೆಗಡೆ ಸೋಂದಾರವರು 18 ವರ್ಷ ಅಧ್ಯಯನ ನಡೆಸಿದ್ದಾರೆ. ಬನವಾಸಿ ಕದಂಬರ ಬಗ್ಗೆ ಅನೇಕ ಸಂಶೋಧನಾ ಕೃತಿಗಳನ್ನು ರಚಿಸಿರುವ ಇವರದು ವಸ್ತುನಿಷ್ಠ ಅಧ್ಯಯನ’ ಎಂದು ಇತಿಹಾಸ ಕೂಟದ ಸಂಚಾಲಕ ಎನ್.ಎಸ್.ಮಹಂತೇಶ್ ತಿಳಿಸಿದರು.
ಇತಿಹಾಸ ಕೂಟದ ನಿರ್ದೇಶಕ ಲಕ್ಷ್ಮಣ್ ತೆಲಗಾವಿ, ಡಾ.ದೊಡ್ಡಮಲ್ಲಯ್ಯ, ಸುರೇಶ್ ಬಂಡಾರಿ, ಡಿ.ಗೋಪಾಲಸ್ವಾಮಿ ನಾಯಕ ಇದ್ದರು.