ADVERTISEMENT

ಶಾಸಕ ಚಂದ್ರಪ್ಪರಿಂದ ಭೂಕಬಳಿಕೆ: ಎಚ್‌. ಆಂಜನೇಯ ಆರೋಪ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 0:17 IST
Last Updated 20 ಡಿಸೆಂಬರ್ 2025, 0:17 IST
ಎಚ್‌.ಆಂಜನೇಯ
ಎಚ್‌.ಆಂಜನೇಯ   

ಚಿತ್ರದುರ್ಗ: ‘ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು ಬಿ.ದುರ್ಗ ಹೋಬಳಿಯ ಹಿರೇಕಂದವಾಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯವರಿಗೆ ಸೇರಿದ 12 ಎಕರೆ ಭೂಮಿ ಕಬಳಿಸಿದ್ದಾರೆ. ಅದಕ್ಕೆ ಹೊಂದಿಕೊಂಡಿರುವ ಗುಡ್ಡದಲ್ಲಿ ಅಕ್ರಮವಾಗಿ ಕಬ್ಬಿಣದ ಅದಿರು ತೆಗೆದಿದ್ದಾರೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಆಂಜನೇಯ ಆರೋಪಿಸಿದರು.

‘ಎಸ್‌ಸಿ ಸಮುದಾಯಕ್ಕೆ ಮಂಜೂರಾಗಿದ್ದ ಜಮೀನು ಖರೀದಿ ಮಾಡುವುದು ಪರಿಶಿಷ್ಟ ಜಾತಿ–ಪಂಗಡಗಳ ಭೂಮಿ ವರ್ಗಾವಣೆ ನಿಷೇಧ (ಪಿಟಿಸಿಎಲ್‌) ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ವ್ಯಕ್ತಿಯೊಬ್ಬರ ಹೆಸರಿಗೆ ಮೊದಲು ನೋಂದಣಿ ಮಾಡಿಸಿ, ಖಾತೆ, ಪಹಣಿ ಪಡೆದು, ಅವರಿಂದ ತಮ್ಮ ಪುತ್ರ ಎಂ.ಸಿ.ದೀಪ್‌ಚಂದನ್‌ ಹೆಸರಿಗೆ ಈಚೆಗೆ ಪರಭಾರೆ ಮಾಡಿಸಿಕೊಂಡಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು. 

‘ಜಮೀನು ವಾಪಸು ಕೊಡಿಸುವಂತೆ ಮೂಲ ಮಂಜೂರಾತಿದಾರರ ಕುಟುಂಬದ ಸದಸ್ಯರು ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ದೂರು ಸಲ್ಲಿಸಿ ವರ್ಷವಾದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್‌) ಮಾಜಿ ಅಧ್ಯಕ್ಷ ಒ.ಶಂಕರ್‌ ಅವರು ಮುಖ್ಯಮಂತ್ರಿ, ಕೃಷಿ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ದೂರು ನೀಡಿದ್ದಾರೆ. ಆದರೂ ಕ್ರಮವಾಗಿಲ್ಲ’ ಎಂದು ದೂರಿದರು.

ADVERTISEMENT

‘ಸರ್ಕಾರಿ ಗುಡ್ಡದ ತಟದಲ್ಲಿ ಮನೆ, ಶೆಡ್‌, ತೊಟ್ಟಿ, ರಸ್ತೆ ನಿರ್ಮಿಸಿ ಅಕ್ರಮವಾಗಿ ಕಬ್ಬಿಣದ ಅದಿರು ತೆಗೆಯುತ್ತಿದ್ದಾರೆ. ಪ್ರಾಕೃತಿಕ ಸಂಪನ್ಮೂಲ ಲೂಟಿ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಈ ಬಗ್ಗೆ ತನಿಖೆ ನಡೆಸಿ ಗಣಿ ಚಟುವಟಿಕೆ ಸ್ಥಗಿತಗೊಳಿಸಬೇಕು. ಪರಿಶಿಷ್ಟ ಜಾತಿ ವ್ಯಕ್ತಿಯ ಹಕ್ಕು ರಕ್ಷಿಸಬೇಕು’ ಎಂದು ಒತ್ತಾಯಿಸಿದರು.

‘ಹಿರೇಕಂದವಾಡಿ ಗ್ರಾಮ ವ್ಯಾಪ್ತಿಯ ಸರ್ವೆ ನಂಬರ್‌ 98ರ ಗುಡ್ಡ ಪ್ರದೇಶದಲ್ಲಿ ಉತ್ಕೃಷ್ಟ ಕಬ್ಬಿಣದ ಅದಿರು ದೊರೆಯುತ್ತಿದೆ. ಇಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವ ಬಗ್ಗೆ ತಹಶೀಲ್ದಾರ್‌ ವರದಿ ಕೊಟ್ಟಿದ್ದಾರೆ. ಕಬ್ಬಿಣದ ಅದಿರು ತೆಗೆಯುವ ಉದ್ದೇಶದಿಂದಲೇ ಪರಿಶಿಷ್ಟ ಜಾತಿಯವರಿಗೆ ಸೇರಿದ ಜಮೀನು ಖರೀದಿ ಮಾಡಿದ್ದಾರೆ. ಜಿಲ್ಲಾಡಳಿತ ಕೂಡಲೇ ಜಮೀನಿನ ಖಾತೆ, ಪಹಣಿ ರದ್ದು ಪಡಿಸಿ ಬಡವರಿಗೆ ಜಮೀನು ಕೊಡಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ’ ಎಂದು ಲಿಡ್ಕರ್‌ ಮಾಜಿ ಅಧ್ಯಕ್ಷ ಒ.ಶಂಕರ್‌ ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.